ಕನ್ನಡ ವಾರ್ತೆಗಳು

ಕೆಸರಿ ಪಡೆಯ ಮಾನವೀಯತೆ ಕ್ಷಣ :ಹಸಿದ ಜೀವದ ದಾಹ ಆಹಾರವೇ ಹೊರತು ಯಾವ ಧರ್ಮವೂ ಅಲ್ಲ…

Pinterest LinkedIn Tumblr

Hindu_samaj_1

ಮಂಗಳೂರು,ಮಾ.03 : ಮಂಗಳೂರಿನಲ್ಲಿ ರವಿವಾರ ಬೃಹತ್ ಹಿಂದೂ ಸಮಾಜೋತ್ಸವದ ಸಂಭ್ರಮ. ಮಹಾರಾಷ್ಟ್ರದ ಸಾಧ್ವಿಯ ಆಗಮನ, ರಂಗೇರಿದ ಕೇಸರಿ ಪರ್ವ, ನೆರೆದ ಸಹಸ್ರ ಹಿಂದೂಗಳ ನಡುವೆ ಅರಿತೋ ಅರಿಯದೆಯೋ ಬುರ್ಖಾಧಾರಿ ಮಹಿಳೆಯೋರ್ವಳು ಭಿಕ್ಷಾಟನೆಯ ಸಂದರ್ಭ ಸೆರೆ ಸಿಕ್ಕ ಫೋಟೋ ಇದು. ಎಂತಹ ಉದ್ರಿಕ್ತ ವಾತಾವರಣವೇ ಇರಲಿ ಜೀವದ್ರವ್ಯದ ಪಸೆ ಇರುವ ಎಲ್ಲರಲ್ಲೂ ಮಾನವೀಯತೆ ಪ್ರವಹಿಸುತ್ತದೆ ಎಂಬುದಕ್ಕೆ ಈ ಫೋಟೋ ಸಾಕ್ಷಿ.

ಹಿಂದೂ ಸಮಾಜೋತ್ಸವ ಎನ್ನುತ್ತಲೇ ಗಲಭೆ ನಡೆದೇ ನಡೆಯುತ್ತೆ ಎಂದು ಬೆಟ್ ಕಟ್ಟುವಷ್ಟರ ಮಟ್ಟಿಗಿನ ಭೀತಿ ತೀವ್ರತೆ ಜನರಲ್ಲಿ ಆವರಿಸಿತ್ತು. ಎಲ್ಲ ಕ್ಕಿಂತಲೂ ಹೆಚ್ಚಾಗಿ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿದ್ದು ನಿನ್ನೆಯ ಇಲಾಖೆ ನಡೆಯಿಂದಲೇ ಅರ್ಥವಾಗುತ್ತೆ ಬಿಡಿ. ಹಿಂದೂ ಸಮಾಜೋತ್ಸವದ ಆಯೋಜಕರ ಮೇಲೂ ಗಲಭೆ ನಡೆಯಬಾರದು ಎಂಬಂತಹ ಒತ್ತಡ ಗಳು ಪೊಲೀಸರಿಂದ ಬಿದ್ದಿದ್ದವು. ಉಗ್ರ ಹಿಂದುತ್ವ ವಾದಿಗಳೂ ಮೊನ್ನೆಯ ಸಮಾವೇಶದಲ್ಲಿ ಮೃದುವಾಗಿದ್ದರು.

ವಿಶ್ವೇಶ್ವರತೀರ್ಥ ಪೇಜಾವರ ಸ್ವಾಮೀಜಿಯವರು ಇತರರ(ಅನ್ಯಧರ್ಮೀಯರ) ಪ್ರಾರ್ಥನಾ ಮಂದಿರಕ್ಕೆ ಕಲ್ಲೆಸೆಯದಂತೆ ಕರೆ ಕೊಟ್ಟರು. ನಾವು ಕೋಮುವಾದಿ ಗಳಲ್ಲ ಎಂಬುದನ್ನು ಸಾರಿದರು.

ವೇದಿಕೆ ಏರಿ ಮೈಕ್ ಮುಂದೆ ನಿಂತು ಉಪದೇಶಿಸುತ್ತಿದ್ದ ಎಲ್ಲರಿಂದಲೂ ಹೊಮ್ಮುತ್ತಿದ್ದದ್ದು ಶಾಂತಿ ಭಜನೆಯ ಜೊತೆಗೆ ಹಿಂದುತ್ವ ರಕ್ಷಣೆ. ಎಲ್ಲರ ಭಾಷಣಕ್ಕೆ ತೀರಾ ವ್ಯತಿರಿಕ್ತವಾಗಿ ಸಾಧ್ವಿ ಸರಸ್ವತಿಯವರ ಭಾಷಣ ಕೇಳಿಬಂದಿತ್ತು. ಬಿಸಿ ರಕ್ತದ ಉತ್ಸಾಹ ಹೆಚ್ಚು ಹೆಚ್ಚು ಕರತಾಡನ ಮಾಡುವ ಮೂಲಕ ಸಾಧ್ವಿ ಮಾತನ್ನು ಬೆಂಬಲಿಸಿತು. ಸಾಧ್ವಿ ಒಮ್ಮೆ `ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸ್ವಲ್ಪ ಸಮಯ ಹಿಡಿಯಬಹುದು ಆದರೆ, ಮಂಗಳೂರು, ಕರ್ನಾಟಕವನ್ನು ಹಿಂದೂ ಪ್ರದೇಶ ಮಾಡಲು ಹೆಚ್ಚು ಸಮಯವೇ ಬೇಕಿಲ್ಲ’ ಎಂದಾಗಲೂ ನೆರೆದವರ ಕರತಾಡನ ಮುಗಿಲು ಮುಟ್ಟಿತ್ತು.

ಆದರೆ ಒಬ್ಬಾಕೆ ಬುರ್ಖಾಧಾರಿ ಮಹಿಳೆ ಪ್ರತಿ ಶುಕ್ರವಾರದ ಜುಮ್ಮಾ ನಮಾಝಿನ ಸಂದರ್ಭ ಮಸೀದಿ ಮುಂದೆ ನಿಂತಂತೆ, ಯಾವುದೋ ಮುಸ್ಲಿಮರ ಹಬ್ಬದ ದಿನ ಝಖಾತ್ ಸ್ವೀಕರಿಸಲು ಸೆರಗೊಡ್ಡುವಂತೆ ಕೇಸರಿ ಧಾರಿ ಯುವಕನೆದುರು ಕೈಯ್ಯುಡ್ಡುವಾಗಲೂ ಆಕೆಯಲ್ಲಿ ಯಾವೊಂದು ಅಂಜಿಕೆಯೂ ಇರಲಿಲ್ಲ. ಯಾವ ಭಯವೂ ಇರಲಿಲ್ಲ. ಆತನಿಗೂ, ಆ ಹಸಿದ ಜೀವದ ದಾಹ ಆಹಾರವೇ ಹೊರತು ಯಾವ ಧರ್ಮವೂ ಅಲ್ಲ ಎಂಬುದು ತೋಚಿದೆ. ಅಂತಃಕರಣದಲ್ಲಿ ಪ್ರವಹಿಸುವ ಮಾನವೀಯತೆ ಮಿಡಿದಿದೆ.

Write A Comment