ಬೆಂಗಳೂರು: ರಾಜಧಾನಿ ಬೆಂಗಳೂರು ಬರೀ ಕಟ್ಟಡಗಳ ನಗರಿ ಅಷ್ಟೇ ಅಲ್ಲ. ಅಪಾಯಕಾರಿ ಧೂಳಿನ ನಗರಿಯೂ ಹೌದು!
ನಗರದಲ್ಲಿ ಜನರು ಒಳ್ಳೆಯ ಆಮ್ಲಜನಕ ಸೇವಿಸಿ ಆರೋಗ್ಯದಿಂದ ಬದುಕಬೇಕಾದರೆ ಗಾಳಿಯಲ್ಲಿ ಧೂಳಿನ ಪ್ರಮಾಣ 50 ಮೈಕ್ರೋ ಗ್ರಾಂ ಇರಬೇಕು. ಆದರೆ ಬೆಂಗಳೂರಿನಲ್ಲಿ 300 ಮೈಕ್ರೋ ಗ್ರಾಂ ಧೂಳು ವ್ಯಾಪಿಸಿರುತ್ತದೆ. ಇದರಿಂದ ಆಮ್ಲಜನಕದ ಕೊರತೆ ಉಂಟಾಗಲಿದ್ದು, ಜನತೆ ರೋಗಕ್ಕೆ ಸಿಲುಕುವುದು ಹೆಚ್ಚಾಗುತ್ತಿದೆ. ಇದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ ನೀಡಿದ ಎಚ್ಚರಿಕೆ ಸಂದೇಶ. ನಗರದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ `ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲ ಉಳಿಸಿ’ ಎಂಬ ವಿಷಯ ಕುರಿತ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಶುದ್ಧಗಾಳಿ ಕೂಡ ನೈಸರ್ಗಿಕ ಸಂಪನ್ಮೂಲವಾಗಿರುವುದರಿಂದ ಅದನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಬೇಕಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಪೀಳಿಗೆಗೇ ಉತ್ತಮ ಗಾಳಿ ಸಿಗುತ್ತಿಲ್ಲ. ಎಲ್ಲೆಡೆ ಮಾಲಿನ್ಯ ಹೆಚ್ಚಾಗುತ್ತಿದ್ದು, ಜನರು ಧೂಳಿನೊಂದಿಗೇ ಬದುಕುವಂತಾಗಿದೆ ಎಂದು ಅವರು ಹೇಳಿದರು. ಪ್ಲಾಸ್ಟಿಕ್ ಬಳಕೆ, ಕಸ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಮಾಹಿತಿ ನೀಡಲು ಮಂಡಳಿಯಿಂದ ಪರಿಸರ ಮಿತ್ರ ಶಾಲೆ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಮಂಡಳಿಯ 34 ಕಚೇರಿಗಳ ಸಿಬ್ಬಂದಿ ಸುಮಾರು 7 ಲಕ್ಷ ಮಕ್ಕಳನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಮಾಜಿ ಅಧ್ಯಕ್ಷ ಎಂ.ಆರ್.ದೊರೆಸ್ವಾಮಿ ಮಾತನಾಡಿ, ನಮ್ಮದೇ ಆದ ಪಿಇಎಸ್ ವಿದ್ಯಾಸಂಸ್ಥೆಯಿಂದ 22,000 ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ತೊಡಗುವಂತೆ ಮಾಡಲಾಗುವುದು. ಹಾಗೆಯೇ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಕ್ರಮಗಳಿಗೂ ಕೈಜೋಡಿಸಲಾಗುವುದು ಎಂದರು. ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ವಿಜಯಕುಮಾರ್, ಸದಸ್ಯ ಲಕ್ಷ್ಮೀಕಾಂತ್ ಹರ್ತಿಕೋಟೆ, ಮುಖ್ಯ ಪರಿಸರ ಅಧಿಕಾರಿ ನಂದಕುಮಾರ್, ಹಿರಿಯ ಪರಿಸರ ಅಧಿಕಾರಿ ಎ.ರಮೇಶ್, ಪರಿಸರ ಅಧಿಕಾರಿ ಕೆ.ಬಿ.ಕೋಟ್ರೆಶ್ ಹಾಜರಿದ್ದರು.
ವಿಶ್ವದಾಖಲೆ
ಒಂದೇ ವಿಚಾರದ ಬಗ್ಗೆ 23,000 ವಿದ್ಯಾರ್ಥಿಗಳು ಪ್ರಬಂಧ ಬರೆದು ದಾಖಲೆ ನಿರ್ಮಿಸಿದ್ದು, ಇಂಥ ಸಾಧನೆಗೆ ಕಾರಣರಾದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಿರಾಕಲ್ ಎಂಬ ಸಂಸ್ಥೆ ಪ್ರಶಸ್ತಿ ನೀಡಿದೆ. ಒಂದೇ ವಿಚಾರದ ಬಗ್ಗೆ ಹೆಚ್ಚು ಮಂದಿ ಪ್ರಬಂಧ ಬರೆದಿರುವ ದಾಖಲೆಗಳನ್ನು ನೋಡಿದಾಗ 7,000 ಮಕ್ಕಳು ಪ್ರಬಂಧ ಬರೆದಿರುವುದೇ ಇದುವರೆಗಿನ ದಾಖಲೆಯಾಗಿತ್ತು. ಇದನ್ನು ಮುರಿಯಲು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಪರಿಸರ ಜಾಗೃತ ಸಮಿತಿ ಜತೆಗೂಡಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದವು. 23,000 ವಿದ್ಯಾರ್ಥಿಗಳು ಕೇವಲ 35 ದಿನಗಳಲ್ಲಿ ಪ್ರಬಂಧ ಬರೆದರು. ಉತ್ತಮ ಪ್ರಬಂಧ ಬರೆದ ಕೆಲವರನ್ನು ಸಾಂಕೇತಿಕವಾಗಿ ಪುರಸ್ಕರಿಸಲಾಗಿದೆ ಎಂದು ಹಿರಿಯ ಪರಿಸರ ಅಧಿಕಾರಿ ಎ.ರಮೇಶ್ ಹೇಳಿದರು.