ಕರ್ನಾಟಕ

ಗುಡ್ಡದ ಮೇಲೆ ಟಿಪ್ಪು ಚರಿತೆ…

Pinterest LinkedIn Tumblr

kdec17 dyavanooru3

ಕಲೆ, ಸಾಹಿತ್ಯ, ಸಂಸ್ಕೃತಿ, ಪ್ರಕೃತಿ ಸೌಂದರ್ಯ, ಇತಿಹಾಸವನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ರಮ್ಯತಾಣ ಸಕಲೇಶಪುರದಿಂದ ಆಗ್ನೇಯಕ್ಕೆ ಬೆಂಗಳೂರು -ಮಂಗಳೂರು ರಸ್ತೆಯಲ್ಲಿ ಆರು ಕಿ.ಮೀ ಪಯಣಿಸಿದರೆ ಸಿಗುವ ಗುಡ್ಡವೇ ‘ಅಡಾಣಿ ಗುಡ್ಡ’.
ಇದು ಸಮುದ್ರಮಟ್ಟದಿಂದ 3,393 ಅಡಿಗಳ ಎತ್ತರದಲ್ಲಿದ್ದು, ಇದರ ಮೇಲೆ ಮಂಜರಾಬಾದ್ ಕೋಟೆಯನ್ನು ನಿರ್ಮಿಸಲಾಗಿದೆ. ಈ ಕೋಟೆಯನ್ನು ‘ಕೋಣೆಯ ಕೋಟೆ’ ಎಂದೂ ಕರೆಯುತ್ತಾರೆ. ಈ ಕೋಟೆಯು ಅಷ್ಟಕೋನಾಕೃತಿಯ ನಕ್ಷತ್ರಾಕಾರದ ರಚನೆಯುಳ್ಳ ವಿಶಿಷ್ಟ ತಂತ್ರವನ್ನೊಳಗೊಂಡಿರುವುದು ವಿಶೇಷ.
1669ರಲ್ಲಿ ಬ್ರಿಟಿಷರು ಪ್ರಪ್ರಥಮವಾಗಿ ಕಲ್ಕತ್ತಾದಲ್ಲಿ ಕಟ್ಟಿಸಿದ ಕೋಟೆಯ ಸ್ಫೂರ್ತಿಯಿಂದ ಅಡಾಣಿ ಗುಡ್ಡದ ಮೇಲೆ ಟಿಪ್ಪು ಸುಲ್ತಾನ್ ಈ ಕೋಟೆ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಬ್ರಿಟಿಷ್ ಸೈನ್ಯದ ಜನರಲ್ ಮ್ಯಾಥ್ಯೂಸನಿಗೂ ಟಿಪ್ಪುವಿಗೂ ಅನೇಕ ಬಾರಿ ಹಣಾಹಣಿ ನಡೆಯುತಿತ್ತು. ಅವರ ಮೇಲೆ 1783ರಲ್ಲಿ ವಿಜಯಿಯಾದ ಅದೇ ವರ್ಷದಲ್ಲಿ ಬ್ರಿಟಿಷರ ಇನ್ನೊಂದು ಸೈನ್ಯ ಕರ್ನಲ್ ಕ್ಯಾಂಬೆಲ್‌ನ ಕೈಕೆಳಗೆ ಬಂದು ಮಂಗಳೂರನ್ನು ವಶಪಡಿಸಿಕೊಂಡಿತ್ತು.
ಆಗ ನಡೆದ ಯುದ್ಧದ ನಂತರ ಮಂಗಳೂರು ಹಾಗೂ ಹೊನ್ನಾವರವು ವಿಜಯಿಯಾದ ಟಿಪ್ಪುವಿನ ವ್ಯಾಪ್ತಿಗೆ ಬಂದವು. ಆಗಾಗ ಆಕ್ರಮಣ ಮಾಡುತ್ತಿದ್ದ ಬ್ರಿಟಿಷರನ್ನು ನಿಯಂತ್ರಿಸಲು ಶ್ರೀರಂಗಪಟ್ಟಣ, ಮಂಗಳೂರು ನಡುವೆ ಒಂದು ಸೈನ್ಯದ ಕೋಟೆ ತೀರಾ ಅನಿವಾರ್ಯವಾಯಿತು. ಆಗ ನಿರ್ಮಾಣವಾದದ್ದೇ ಈ ಕೋಟೆ.
ಹೊಸ ಹೆಸರು
ಮೊದಲು ಈ ಕೋಟೆಯನ್ನು ಅಡಾಣಿ ಗುಡ್ಡ ಕೋಟೆ ಎನ್ನಲಾಗುತ್ತಿತ್ತು. ಈ ಕೋಟೆಯ ಮೇಲೆ ನಿಂತ ಟಿಪ್ಪು ಸೂರ್ಯೋದಯದ ರಮಣೀಯ ದೃಶ್ಯ ಕಂಡು ‘ಓಹೋ ಮಂಜರ್’ ಎನ್ನುತ್ತಿದ್ದ. ಮಂಜರ್ ಎಂದರೆ ಅರಬ್ಬೀ ಭಾಷೆಯಲ್ಲಿ ‘ರಮಣೀಯ ನೋಟ’ ಎಂದು. ಆದ್ದರಿಂದ ಇದಕ್ಕೆ ‘ಮಂಜರಾಬಾದ್’ ಎಂದು ಹೆಸರು ಬಂತು. ಈ ಕೋಟೆಯ ನಿರ್ಮಾಣ ಕ್ರಿ.ಶ 1784ರಲ್ಲಿ ಆರಂಭವಾಗಿ ಕ್ರಿ.ಶ 1792ರಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಪರ್ಷಿಯನ್ ಶಾಸನ ಹೇಳುತ್ತದೆ.
ರಾಷ್ಟೀಯ ಹೆದ್ದಾರಿ (ಬೆಂಗಳೂರು-ಮಂಗಳೂರು) ಪಕ್ಕದಲ್ಲಿಯೇ 225 ಅಡಿಗಳ ಎತ್ತರದಲ್ಲಿರುವ ಅಡಾಣಿ ಗುಡ್ಡದ ಮೇಲೆ ಕಾಣಿಸುವ ಈ ಕೋಟೆ ಸುಮಾರು 30 ಎಕರೆಯಷ್ಟು ವಿಸ್ತೀರ್ಣವಿದೆ. ಇದರ ನೆತ್ತಿಯ ಮೇಲೆ 350/350 ಅಡಿ ವಿಸ್ತಾರದ ನಕ್ಷತ್ರಾಕಾರದ ಕೋನಗಳಿವೆ. ಕೋಟೆಯ ಹೊರಸುತ್ತಿನಲ್ಲಿ 18/12 ಅಡಿ ಆಳದ ಕಲ್ಲು ಹಾಸಿನ ಕಂದಕ ಕಟ್ಟಲಾಗಿದೆ.
ಅದರೊಳಗೆ ನೀರು ಬಸಿದು ಹೊರಗೆ ಹೋಗುವಂತೆ ಚರಂಡಿ ವ್ಯವಸ್ಥೆಯಿದೆ. ಎಂಟು ಮೂಲೆಯ ನಕ್ಷತ್ರಾಕಾರದ ಕೋಟೆ ಇದಾಗಿದ್ದು, 86 ಅಡಿ ಉದ್ದ 16 ಬಾಹುಗಳನ್ನು ಒಳಗೊಂಡಿದೆ. ಕೋಟೆಯ ಪ್ರತಿಯೊಂದು ಕೋನಕ್ಕೆ ತಲಾ 5ರಂತೆ 40 ಫಿರಂಗಿ ಬಾಯಿಗಳಿವೆ. ಇದರಲ್ಲಿ ಫಿರಂಗಿಗಳನ್ನು 60 ರಿಂದ 120 ಡಿಗ್ರಿಗಳ ಅಂತರದಲ್ಲಿ ತಿರುಗಿಸುತ್ತಾ ಪ್ರಯೋಗಿಸಬಹುದು.
ಕೋಟೆಯಲ್ಲಿರುವ ಒಂಬತ್ತು ಕೊತ್ತಲಗಳಲ್ಲೂ ಬಂದೂಕಿನ ಕಿಂಡಿಗಳಿವೆ. 15 ಅಡಿ ಅಗಲದ ರ್‌್ಯಾಂಪ್ ಕೋಟೆಯ ಒಳಭಾಗದಲ್ಲಿದ್ದು, ಇದನ್ನು ಹತ್ತಲು ತಲಾ ಒಂದು ಇಳಿಜಾರು ಹಾದಿ ಹಾಗೂ ಮೆಟ್ಟಿಲಿನ ಹಾದಿ ಇದೆ.
ಇತಿಹಾಸದ ಪುಟಗಳಲ್ಲಿ…
ಇತಿಹಾಸ ತಜ್ಞ ಶ್ರೀವತ್ಸ ಎಸ್.ವಟಿಯವರು ಈ ಕೋಟೆಯ ಮೇಲೆ ಸಂಶೋಧನೆಯನ್ನು ಮಾಡಿದ್ದು ಇವರ ಪ್ರಕಾರ ಇಡೀ ಕೋಟೆಯ ಎಂಟು ಮೂಲೆಗಳು ಎಂಟು ದಿಕ್ಕುಗಳಿಗೆ ಚಾಚಿದ್ದು ಪ್ರತಿಯೊಂದು ಮೂಲೆಯೂ ಅತ್ಯಂತ ನಿಖರವಾಗಿ ಒಂದೊಂದು ಕಾಂತೀಯ ದಿಕ್ಕುಗಳನ್ನು ಪ್ರತಿನಿಧಿಸುತ್ತದೆ. ಈ ರೀತಿ ಇಡೀ ಕೋಟೆಯೇ ಒಂದು ದಿಕ್ಸೂಚಿಯಂತಿದೆ ಹಾಗೂ ಕೋಟೆ ಮಧ್ಯೆ ‘+’ ಆಕಾರದ ಬಾವಿ ಇದೆ. ಇದರ ಕೆಂದ್ರವೇ ಇಡೀ ಕೋಟೆಯ ಕೇಂದ್ರಬಿಂದು.
ಈ ಕೋಟೆಯಿಂದ ಎಳೆದ ವೃತ್ತವು ಕೋಟೆಯ 8 ತುದಿಗಳನ್ನು ಹಾಯುತ್ತದೆ ಹಾಗೂ ಅತಿ ನಿಖರವಾದ ಅಳತೆಯ ಬಿಂದುಗಳಲ್ಲಿ ಈ ಕೋಟೆಯ ಕೊತ್ತಲಗಳನ್ನು ಕಟ್ಟಲಾಗಿದೆ. ಹಾಗೆಯೇ ಇನ್ನೊಂದು ಚಿಕ್ಕ ವೃತ್ತವನ್ನು ಎಳೆದರೆ ಅದು ಕೋಟೆಯ ಒಳ ಮೂಲೆಗಳನ್ನು ಹಾಯುತ್ತದೆ. ಹೀಗೆ ಕೋಟೆಯ ಒಳಗಡೆ ಬಾವಿಯ ಸುತ್ತ ಕಟ್ಟಲಾದ ಮದ್ದಿನ ಮನೆ, ಒಣಗಿಸುವ ಕಟ್ಟೆ ಮುಂತಾದ ಎಲ್ಲ ಕಟ್ಟಡಗಳನ್ನು ರೇಖಾಗಣಿತ ಸೂತ್ರದ ಪ್ರಕಾರ ನಿಖರವಾದ ಬಿಂದುಗಳಲ್ಲಿ ಕಟ್ಟಲಾಗಿದೆ.
ಈ ರೀತಿ ವಿಶಿಷ್ಟವಾದ ರಚನಾ ತಂತ್ರವನ್ನು ಕ್ರಿ.ಶ 1644ರಲ್ಲಿ ಮದ್ರಾಸಿನಲ್ಲಿ ಪ್ರಥಮ ಬಾರಿಗೆ ಪ್ರಯೋಗಿಸಲಾಗಿದೆ. 1696ರಲ್ಲಿ ಕಲ್ಕತ್ತಾದಲ್ಲೂ ಈ ಶೈಲಿ ಬಳಕೆಯಾಗಿದೆ. ಅಡಾಣಿಯ ಗುಡ್ಡದ ಪೂರ್ವದಿಕ್ಕಿನಲ್ಲಿ ಕೋಟೆಯ ಕೆಳಹಂತದಿಂದ 900 ಡಿಗ್ರಿಯಲ್ಲಿ ರಚಿತವಾದ 252 ಮೆಟ್ಟಿಲುಗಳನ್ನು ಏರಿದರೆ ಹಿಂದೂ ಮತ್ತು ಮುಸ್ಲಿಂ ಶೈಲಿಯಲ್ಲಿರುವ ಮೊದಲನೆಯ ದ್ವಾರವನ್ನು ನೋಡಬಹುದಾಗಿದೆ.
ಹೊರಗಿನವರನ್ನು ಒಳಗೆ ಬಿಡುವಾಗ, ತಪಾಸಣೆ ಮಾಡಲೆಂದು ಪರಿವೀಕ್ಷಣಾ ಕೊಠಡಿಗಳಿವೆ. ಇದರ ಮುಂದೆ ಸಾಗಿದರೆ 2ನೇ ದ್ವಾರ ಸಿಗುತ್ತದೆ. ಈ ದ್ವಾರದಿಂದ ನೇರವಾಗಿ ಒಳ ಪ್ರವೇಶಿಸಲು ಒಂದು ಗುಪ್ತ ಮಾರ್ಗ ಸಹ ಇದೆ. ಪ್ರವೇಶ ದ್ವಾರವನ್ನು ಹುಲಿಯ ಪಟ್ಟೆಗಳಿಂದ ಅತ್ಯಾಕರ್ಷಕವಾಗಿ ಕೆತ್ತಲಾಗಿದೆ. ಛಾವಣಿಯಲ್ಲಿ ಕೋಟೆಯ ನೀಲನಕ್ಷೆಯನ್ನು ಬಿಡಿಸಲಾಗಿದೆ. ಕೋಟೆಯಲ್ಲಿರುವ ಎಂಟು ಬುರುಜಗಳ ಒಳಗಿನಿಂದ ನಾಲ್ಕು ದಿಕ್ಕಿನಲ್ಲಿಯೂ ಕೋವಿಯಿಂದ ವೈರಿಯನ್ನು ಸದೆ ಬಡೆಯುವ ವ್ಯವಸ್ಥೆ ಮಾಡಲಾಗಿದೆ. ಈ ಬುರುಜುಗಳನ್ನು ಹಿಂದೂ ಮುಸ್ಲಿಂ ಶೈಲಿಯಲ್ಲಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ.
ಕೋಟೆಯ ಒಳಾವರಣ ಸುಮಾರು 200 ಅಡಿಗಳಿಂದ ಕೂಡಿದ್ದು, ಕಮಾನು ಕಟ್ಟಡದ ಮೂಲೆಯಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡುತ್ತಿದ್ದ ಕೋಣೆಗಳನ್ನು ನೋಡಬಹುದಾಗಿದೆ. ಕೋಟೆಯ ಮಧ್ಯಬಿಂದುವಿನಲ್ಲಿ 40/40 ಅಡಿಗಳ ಅಳತೆಯ, ನಾಲ್ಕು ದಿಕ್ಕುಗಳಲ್ಲಿಯೂ ಮೆಟ್ಟಿಲಿರುವ ಕೊಳವಿದೆ. ಇದು 40 ಅಡಿಗಳ ಆಳವಿದೆ. ಇದರಲ್ಲಿ ನೀರನ್ನು ಸಂಗ್ರಹಿಸಿಡಲಾಗುತ್ತಿತ್ತು. ಈ ಕೊಳದ ಸ್ವಲ್ಪ ದೂರದಲ್ಲಿ ಪಿರಮಿಡ್ ಆಕೃತಿಯನ್ನು ಹೊಂದಿದ 10 ಅಡಿಗಳ ಮಳಿಗೆಯುಳ್ಳ ಮದ್ದು ಸಂಗ್ರಹಿಸಿಡುವ 2 ಮದ್ದಿನ ಕೋಣೆಗಳಿವೆ.

Write A Comment