ಕರ್ನಾಟಕ

ರವಿ ನಿಗೂಢ ಸಾವಿನ ಪ್ರಕರಣ ಸಿಬಿಐಗೆ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ?

Pinterest LinkedIn Tumblr

siddu-ravi

ಬೆಂಗಳೂರು: ಪ್ರತಿಪಕ್ಷಗಳ ಹಾಗೂ ಸಾರ್ವಜನಿಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಮುಖ್ಯಮಂತ್ರಿ ಸಿದ್ದಾರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಬಳಿಕ ಸದನದಲ್ಲೇ ಸಿಎಂ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐ ವಹಿಸುವ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ರವಿ ಅವರ ನಿಗೂಢ ಸಾವಿನ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವುದರಿಂದ ಮತ್ತು ರಾಜ್ಯಾದ್ಯಾಂತ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸೂಚಿಸಿದ್ದಾರೆ ಮತ್ತು ಇದಕ್ಕೆ ಸಿಎಂ ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರಕರಣ ಮುಂದೆ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದ್ದು, ಒಂದು ವೇಳೆ ಕೋರ್ಟ್‌ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸೂಚಿಸಿದರೆ ಆಗ ಅನಿವಾರ್ಯವಾಗಿ ಸಿಬಿಐಗೆ ವಹಿಸಬೇಕಾಗುತ್ತದೆ. ಹೀಗಾಗಿ ಸೋಮವಾರದ ವೇಳೆಗೆ ರವಿ ನಿಗೂಢ ಸಾವಿನ ಕುರಿತ ಎಲ್ಲಾ ಅಂಶಗಳನ್ನು ಸಿಐಡಿ ತನಿಖೆಯ ಮೂಲಕ ಅರಿತುಕೊಳ್ಳುವುದು. ಅನಂತರ ಆ ಎಲ್ಲಾ ಅಂಶಗಳನ್ನು ಜನರ ಮುಂದಿಡಲು ಸರ್ಕಾರ ನಿರ್ಧರಿಸಿದೆ.

Write A Comment