ಕರ್ನಾಟಕ

H1N1ನಿಂದ ಮಹಿಳೆ ಸಾವು : ಆಸ್ಪತ್ರೆಗೆ ನುಗ್ಗಿ ಸಂಬಂಧಿಕರ ದಾಂಧಲೆ

Pinterest LinkedIn Tumblr

Jain-Hospital Bang

ಬೆಂಗಳೂರು, ಮಾ.7: ಮಹಾಮಾರಿ ಎಚ್1ಎನ್1ಗೆ ಯಲಹಂಕದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಜೈನ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಆಸ್ಪತ್ರೆಯ ಗಾಜನ್ನು ಜಖಂಗೊಳಿಸಿ ದಾಂಧಲೆ ನಡೆಸಿದ್ದಾರೆ. ಯಲಹಂಕ ನಿವಾಸಿ ಬಾಲಾಬೇಬಿ (55) ಎಚ್1ಎನ್1ನಿಂದ ಮೃತಪಟ್ಟ ಮಹಿಳೆ. ಹಲವಾರು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬೇಬಿಯವರನ್ನು ಕಳೆದ 14 ದಿನಗಳ ಹಿಂದೆ ವಸಂತನಗರದ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದು, ಈ ವಿಷಯ ತಿಳಿದ ಬೇಬಿ ಸಂಬಂಧಿಕರು ಆಸ್ಪತ್ರೆ ಮುಂದೆ ಜಮಾಯಿಸಿ ನಂತರ ಆಸ್ಪತ್ರೆಯ ಎರಡನೆ ಮಹಡಿಯಲ್ಲಿರುವ ಐಸಿಯು ಕೊಠಡಿಗೆ ನುಗ್ಗಿ ವೈದ್ಯರ ನಿರ್ಲಕ್ಷ್ಯದಿಂದ ಬೇಬಿಯವರು ಸಾವನ್ನಪ್ಪಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಕೆಲವು ಯಂತ್ರೋಪಕರಣಗಳನ್ನು ಜಖಂಗೊಳಿಸಿದ್ದಾರೆ.

ಸಂಬಂಧಿಕರ ಹೇಳಿಕೆ: ಕಳೆದ 14 ದಿನಗಳ ಹಿಂದೆ ಬೇಬಿಯವರನ್ನು ಜೈನ್ ಆಸ್ಪತ್ರೆಗೆ ದಾಖಲಿಸಿದ್ದು, ಅಂದಿನಿಂದ ಇಂದಿನವರೆಗೂ ಚೇತರಿಸಿಕೊಂಡಿರಲಿಲ್ಲ. ಯಥಾಸ್ಥಿತಿಯಲ್ಲೇ ಇದ್ದರು. ಇಂದು ಮುಂಜಾನೆ ಸಹ ಬೇಬಿಯವರು ನಮ್ಮ ಜತೆ ಮಾತನಾಡಿದ್ದಾರೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಕಾರಣ ಕೆಲ ಕ್ಷಣಗಳಲ್ಲೇ ಮೃತಪಟ್ಟಿದ್ದಾರೆಂದು ಆರೋಪಿಸಿದ್ದಾರೆ. ವೈದ್ಯರ ಸ್ಪಷ್ಟೀಕರಣ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಾಬೇಬಿಯವರನ್ನು ಕಳೆದ 14 ದಿನಗಳ ಹಿಂದೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೆವು. ಆದರೆ, ಸಂಬಂಧಿಕರು ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲು ನಿರಾಕರಿಸಿ ನಮಗೆ ತೊಂದರೆ ನೀಡಿದ್ದರು. ಇದರಿಂದ ರೋಗ ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Write A Comment