ಹೆತ್ತ ತಾಯಿಗೆ ಹೆಗ್ಗಣ ಮುದ್ದು ಅಂತಾರೆ. ಆದರೆ ಇಲ್ಲೊಬ್ಬ ತಾಯಿ ತನ್ನ 11 ವರ್ಷದ ಮಗನನ್ನು ಕೊಂದು ಶವವನ್ನು ಕತ್ತರಿಸಿ ಸೂಟ್‍ಕೇಸ್‍ನಲ್ಲಿ ಕೊಂಡೊಯ್ಯುವಾಗ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾಳೆ.
ಹೌದು. ಗುಜರಾತ್‍ನ ಕುವಾದವಾ ನಿವಾಸಿಯಾಗಿರುವ ಸಕೀನಾ ತನ್ನ ಜೀವನ ನಿರ್ವಹಣೆಗೆ ಭಿಕ್ಷೆ ಬೇಡುತ್ತಿದ್ದಳು. ಆದರೆ ಎಷ್ಟೇ ಬಡತನವಿದ್ದರೂ ತನ್ನ ಮಗ ಸಲೀಮ್ ಪ್ರಾಮಾಣಿಕವಾಗಿರಬೇಕೆಂದು ಆಕೆ ಬಯಸಿದ್ದಳು. ಹಾಗಾಗಿ ಮಗ ಸಲೀಮ್‍ಗೆ ಹಲವು ಬಾರಿ ಪ್ರಾಮಾಣಿಕವಾಗಿರಲು ಬುದ್ದಿ ಹೇಳುತ್ತಿದ್ದಳು.
ಶುಕ್ರವಾರ ರಾತ್ರಿ 11 ಗಂಟೆಗೆ ಸಕೀನಾ ಸಲೀಂ ಕೈಯಲ್ಲಿ ಕೆಲವು ನೋಟುಗಳನ್ನು ನೋಡಿದ ತಾಯಿಗೆ ಮಗ ಈ ಹಣವನ್ನು ಕದ್ದಿರಬಹುದು ಎಂದುಕೊಂಡ ಆಕೆ ಸಿಟ್ಟಾಗಿ, ಪಕ್ಕದಲ್ಲೇ ಇದ್ದ ಕಬ್ಬಿಣದ ಪೈಪ್ ಕೈಗೆತ್ತಿ ಎಸೆದಿದ್ದಾಳೆ. ಅದು ನೇರವಾಗಿ ಸಲೀಂ ತಲೆಗೆ ಬಡಿದಿದ್ದು ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ.
ಇದರಿಂದ ಭಯಭೀತಳಾದ ಆಕೆ ತನಗೆ ಇನ್ನು ಜೈಲು ವಾಸ ಗ್ಯಾರಂಟಿ ಎಂದುಕೊಂಡಿದ್ದಾಳೆ. ಹೀಗಾಗಿ ಮಗನ ಹೆಣವನ್ನು ಹೇಗಾದರೂ ಸಾಗಹಾಕಬೇಕೆಂದು ಆಕೆ ಮನೆಯಲ್ಲೇ ಇದ್ದ ಸೂಟ್‍ಕೇಸ್ ತೆಗೆದು ಸಲೀಂ ಮೃತದೇಹವನ್ನು ಕತ್ತರಿಸಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆಯಲೆಂದು ಶನಿವಾರ ಬೆಳಗ್ಗೆ ಮನೆಯಿಂದ ಹೊರಟಿದ್ದಾಳೆ.
ಆದರೆ ಬೆಳ್ಳಂಬೆಳಗ್ಗೆ ಗಸ್ತಿನಲ್ಲಿದ್ದ ಪೊಲೀಸರಿಗೆ ಸಕೀನಾ ಚಲನವಲನ ಗಮನಿಸಿದಾಗ ಸಂಶಯ ಬಂದಿದ್ದು ಆಕೆಯನ್ನು ಅಡ್ಡ ಹಾಕಿದ ಪೊಲೀಸರು ಸೂಟ್‍ಕೇಸ್ ತೆರೆಯಲು ಹೇಳಿದ್ದಾರೆ. ಸೂಟ್‍ಕೇಸ್ ಓಪನ್ ಮಾಡುತ್ತಿದ್ದಂತೆ ಸಕೀನಾ ತಪ್ಪೊಪ್ಪಿಕೊಂಡು ಶರಣಾಗಿದ್ದು ಜೈಲುವಾಸ ಅನುಭವಿಸುತ್ತಿದ್ದಾಳೆ.