ಬೆಂಗಳೂರು, ಮಾ.16: ಯಾರೇ ಯಾವುದೇ ಕಾಯಿಲೆಯಿಂದ ಮೃತಪಟ್ಟರು ಅದು ಎಚ್1ಎನ್1 ಕಾಯಿಲೆಯಿಂದ ಎಂದು ವರದಿಯಾಗುತ್ತದೆ. ಇದು ನನ್ನ ಗ್ರಹಚಾರವಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ವಿಧಾನ ಪರಿಷತ್ನಲ್ಲಿ ಅಲವತ್ತುಕೊಂಡರು.
ವಿವಿಧ ಕಾರಣಗಳಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳು ಸಾವನ್ನಪ್ಪುತ್ತಾರೆ. ಆದರೆ ಎಲ್ಲದಕ್ಕೂ ಎಚ್1ಎನ್1 ಕಾರಣ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಡಾ.ಪರಮೇಶ್ ನೇತೃತ್ವದಲ್ಲಿ ಆಡಿಟ್ ಸಮಿತಿ ರಚಿಸಲಾಗಿದ್ದು , ಎಲ್ಲ ಆಸ್ಪತ್ರೆಗಳಲ್ಲಿ ರೋಗಿಗಳು ಯಾವ ಯಾವ ಕಾರಣಕ್ಕೆ ಸಾವನ್ನಪ್ಪುತ್ತಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಸೂಚಿಸಿದ್ದೇವೆ ಎಂದು ಹೇಳಿದರು. ಎಚ್1ಎನ್1 ಕಾಯಿಲೆಗೆ ಸಂಬಂಧಿಸಿದಂತೆ ಜನರು ಜಾಗೃತರಾಗಬೇಕಾಗಿದೆ. ಈ ಕಾಯಿಲೆಗೆ ರಾಜ್ಯಾದ್ಯಂತ ಒಂದೇ ರೀತಿಯ ಔಷಧಿ ನೀಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಸಂಶೋಧನಾಲಯಗಳಿಗೆ ಶುಲ್ಕ ನಿಗದಿ:ಮಾರಕ ರೋಗ ಎಚ್1ಎನ್1 ಕಾಯಿಲೆ ಪರೀಕ್ಷೆಗೆ ಖಾಸಗಿ ಆಸ್ಪತ್ರೆಯ ಲ್ಯಾಬ್ಗಳ ಶುಲ್ಕವನ್ನು 2500 ರೂ. ನಿಗದಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿಮಲಾಗೌಡ, ಡಿ.ರಾಮಕೃಷ್ಣ, ರಘುನಾಥ್ ಮಲ್ಹಾಪುರೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಚ್1ಎನ್1 ಕಾಯಿಲೆಗೆ ತುತ್ತಾಗಿ ಈವರೆಗೆ 65 ಜನ ಮೃತಪಟ್ಟಿದ್ದಾರೆ. ಶೋಂಕಿತ ರೋಗಿಗಳಿಗೆ ಅನವಶ್ಯಕವಾದ ಎಲ್ಲಾ ಚಿಕಿತ್ಸಾ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಔಷಧಿಗಳನ್ನು ಖಾಸಗಿ ಆಸ್ಪತ್ರೆಗಳಿಗೂ ಒದಗಿಸಲಾಗಿದೆ. ಬೆಂಗಳೂರು ಹಾಗೂ ಮಣಿಪಾಲ್ನಲ್ಲಿ ಉಚಿತವಾಗಿ ಲ್ಯಾಬ್ಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ 2500 ರೂ. ನಿಗದಿ ಮಾಡಲಾಗಿದೆ. ಯಾವುದೇ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರಿಗೆ ಪರಿಹಾರ ನೀಡಲು ಅವಕಾಶ ಇಲ್ಲ ಎಂದು ಖಾದರ್ ಸ್ಪಷ್ಟಪಡಿಸಿದರು.
