ಕರ್ನಾಟಕ

ಹಾಡುಹಗಲೇ ಝಳಪಿಸಿದ ಲಾಂಗು,ಮಚ್ಚು : ಕಾಂಗ್ರೆಸ್ ಮುಖಂಡನ ಕಗ್ಗೊಲೆ

Pinterest LinkedIn Tumblr

1

ಬೆಂಗಳೂರು,ಮಾ.3- ನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ಸದ್ದಡಗಿದ್ದ ರೌಡಿಗಳ ಲಾಂಗ್‌ಗಳು ಮತ್ತೆ ಝಳಪಿಸಿದ್ದು, ನಿನ್ನೆಯಷ್ಟೇ ರೌಡಿ ಭವಾನಿಯನ್ನು ಕೊಚ್ಚಿ ಕೊಂದಿದ್ದ ಘಟನೆ ಬೆನ್ನಲ್ಲೇ ಇಂದು ಮತ್ತೆ ಬೆಳ್ಳಂಬೆಳಗ್ಗೆ ರಾಜಕಾರಣಿಯೊಬ್ಬರನ್ನು ನಡುರಸ್ತೆಯಲ್ಲೇ ಭೀಕರವಾಗಿ ಕೊಲೆ ಮಾಡಲಾಗಿದೆ.

ನಗರ ಹೊರವಲಯದ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ನಟರಾಜ್(40) ಕೊಲೆಯಾದ ಮುಖಂಡ. ಪೀಣ್ಯ 2ನೇ ಹಂತದ ನಿವಾಸಿಯಾಗಿದ್ದ ನಟರಾಜ್ ತಿಗಳರ ಪಾಳ್ಯದ ಮುಖ್ಯರಸ್ತೆಯಲ್ಲಿ ಮನೆ ನಿರ್ಮಿಸುತ್ತಿದ್ದು, ಇಂದು ಬೆಳಗ್ಗೆ ಮನೆಯಿಂದ ಈ ಸ್ಥಳಕ್ಕೆ ಬಂದು ಸ್ಥಳೀಯ ನಿವಾಸಿ ಕಲ್ಯಾಣಪ್ಪ ಎಂಬುವರ ಜೊತೆ ಮಾತನಾಡುತ್ತಾ ನಿಂತಿದ್ದರು.

ಈ ವೇಳೆ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ನಟರಾಜ್ ಮೇಲೆ ಮಚ್ಚು ಮತ್ತು ಲಾಂಗ್‌ಗಳಿಂದ ದಾಳಿ ಮಾಡಿ ತಲೆ ಹಾಗೂ ಕೈಕಾಲುಗಲ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಗಂಭೀರ ಗಾಯಗೊಂಡ ನಟರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಳಿ ತಡೆಯಲು ಬಂದ ಸ್ಥಳೀಯ ನಿವಾಸಿ ಕಲ್ಯಾಣಪ್ಪ ಹಾಗೂ ಮತ್ತೊಬ್ಬರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜನ ಚೆಲ್ಲಾಪಿಲ್ಲಿ:
ಜನಜಂಗುಳಿ ಇರುವೆಡೆಯೇ ದುಷ್ಕರ್ಮಿಗಳು ಲಾಂಗ್ ಮಚ್ಚುಗಳನ್ನು ಝಳಪಿಸಿದ್ದನ್ನು ಕಂಡ ಸ್ಥಳೀಯರು ಭಯಭೀತರಾಗಿ ಓಡತೊಡಗಿದರೆ ಮತ್ತೆ ಕೆಲವರು ದೂರದಲ್ಲೇ ನಿಂತು ಮೂಕ ಪ್ರೇಕ್ಷಕರಾಗಿದ್ದರು. ಕಾಂಗ್ರೆಸ್ ಮುಖಂಡನ ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ರಾಮನಗರ ಜಿಲ್ಲಾ ಎಸ್ಪಿ ಡಾ.ಚಂದ್ರಗುಪ್ತ, ಡಿವೈಎಸ್ಪಿ ಲಕ್ಷ್ಮಿಗಣೇಶ್, ಮಾಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಯಲಗಯ್ಯ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ನಟರಾಜ್ ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ, ಹಲವಾರು ದೃಷ್ಟಿಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಡಿವೈಎಸ್ಪಿ ಲಕ್ಷ್ಮಿ ಗಣೇಶ್ ಈ ಸಂಜೆಗೆ ತಿಳಿಸಿದ್ದಾರೆ. ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲೇ ನಟರಾಜ್ ಕೊಲೆ ನಡೆದಿರುವುದರಿಂದ ಸ್ಥಳೀಯ ಜನರಲ್ಲಿ ಭೀತಿ ಸೃಷ್ಟಿಸಿದೆ.

ಹೊರವಲಯಕ್ಕೆ ಶಿಫ್ಟಾದ ರೌಡಿಸಂ:
ಐಟಿಬಿಟಿ ಸಿಟಿ ಬೆಳೆಯುತ್ತಿದ್ದಂತೆ ನಗರದ ಹೊರವಲಯದ ಭೂಮಿಗೆ ಚಿನ್ನದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ರೌಡಿಸಂ ಅಲ್ಲಿಗೆ ಶಿಫ್ಟ್ ಆಗಿದೆ. ನೆಲಮಂಗಲ, ತಾವರೆಕೆರೆ ಹಾಗೂ ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಪ್ರದೇಶ ಶೀಘ್ರ ಅಭಿವೃದ್ಧಿ ಹೊಂದುತ್ತಿದ್ದು, ರಿಯಲ್ ಎಸ್ಟೇಟ್ ದಂಧೆ ಎಗ್ಗಿಲ್ಲದೆ ಸಾಗಿದೆ. ರಿಯಲ್ ಎಸ್ಟೇಟ್ ನಡೆಸುವವರು ರೌಡಿಗಳ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ತಾವರೆಕೆರೆ, ನೆಲಮಂಗಲ ಸುತ್ತಮುತ್ತಲ ಪ್ರದೇಶ ರೌಡಿಗಳ ಬೀಡಾಗಿ ಪರಿವರ್ತನೆಗೊಂಡಿದೆ. ಇತ್ತೀಚೆಗೆ ಈ ಪ್ರದೇಶದ ಸುತ್ತಮುತ್ತ ರೌಡಿಗಳ ಉಪಟಳ ಹೆಚ್ಚಾಗಿದೆ. ನಿನ್ನೆಯಷ್ಟೇ ಈ ಭಾಗದ ಪಾತಕಿ ಪಾಯ್ಸನ್ ರಾಮನ ಬಲಗೈ ಬಂಟ ಮಂಜುನಾಥ್ ಅಲಿಯಾಸ್ ಭವಾನಿಯನ್ನು ಕಡಬಗೆರೆ ಕ್ರಾಸ್ ಸಮೀಪದ ಮುತ್ತುರಾಯಸ್ವಾಮಿ ದೇವಾಲಯ ಸಮೀಪ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ನಟರಾಜ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಸ್ಥಳೀಯ ಪೊಲೀಸರು ಎಚ್ಚೆತ್ತುಕೊಂಡು ಅಳಿದುಳಿದಿರುವ ರೌಡಿಗಳಿಗೆ ಎಡೆಮುರಿ ಕಟ್ಟದಿದ್ದರೆ ಮತ್ತಷ್ಟು ಅನಾಹುತಕ್ಕೆ ದಾರಿಯಾಗುವ ಸಾಧ್ಯತೆಗಳಿವೆ

Write A Comment