ಕರ್ನಾಟಕ

ಸಿಬಿಐ ತನಿಖೆಗೆ ತಯಾರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಗಾಲು ಹಾಕಿದ ಸಚಿವ ಯಾರು..?

Pinterest LinkedIn Tumblr

Siddaramaiah

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐ ತನಿಖೆಗೆ ವಹಿಸಲು ಮುಂದಾಗಿದ್ದರೂ ಪ್ರಭಾವಿ ಸಚಿವರೊಬ್ಬರು ತಡೆ ಹಿಡಿದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಭಾನುವಾರ ಸಂಜೆ ಡಿ.ಕೆ.ರವಿ ಸಾವನ್ನಪ್ಪಿದ ನಂತರ ವಿಧಾನಮಂಡಲದ ಉಭಯಸದನ ಹಾಗೂ ರಾಜ್ಯದೆಲ್ಲೆಡೆ ಪ್ರತಿಭಟನೆ ಕಾವು ಜೋರಾಗಿತ್ತು. ಇದನ್ನರಿತ ಸಿದ್ದರಾಮಯ್ಯ ಸಿಬಿಐನಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಒಲವು ತೋರಿದ್ದರು.  ಆದರೆ, ಸಿದ್ದು ಸಂಪುಟದಲ್ಲಿರುವ ಬೆಂಗಳೂರು ಮೂಲದ ಪ್ರಭಾವಿ ಸಚಿವರೊಬ್ಬರು ಸಿಬಿಐ ತನಿಖೆ

ನಡೆಸಿದರೆ ತಮಗೆ ಗಂಡಾಂತರ ಬರಲಿದೆ ಎಂಬ ಭಯದಿಂದ ಒತ್ತಡ ಹಾಕಿ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಬೆಂಗಳೂರಿನವರಾದ ಈ ಸಚಿವರು ಎಐಸಿಸಿ ಮಟ್ಟದಲ್ಲಿ ತಮಗಿರುವ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ರವಿ ಅವರ ವ್ಯಕ್ತಿತ್ವದ ಬಗ್ಗೆ ವೈಯಕ್ತಿಕವಾಗಿ ತಿಳಿದುಕೊಂಡಿದ್ದ ಮುಖ್ಯಮಂತ್ರಿ ಈ ಸಾವಿನ ಬಗ್ಗೆ ಆಪ್ತರ ಬಳಿ ಕಂಬನಿ ಮಿಡಿದಿದ್ದರು. ಇಂತಹ ಪ್ರಾಮಾಣಿಕ ಅಧಿಕಾರಿ ಸಾವು ನಿಜಕ್ಕೂ ಸರ್ಕಾರಕ್ಕೆ ತುಂಬಲಾರದ ನಷ್ಟ ಎಂದು ಹೇಳಿಕೊಂಡಿದ್ದರು. ವಿರೋಧ ಪಕ್ಷಗಳು ಸಿಐಡಿ ತನಿಖೆಗೆ ಒಪ್ಪುವುದಿಲ್ಲ ಎಂಬುದನ್ನು ಮನಗಂಡಿದ್ದ ಸಿದ್ದರಾಮಯ್ಯ ಸಿಬಿಐನಿಂದಲೇ ತನಿಖೆಗೆ ಸಮ್ಮತಿಸಿ ಉಭಯ ಸದನಗಳಲ್ಲಿ ಇದನ್ನು ಘೋಷಣೆ ಮಾಡಲು ಸೋಮವಾರ ಮಾನಸಿಕವಾಗಿ ಸಿದ್ಧವಾಗಿದ್ದರು. ಆದರೆ, ಆ ವೇಳೆಗಾಗಲೇ ಈ ಪ್ರಭಾವಿ ಸಚಿವರು ಒಂದಿಷ್ಟು ಸಂಪುಟದ ಸಚಿವರು ಹಾಗೂ ಶಾಸಕರನ್ನು ಒಗ್ಗೂಡಿಸಿ ಸಿಬಿಐ ತನಿಖೆಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.  ವಿಧಿಯಿಲ್ಲದೆ ಸಿದ್ದರಾಮಯ್ಯ ಸೋಮವಾರ ವಿಧಾನಸಭೆಯಲ್ಲಿ ಸಿಐಡಿಯಿಂದಲೇ ರವಿ ಸಾವಿನ ಪ್ರಕರಣವನ್ನು ತನಿಖೆ ನಡೆಸುವ ಘೋಷಣೆ ಮಾಡಿದರು.

ಒತ್ತಡ: ಅಂದಹಾಗೆ ಸಿದ್ದು ಸಂಪುಟದಲ್ಲಿರುವ ಈ ಸಚಿವರು ಇಲಾಖೆ ಮೇಲೆ ಇಂದಿಗೂ ಹಿಡಿತ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಇವರ ಖಾತೆಯನ್ನು ಬದಲಾಯಿಸಬೇಕೆಂದು ಸಂಪುಟದ ಅನೇಕ ಸಚಿವರು ಮತ್ತು ಶಾಸಕರು ಅನೇಕ ಬಾರಿ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದ್ದರು.
ಸಿಬಿಐ ತನಿಖೆ ನಡೆದರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಗಂಡಾಂತರ ಬರಲಿದೆ ಎಂಬುದನ್ನು ಅರಿತ ಇವರು ಸಿಐಡಿಯಿಂದಲೇ ತನಿಖೆಗೆ ಪಟ್ಟು ಹಿಡಿದರು.  ರವಿ ಸಾವಿನ ಬಳಿಕ ಬಿಲ್ಡರ್ಸ್ರ , ರಿಯಲ್ ಎಸ್ಟೇಟ್ ಮಾಫಿಯಾಗಳು, ತೆರಿಗೆ ವಂಚಿತರು, ಚಿತ್ರಮಂದಿರಗಳ ಮಾಲೀಕರು, ಭೂ ಒತ್ತುವರಿದಾರರು, ಖಾಸಗಿ ಬಸ್ ಮಾಲೀಕರು ಈ ಸಚಿವರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ಒಪ್ಪದಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಬೇಕೆಂದು ಮನವಿ ಮಾಡಿದ್ದರು. ಪೂರ್ವಾಶ್ರಮದ ಋಣ ತೀರಿಸುವ ಉದ್ದೇಶದಿಂದ ಈ ಸಚಿವ ಸಿಎಂಗೆ ಒತ್ತಡ ಹಾಕಿಸಿ ಸಿಐಡಿ ತನಿಖೆಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

2 Comments

  1. Siddanna inna kiyali avaranna controll madoke agala ande give resignation. Dont spread this kind of news now and act like you are innocent.

Write A Comment