ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಕೊಲೆ ಯಾದ ನಗರದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಭಾ ಅರುಣ್‌ಕುಮಾರ್ (41) ಅವರ ಶವವನ್ನು ಶನಿವಾರ ರಾತ್ರಿ ನಗರಕ್ಕೆ ತರಲಾಯಿತು.
ಕೊಲೆ ಘಟನೆ ಬಳಿಕ ಆಸ್ಟ್ರೇಲಿಯಾಕ್ಕೆ ಹೋಗಿದ್ದ ಪ್ರಭಾ ಅವರ ಪತಿ ಅರುಣ್‌ಕುಮಾರ್ ಅವರು ರಾತ್ರಿ 10 ಗಂಟೆ ಸುಮಾರಿಗೆ ‘ಸಿಂಗಪುರ ಏರ್‌ಲೈನ್ಸ್’ ವಿಮಾನದ ಮೂಲಕ ನಗರಕ್ಕೆ ಶವ ತೆಗೆದುಕೊಂಡು ಬಂದರು.
ನಂತರ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್) ಚಂದ್ರಾಲೇಔಟ್ ಬಳಿಯ ಬಾಪೂಜಿ ಲೇಔಟ್‌ನಲ್ಲಿರುವ ಅರುಣ್‌ಕುಮಾರ್ ಅವರ ಸಂಬಂಧಿ ಜಯಚಂದ್ರ ಅವರ ಮನೆಗೆ ಶವ ಕೊಂಡೊಯ್ಯಲಾಯಿತು.
‘ಜಯಚಂದ್ರ ಅವರ ಮನೆಯಲ್ಲಿ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಅರುಣ್‌ಕುಮಾರ್ ಅವರ ತಮ್ಮ ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಂತಿಮ ದರ್ಶನದ ನಂತರ ಪ್ರಭಾ ಅವರ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಅಮ್ಟೂರು ಗ್ರಾಮಕ್ಕೆ ಶವ ಕೊಂಡೊಯ್ಯಲಾಗುತ್ತದೆ. ಅಮ್ಟೂರು ಗ್ರಾಮದಲ್ಲಿ ಭಾನುವಾರ ಸಂಜೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.