ಕರ್ನಾಟಕ

ನೀರಾವರಿಗೆ ₨12,956 ಕೋಟಿ

Pinterest LinkedIn Tumblr

pvec14marcAlamatti dam 2

ಬೆಂಗಳೂರು: ಭಾರಿ, ಮಧ್ಯಮ ನೀರಾವರಿ ಹಾಗೂ ಸಣ್ಣ ನೀರಾವರಿ ಸೇರಿ ಒಟ್ಟಾರೆಯಾಗಿ ಜಲ ಸಂಪನ್ಮೂಲ ಇಲಾಖೆಗೆ ಈ ಬಜೆಟ್‌ನಲ್ಲಿ ₨12,956 ಕೋಟಿ ನೀಡಲಾಗಿದೆ. ಕಳೆದ ವರ್ಷಕ್ಕೆ  (₨11,349 ಕೋಟಿ) ಹೋಲಿಸಿದರೆ ಈ ವರ್ಷದ ಹಂಚಿಕೆಯಲ್ಲಿ ₨1,607 ಕೋಟಿ ಹೆಚ್ಚಳವಾಗಿದೆ.

ಕೃಷ್ಣಾ  ಮೇಲ್ದಂಡೆ ಯೋಜನೆಯ ಮೂರನೇ ಹಂತ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಈ ಯೋಜನೆಯ 8 ಉಪ ಯೋಜನೆಗಳಾದ ಮುಳವಾಡ, ಚಿಮ್ಮಲಗಿ, ಇಂಡಿ, ಮಲ್ಲಾಬಾದ್, ರಾಂಪುರ, ಕೊಪ್ಪಳ ಹಾಗೂ ಹೆರಕಲ್ ಏತ ನೀರಾವರಿ ಮತ್ತು ನಾರಾಯಣಪುರ ಬಲದಂಡೆ ಕಾಲುವೆಯ ವಿಸ್ತರಣಾ ಯೋಜನೆಗಳ ಕಾಮಗಾರಿಗಳನ್ನು ತೀವ್ರಗೊಳಿಸಲಾಗುತ್ತದೆ.

₨5,768 ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳ್ಳುತ್ತಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಅಡಿಯಲ್ಲಿ ಬಳ್ಳಾರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ 48,381 ಎಕರೆ ಪ್ರದೇಶಕ್ಕೆ ಹರಿ ನೀರಾವರಿ ಮತ್ತು  2,16,848 ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸುವ ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಇತರ ಅಂಶಗಳು
*ಕೆಲವು ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಬೆಳೆಗೆ ಹನಿ ನೀರಾವರಿ  ಪದ್ಧತಿ ಪ್ರಾಯೋಗಿಕವಾಗಿ ಅಳವಡಿಕೆ
*ರಾಜ್ಯದ ಬರಪೀಡಿತ ಜಿಲ್ಲೆಗಳಾದ ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 12 ಯೋಜನೆಗಳ ಅಡಿಯಲ್ಲಿ 17.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆ
*ಹೇಮಾವತಿ ಮತ್ತು ಕಬಿನಿ ಅಣೆಕಟ್ಟೆಯ ಕೆಳಭಾಗದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಉದ್ಯಾನವನಗಳ ನಿರ್ಮಾಣ
*ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ಮತ್ತು ಕಸಬಾ ಹೋಬಳಿ ಏತನೀರಾವರಿ ಯೋಜನೆ ₨267 ಕೋಟಿ ವೆಚ್ಚದಲ್ಲಿ ಎರಡು ಹಂತಗಳಲ್ಲಿ  ಜಾರಿ. ಚನ್ನಗಿರಿ, ಮಾಯಕೊಂಡ, ಹೊನ್ನಾಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ 77 ಕೆರೆಗಳನ್ನು ತುಂಗಭಧ್ರಾ ನದಿ ನೀರಿನಿಂದ ತುಂಬಿಸಲು ₨ 50 ಕೋಟಿಯ ಯೋಜನೆ
*ಬಾಗಲಕೋಟೆ, ಚಿತ್ರದುರ್ಗ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ನೈಸರ್ಗಿಕ ನದಿಕೊಳ್ಳಗಳಿಗೆ ಅಡ್ಡಲಾಗಿ ಕಿರು ಅಣೆಕಟ್ಟ ನಿರ್ಮಾಣಕ್ಕೆ ₨100 ಕೋಟಿ
*“ಕೆರೆ ಅಭಿವೃದ್ಧಿ-ನಾಡಿನ ಶ್ರೇಯೋಭಿವೃದ್ಧಿ” ಕಾರ್ಯಕ್ರಮದಡಿ ₨ 192.30 ಕೋಟಿ  ವೆಚ್ಚದಲ್ಲಿ 191 ಕೆರೆಗಳ ಸಮಗ್ರ ಅಭಿವೃದ್ಧಿ ಕಾರ್ಯ ಮುಂದುವರಿಕೆ
*ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಕೆರೆಗಳಿಗೆ ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಿ ತುಂಬಿಸುವ ಮತ್ತು  ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ  60 ಕೆರೆಗಳಿಗೆ ದಕ್ಷಿಣ ಪಿನಾಕಿನಿ ನದಿಗೆ ಹರಿಯುತ್ತಿರುವ ಬೆಂಗಳೂರು ನಗರದ ಸಂಸ್ಕರಿಸಿದ ಕೊಳಚೆ ನೀರನ್ನು ತುಂಬಿಸಲು ಮುತ್ತಸಂದ್ರ ಗ್ರಾಮದ ಸಮೀಪ ಏತ ನೀರಾವರಿ ಯೋಜನೆ.

Write A Comment