ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸೋಮವಾರ ಬೆಳಿಗ್ಗೆ ಮೂರು ವರ್ಷದ ನಕುಲ್ ಮತ್ತು ಐದು ವರ್ಷದ ಗೋಕುಲ್ ಎಂಬ ಸಿಂಹಗಳು ಉದ್ಯಾನದ ಸಿಬ್ಬಂದಿ ಕೃಷ್ಣ (44) ಎಂಬುವರ ಮೇಲೆ ದಾಳಿ ನಡೆಸಿದೆ. ದಾಳಿಯಿಂದಾಗಿ ಕೃಷ್ಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
‘ಉದ್ಯಾನದ ಪ್ರಾಣಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಡಾ.ನಿರುಪಮ ನೇತೃತ್ವದ ವೈದ್ಯರ ತಂಡವು ರೋಗ ನಿರೋಧಕ ಚುಚ್ಚುಮದ್ದು ನೀಡು ತ್ತಿತ್ತು. ನಕುಲ್ ಇದ್ದ ಬೋನಿನ ಮೇಲ್ವಿಚಾರಣೆ ಮಾಡುತ್ತಿದ್ದ ಕೃಷ್ಣ, ಚುಚ್ಚುಮದ್ದು ನೀಡಲು ಸಹಾಯ ಮಾಡುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ’ ಎಂದು ಉದ್ಯಾನದ ನಿರ್ದೇಶಕ ರಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಕುಲ್ ಇದ್ದ ಮುಖ್ಯ ಬೋನಿಗೆ ಹೊಂದಿ ಕೊಂಡಂತೆ ಚಿಕಿತ್ಸೆ ನೀಡುವ ಬೋನಿದೆ. ಉದ್ಯಾನದ ಸಿಬ್ಬಂದಿ ಚಿಕಿತ್ಸೆ ನೀಡುವ ಬೋನಿನ ದ್ವಾರದ ಬಾಗಿಲು ತೆಗೆಯುವ ಬದಲಿಗೆ ವರಾಂಡಕ್ಕೆ ಹೋಗುವ ದ್ವಾರದ ಬಾಗಿಲು ತೆಗೆದಿದ್ದಾರೆ. ಆಗ ಹೊರಬಂದ ಸಿಂಹಗಳು, ದ್ವಾರದ ಬಳಿ ನಿಂತಿದ್ದ ಕೃಷ್ಣ ಅವರ ಮೇಲೆ ದಾಳಿ ನಡೆಸಿ ಹೊಟ್ಟೆ, ಕುತ್ತಿಗೆ ಮತ್ತು ಬೆನ್ನಿಗೆ ಕಚ್ಚಿದೆ’ ಎಂದು ಅವರು ತಿಳಿಸಿದರು.
ಇತರೆ ಸಿಬ್ಬಂದಿ ಸ್ಥಳಕ್ಕೆ ಬಂದು ಕೃಷ್ಣ ಅವರನ್ನು ರಕ್ಷಣೆ ಮಾಡಿದ್ದಾರೆ. ಕೂಡಲೇ ಅವರನ್ನು ಅಪೋಲೊ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು.
ಹದಿನೈದು ವರ್ಷಗಳಿಂದ ಕೆಲಸ: ಕಗ್ಗಲಿಪುರ ನಿವಾಸಿ ಕೃಷ್ಣ ಅವರು 15 ವರ್ಷಗಳಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ನಕುಲ್ ಇದ್ದ ಬೋನಿನ ಮೇಲ್ವಿಚಾರಣೆಯನ್ನು ಅವರೇ ನೋಡಿಕೊಳ್ಳುತ್ತಿದ್ದರು.
ವೆಚ್ಚ ಭರಿಸಲಾಗುವುದು
‘ಕೃಷ್ಣ ಅವರ ಚಿಕಿತ್ಸೆಗೆ ತಗಲುವ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸಲಾಗುವುದು’
–ರಂಗೇಗೌಡ, ಬನ್ನೇರುಘಟ್ಟ ಜೈವಿಕ ಉದ್ಯಾನದ ನಿರ್ದೇಶಕ
