ಕರ್ನಾಟಕ

ಮಳೆ: ಇನ್ನಿಬ್ಬರು ಬಲಿ

Pinterest LinkedIn Tumblr

pvec10315bjr2

ಹುಬ್ಬಳ್ಳಿ/ಮಂಗಳೂರು: ಉತ್ತರ ಕರ್ನಾಟಕದ ಹಲವೆಡೆ ಮತ್ತು ದಕ್ಷಿಣ ಕನ್ನಡ, ಕೊಡಗು, ಧಾರವಾಡ, ಬಳ್ಳಾರಿ ಜಿಲ್ಲೆ­ಗಳ ಕೆಲವೆಡೆ ಭಾನುವಾರ ರಾತ್ರಿ ಹಾಗೂ ಸೋಮ­ವಾರ ಸಂಜೆ ಮಳೆ ಮುಂದುವರಿದಿದ್ದು ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಯಾದವಾಡ ಗ್ರಾಮ­ದಲ್ಲಿ ಸುರಿವ ಮಳೆಯಲ್ಲೇ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಕುಳಿತಿದ್ದ ಮುತ್ತಪ್ಪ ಕಿವಡಿ (55) ಎಂಬುವವರು ಸಿಡಿಲು ಬಡಿದು ಮೃತಪಟ್ಟಿ­ದ್ದಾರೆ. ಬಳ್ಳಾರಿ ಜಿಲ್ಲೆಯ ಮರಿಯ­ಮ್ಮನಹಳ್ಳಿ ಬಳಿ ಸಿಡಿಲು ಬಡಿದು ಎಮ್ಮೆ­ಯೊಂದು ಮೃತಪಟ್ಟಿದೆ. ವಿಜಯ­ಪುರ ಜಿಲ್ಲೆಯಲ್ಲಿ ವಿವಿಧೆಡೆ ಸೋಮ­­­ವಾರ ಸಂಜೆಯೂ ಆಲಿಕಲ್ಲು ಮಳೆ ಸುರಿದಿದ್ದು, ಐದು ಕುರಿ ಬಲಿಯಾಗಿವೆ.

ದ್ರಾಕ್ಷಿ ತೋಟಗಳಿಗೆ ಹಾನಿ: ವಿಜಯಪುರ ಜಿಲ್ಲೆಯ ವಿವಿಧೆಡೆ ಶನಿವಾರ ಮತ್ತು ಭಾನುವಾರ ಬಿದ್ದ ಅಕಾಲಿಕ ಆಲಿಕಲ್ಲು ಮಳೆ–ಗಾಳಿಗೆ ವಿಜಯಪುರ ತಾಲ್ಲೂಕಿನ ತಿಕೋಟಾ, ಕನಮಡಿ, ಜಾಲಗೇರಿ ಸೇರಿದಂತೆ ಇಂಡಿ ತಾಲ್ಲೂಕು ಚಡಚಣ ಭಾಗದ ಗುಂದವಾನ, ಕಪನಿಂಬರಗಿ, ಹಳಗುಣಕಿ, ಜಳಕಿ, ಅಂಜೂ­ಟಗಿ, ಹೊರ್ತಿ, ಸಿಂದಗಿ ಪಟ್ಟಣದ ಹೊರ ವಲಯದ ದ್ರಾಕ್ಷಿ ತೋಟಗಳು ಹಾನಿ­ಗೀಡಾಗಿದ್ದು, ಅಪಾರ ನಷ್ಟ ಸಂಭವಿಸಿದೆ.

ಜಿಲ್ಲೆಯಲ್ಲಿ ಶೇ 70ರಷ್ಟು ದ್ರಾಕ್ಷಿ ಕೊಯ್ಲು ಮುಗಿದಿದೆ. ಗಾಳಿ–ಮಳೆಗೆ ಕೆಲ­ವೆಡೆ ನಷ್ಟ ಸಂಭವಿಸಿದೆ. ಅಧಿಕಾರಿ­ಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಳೆ ಮುಂದು­ವರಿದರೆ ಒಣ ದ್ರಾಕ್ಷಿ ಉದ್ಯಮಕ್ಕೆ ತೀವ್ರ ತೊಂದರೆಯಾಗಲಿದೆ ಎಂದು ತೋಟ­ಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ ತಿಳಿಸಿದರು.

ನೆಲ ಕಚ್ಚಿದ ಬಾಳೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಮಲಾಪುರ, ಸೀತಾರಾಮ ತಾಂಡಾ, ದೇವಲಾಪುರ, ಕಡ್ಡಿರಾಂಪುರ, ವೆಂಕಟಾಪುರ ಸುತ್ತಮುತ್ತ ಭಾನುವಾರ ರಾತ್ರಿ ಬಿದ್ದ ಮಳೆಗೆ ಬಾಳೆ ಬೆಳೆ ನೆಲ ಕಚ್ಚಿದ್ದು ಕಬ್ಬು, ಹತ್ತಿ, ಈರುಳ್ಳಿ, ಮೆಣಸಿನಕಾಯಿ ಮತ್ತಿತರ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಹೂವಿನ ಹಡಗಲಿ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ವಿವಿಧೆಡೆ ಶನಿವಾರ ರಾತ್ರಿ ಹಾಗೂ ಸೋಮವಾರ ಸುರಿದ ಅಲ್ಪ ಪ್ರಮಾಣದ ಮಳೆಯಿಂದಾಗಿ ಕಟಾವು ಹಂತದ ಕೃಷಿ ಬೆಳೆ ನೆಲ ಕಚ್ಚಿದೆ. ಬಳ್ಳಾರಿ ತಾಲ್ಲೂಕಿನಲ್ಲಿ 1500 ಎಕರೆಯಲ್ಲಿ ಬೆಳೆದು ನಿಂತ ಸಪೋಟಾ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲ್ಲಿ 4000 ಎಕರೆ ಪ್ರದೇಶದಲ್ಲಿ ಬೆಳೆದ ದಾಳಿಂಬೆ, 500 ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ನೆಲ ಕಚ್ಚುವ ಸಾಧ್ಯತೆ ಇದೆ. ಕಳೆದ ವರ್ಷ ಇದೇ ವೇಳೆ ಬಿದ್ದ ಆಲಿಕಲ್ಲು ಮಳೆಗೆ ಸಿಕ್ಕು ರೈತರ ಬೆಳೆ ನಾಶವಾಗಿತ್ತು.

ಮೀನುಗಾರರು ಕಂಗಾಲು: ಭಟ್ಕಳ ತಾಲ್ಲೂಕಿನ ತಲಗೋಡು ಪ್ರದೇಶದಲ್ಲಿ ವಾತಾವರಣದ ಏರುಪೇರಿ­ನಿಂದ ಸಮುದ್ರದಲ್ಲಿ ಭಾರಿ ಎತ್ತರದ ಅಲೆಗಳು ಎದ್ದಿರುವುದರಿಂದ ಮೀನು­ಗಾರರು ಕಂಗಾಲಾಗಿದ್ದು ಮೀನುಗಾರಿಕಾ ದೋಣಿಗಳನ್ನು ದಡಕ್ಕೆ ತರುತ್ತಿದ್ದ ದೃಶ್ಯ ಕಂಡುಬಂತು. ಸಮುದ್ರ ಕೊರೆತ ತೀವ್ರವಾಗಿರುವ ತಲಗೋಡು ಪ್ರದೇಶದಲ್ಲಿ ತಡೆ­ಗೋಡೆಯ ಕಲ್ಲುಗಳು ಅಲೆಗಳ ರಭಸಕ್ಕೆ ಸಮುದ್ರ ಪಾಲಾಗುತ್ತಿವೆ. ತಡೆಗೋಡೆ ಹತ್ತಿ ಮೇಲೆ ಬರುತ್ತಿದ್ದಾಗ ತಹಶೀಲ್ದಾರ್ ವಿ.ಎನ್. ಬಾಡಕರ್ ಬಿದ್ದು ಕೈಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆ ನೀಡಲಾಯಿತು.

ಗೋಪುರಕ್ಕೆ ಹಾನಿ: ಬಳ್ಳಾರಿ ಜಿಲ್ಲೆಯ ಕುರುಗೋಡಿನ ನೀಲಕಂಠಶ್ವರ ಸೇವಸ್ಥಾನದ ಗೋಪುರ ಸಿಡಿಲು ಬಡಿದು ಹಾನಿಗೊಂಡಿದೆ.

ಪೆರ್ಲದಲ್ಲಿ ಸಿಡಿಲು: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದ ಪೆರ್ಲ ಎಂಬಲ್ಲಿ ಸೋಮವಾರ ಸಿಡಿಲಿನ ಆಘಾತದಿಂದ ಸುರೇಂದ್ರ (25) ಸ್ಥಳದಲ್ಲೇ ಮೃತಪಟ್ಟರು. ಸಂಜೆ ಗುಡುಗು, ಮಿಂಚಿನ ಅಬ್ಬರದೊಂದಿಗೆ ಭಾರಿ ಮಳೆಯಾಗಿದ್ದು ಮನೆಯ ಸಮೀಪ ಸುರೇಂದ್ರ ಮತ್ತು ಇತರ ನಾಲ್ವರು ನಿಂತಿದ್ದರು. ಉಳಿದ ನಾಲ್ವರಿಗೂ ಆಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Write A Comment