ಕರ್ನಾಟಕ

ರಾಜ್ಯಕ್ಕೆ ಕೊನೆಗೂ ದಕ್ಕಿದ ಐಐಟಿ: ವಿಶ್ವ ಪರಂಪರೆ ಪಟ್ಟಿ’ಯ ವಿಶ್ವವಿಖ್ಯಾತ ಹಂಪಿಯ ಮೂಲಸೌಲಭ್ಯಗಳ ಅಭಿವೃದ್ಧಿಗೆ

Pinterest LinkedIn Tumblr

pvec01mar15j Hampi2

ನವದೆಹಲಿ: ಕರ್ನಾಟಕಕ್ಕೆ ಕೊನೆಗೂ ‘ಭಾರತೀಯ ತಂತ್ರಜ್ಞಾನ ಸಂಸ್ಥೆ’ (ಐಐಟಿ) ದೊರೆಯುವುದರೊಂದಿಗೆ ಕನ್ನಡಿಗರ ಬಹು ದಿನಗಳ ನಿರೀಕ್ಷೆ ಕೈಗೂಡಿದೆ. ಅಲ್ಲದೇ, ‘ವಿಶ್ವ ಪರಂಪರೆ ಪಟ್ಟಿ’ಯಲ್ಲಿ ಸೇರಿರುವ ವಿಶ್ವವಿಖ್ಯಾತ ಹಂಪಿಯನ್ನು ಮೂಲಸೌಲಭ್ಯಗಳ ಅಭಿವೃದ್ಧಿಗೆ ಗುರುತಿಸಲಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕದಲ್ಲಿ ಐಐಟಿ ಸ್ಥಾಪಿಸಲು ಉದ್ದೇಶಿಸಿ­ರುವು­ದಾಗಿ ತಿಳಿಸಿದರು. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಜಯನಗರ ರಾಜಧಾನಿ ಹಂಪಿಯಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದಾಗಿ ಪ್ರಕಟಿಸಿದರು.

ರಾಜ್ಯ ಸರ್ಕಾರ ಐಐಟಿಗೆ ಅಗತ್ಯವಿರುವ ಜಮೀನು ಗುರುತಿಸಿ, ಮಂಜೂರು ಮಾಡಬೇಕು. ಕೇಂದ್ರ ಸರ್ಕಾರದ ತಜ್ಞರು ಅದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವರು. ಕರ್ನಾಟಕ ಸರ್ಕಾರ ಎಷ್ಟು ಬೇಗನೆ ತೀರ್ಮಾನ ಮಾಡಲಿದೆಯೊ ಅಷ್ಟು ತ್ವರಿತವಾಗಿ ಐಐಟಿ ಬರಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸದ್ಯದ ನಿಯಮದ ಪ್ರಕಾರ ಐಐಟಿ ಸ್ಥಾಪನೆಗೆ 500ಎಕರೆ ಭೂಮಿ ಅಗತ್ಯವಿದೆ. ಆದರೆ, ಕಡಿಮೆ ಜಮೀನಿನಲ್ಲಿ ಸಂಸ್ಥೆ ಕಟ್ಟುವ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರ ಈಗಾಗಲೇ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿ ಸಂಸ್ಥೆಯ ವಿನ್ಯಾಸದ ಮಾದರಿಗಳನ್ನು ಸಿದ್ಧಪಡಿಸುತ್ತಿದ್ದು ಶೀಘ್ರವೇ ವರದಿ ನೀಡಲಿದೆ.

ಯುಪಿಎ ಸರ್ಕಾರವೇ ರಾಜ್ಯಕ್ಕೆ ಐಐಟಿ ಮಂಜೂರು ಮಾಡಲು ಉದ್ದೇಶಿಸಿತ್ತು. 2006­ರಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಅರ್ಜುನ್‌ ಸಿಂಗ್‌ ಕೆಲವು ರಾಜ್ಯಗಳ ಜತೆ ಕರ್ನಾ­ಟಕಕ್ಕೂ ಐಐಟಿ ನೀಡಲು ಅಪೇಕ್ಷಿಸಿದ್ದರು. ಸ್ಥಳ ಪರಿಶೀಲನೆಗೆ ಕೇಂದ್ರ ಸರ್ಕಾರ ತಜ್ಞರ ಸಮಿತಿ­ಯನ್ನು ರಚಿಸಿತ್ತು. ಖ್ಯಾತ ವಿಜ್ಞಾನಿ ಹಾಗೂ ಪ್ರಧಾನಿ ಅವರ ವೈಜ್ಞಾನಿಕ ಸಲಹೆಗಾರರಾಗಿದ್ದ ಡಾ. ಸಿ.ಎನ್‌.ಆರ್‌. ರಾವ್‌ ಅವರು ಮೈಸೂರನ್ನು ಐಐಟಿಗೆ ಶಿಫಾರಸು ಮಾಡಿದ್ದರು.

ಆಗ ರಾಜ್ಯದಲ್ಲಿದ್ದ ಧರ್ಮಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಒಮ್ಮತ ಮೂಡಲಿಲ್ಲ. ಉತ್ತರ ಕರ್ನಾಟಕದಲ್ಲಿ ಸಂಸ್ಥೆ ಸ್ಥಾಪಿಸಬೇಕೆಂದು ಕಾಂಗ್ರೆಸ್‌ ಪ್ರತಿಪಾದಿಸಿತು. ಹಾಸನದಲ್ಲಿ ಬರ­ಬೇಕೆಂದು ಮಿತ್ರ ಪಕ್ಷ ಜನತಾದಳ ಪಟ್ಟು ಹಿಡಿಯಿತು. ಧರ್ಮಸಿಂಗ್‌ ಸರ್ಕಾರ ಬಿದ್ದು­ಹೋದ ಬಳಿಕ ಅಧಿಕಾರಕ್ಕೆ ಬಂದ ಎಚ್‌.ಡಿ. ಕುಮಾರಸ್ವಾಮಿ ಐಐಟಿಗೆ ಹಾಸನದಲ್ಲಿ ಸಾವಿರ ಎಕರೆ ಭೂಮಿ ಕೊಡಲು ಸಿದ್ಧವಿರುವುದಾಗಿ ಕೇಂದ್ರಕ್ಕೆ ಪತ್ರ ಬರೆದರು.

ಕೇಂದ್ರ ಮಾನವ ಸಂಪನ್ಮೂಲ ಸಚಿ­ವಾಲಯ ಕ್ರಮ ಕೈಗೊಳ್ಳುವ ಹಂತದಲ್ಲಿ ಕಾಂಗ್ರೆಸ್‌ ನಾಯ­ಕರು ಅದಕ್ಕೆ ಕಲ್ಲು ಹಾಕಿದರು. ಹಾಸನದಲ್ಲೇ ಐಐಟಿ ಬರಬೇಕು ಎಂಬ ಬೇಡಿಕೆಗೆ ಮಣಿಯ­ಬಾರದು ಎಂದು ಅವರು ಯುಪಿಎ ಸರ್ಕಾರದ ಮೇಲೆ ಒತ್ತಡ ತರಲು ಯಶಸ್ವಿಯಾದರು. ಮರು ವರ್ಷ ಐಐಟಿ, ಅವಿಭಜಿತ ಆಂಧ್ರ ಪ್ರದೇ­ಶದ ಮೆಡಕ್‌ ಜಿಲ್ಲೆಗೆ ಸ್ಥಳಾಂತರಗೊಂಡಿತು. 8 ವರ್ಷದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯದ ಜನರ ಕನಸನ್ನು ಸಾಕಾರಗೊಳಿಸಿದೆ.

ಹಂಪಿಗೆ ಒಲಿದು ಬಂದ ಯೋಗ: ಕೇಂದ್ರ ಹಣ­ಕಾಸು ಸಚಿವರು ಮೂಲಸೌಲಭ್ಯ ಅಭಿವೃದ್ಧಿಪಡಿ­ಸಲು ಗುರುತಿಸಿರುವ ವಿಶ್ವವಿಖ್ಯಾತ 25 ಪ್ರವಾಸಿ ತಾಣಗಳಲ್ಲಿ ಹಂಪಿಯೂ ಸೇರಿದೆ.

ಅರುಣ್‌ ಜೇಟ್ಲಿ ಮಾಡಿದ ಬಜೆಟ್‌ ಭಾಷಣ­ದಲ್ಲಿ, ಹಂಪಿ ಪ್ರದೇಶದ ಸೌಂದ­ರ್ಯೀಕರಣ, ಸೂಚನಾ ಫಲಕಗಳ ಅಳವಡಿಕೆ, ಮಾಹಿತಿ ಕೇಂದ್ರ, ದೀಪಾ­ಲಂಕಾರ, ವಾಹನ ನಿಲುಗಡೆ, ಪ್ರವಾ­ಸಿ­ಗರ ಸುರಕ್ಷತೆ, ಶೌಚಾಲಯ, ಕುಡಿ­ಯುವ ನೀರು ಹಾಗೂ ಅಂಗವಿಕಲರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಅಭಿ­ವೃದ್ಧಿಪ­­ಡಿಸಲಾಗುವುದು ಎಂದು ಹೇಳಿದ್ದಾರೆ.

ಹಂಪಿ 1986ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ. 1999ರಲ್ಲಿ ಇದನ್ನು ಅವನತಿ ಅಂಚಿನ­ಲ್ಲಿ­ರುವ ಸ್ಮಾರಕ ಎಂದು ಘೋಷಿಸಲಾಗಿದೆ. ಅನಂತರ ವಿಶ್ವವಿಖ್ಯಾತ ಸ್ಮಾರಕದ ಜಾಗ ಅತಿಕ್ರಮಣ ತೆರವುಗೊಳಿಸಲಾಗಿದೆ.

ಹಂಪಿಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದು, ಮೂಲ ಸೌಲಭ್ಯಗಳ ಕೊರತೆ ಇದೆ. ಸ್ಮಾರಕದ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಈಗಾಗಲೇ ಪ್ರಾಧಿಕಾರ ರಚಿಸಿದೆ. ಮೂಲ­ಸೌಲ­ಭ್ಯಕ್ಕೆ ಸಂಬಂಧಿಸಿದ ಸಮಗ್ರ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಬೇಕಿದೆ. ಅದಕ್ಕೆ ಅಗತ್ಯವಿ­ರುವ ಹಣವನ್ನು ಕೇಂದ್ರ ಸರ್ಕಾರ ಒದಗಿಸಲಿದೆ.

ಖ್ಯಾತ ಹಾಲಿವುಡ್‌ ನಟ ಜಾಕಿ ಚಾನ್‌ ಅವರೂ ಹಂಪಿ ಸೊಬಗಿಗೆ ಮನ­ಸೋತಿದ್ದಾರೆ. ಅವರ ಚಿತ್ರವೊಂದನ್ನು ಸ್ಮಾರಕದ ಬಳಿಯೇ ಚಿತ್ರೀಕರಿಸಲಾಗಿದೆ. ಚಿತ್ರೀಕರಣದ ವೇಳೆ ಜಾಕಿ ಚಾನ್‌, ನೆಲದ ಮೇಲೆ ಬಿದ್ದಿದ್ದ ಕಸವನ್ನು ಶುಚಿಗೊಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.

‘ಬಹುದಿನದ ಬೇಡಿಕೆ ಈಡೇರಿದೆ’
ಕರ್ನಾಟಕ ಜ್ಞಾನವಂತರ ತವರು. ಇಲ್ಲಿ ಐಐಎಸ್‌ಸಿ, ಐಐಎಂ ಇವೆ. ಆದರೆ ಐಐಟಿ ಇರಲಿಲ್ಲ. ಬಹುದಿನಗಳ ಬೇಡಿಕೆ ಈಗ ಈಡೇರಿದಂತಾಗಿದೆ.

ಈವರೆಗೆ ಕರ್ನಾಟಕದ ವಿದ್ಯಾರ್ಥಿ­ಗಳು ಹೊರ ರಾಜ್ಯಗಳ­ಲ್ಲಿರುವ ಐಐಟಿಯನ್ನೇ ಅವಲಂಬಿ­ಸಬೇಕಾದ ಅನಿವಾರ್ಯತೆ ಇತ್ತು. ಬಹಳಷ್ಟು ಪೋಷಕರು ತಮ್ಮ ಹೆಣ್ಣುಮಕ್ಕ­ಳನ್ನು ದೂರದ ಐಐಟಿಗೆ ಕಳುಹಿಸುತ್ತಿರಲಿಲ್ಲ. ಇನ್ನು ಮುಂದೆ ಅನುಕೂಲವಾಗಲಿದೆ.

ರಾಜ್ಯದ ಯಾವುದೇ ಮೂಲೆಯಲ್ಲಿ ಐಐಟಿ ಸ್ಥಾಪನೆಯಾದರೂ ಸಂತೋಷ. ಅದ­ರಲ್ಲೂ ಶಿಕ್ಷಣ ಕಾಶಿ ಧಾರವಾಡದಲ್ಲೇ ಆದರೆ ಉತ್ತರ ಕರ್ನಾಟಕಕ್ಕೆ ಮತ್ತಷ್ಟು ಹಿರಿಮೆ ಬಂದಂತಾಗುತ್ತದೆ.
–ಡಾ.ಎಚ್‌.ಮಹೇಶಪ್ಪ, ಕುಲಪತಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

‘ವಿಜಯನಗರ ಸಂಸ್ಕೃತಿ ಆಶಯಕ್ಕೆ ಧಕ್ಕೆ ಬರದಿರಲಿ’
ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ವಿಜಯನಗರ ಸಂಸ್ಕೃತಿಯ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಹಾಗೂ ಯುನೆಸ್ಕೊ ಮಾರ್ಗಸೂಚಿಯ ಆಧಾರದ ಮೇಲೆ ಅಭಿವೃದ್ಧಿ ಕೈಗೊಳ್ಳಬೇಕು.

ಮುಖ್ಯವಾಗಿ ಸರ್ಕಾರಗಳ ಅನುದಾನ­ವನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿ­ಗಳನ್ನು ಅನುಷ್ಠಾನಗೊಳಿಸುವ ಸರ್ಕಾರದ ಅಧೀನ ಇಲಾಖೆಗಳಾದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ, ಹಂಪಿ ವಿಶ್ವಪಾರಂ­ಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಗಳ ನಡುವೆ ಪರಸ್ಪರ ಹೊಂದಾಣಿಕೆ ಅಗತ್ಯವಾಗಿದೆ.
–ಡಾ.ಸಿ.ಎಸ್‌.ವಾಸುದೇವನ್‌, ಪ್ರಾಧ್ಯಾಪಕ, ಹಂಪಿ ಕನ್ನಡ ವಿಶ್ವವಿದ್ಯಾಲಯ

ಹಂಪಿ ಅಭಿವೃದ್ಧಿಗೆ ನಿಧಿ
ಕರ್ನಾಟಕದ ಹಂಪಿ ಸೇರಿದಂತೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ 25 ತಾಣಗಳ ಅಭಿ­ವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗು­ವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ಗೋವಾದ ಚರ್ಚ್‌ಗಳು, ಮಹಾ­ರಾಷ್ಟ್ರದ ಎಲಿಫಂಟಾ ಗುಹೆಗಳು, ರಾಜಸ್ತಾನದ ಕಂಬಲಗಡ ಮತ್ತು ಇನ್ನಿತರ ಕೋಟೆಗಳು, ಗುಜರಾತಿನ ಪಾಟನ್‌ ರಾಣಿ ಕಿ ವಾವ್‌ (ಮೆಟ್ಟಿಲು ಬಾವಿ), ಜಮ್ಮು ಮತ್ತು ಕಾಶ್ಮೀರದ ಲೇಹ್‌ ಅರಮನೆ, ಉತ್ತರ ಪ್ರದೇಶದ ದೇವಸ್ಥಾನಗಳ ನಗರಿ ವಾರಾಣಸಿ, ಪಂಜಾಬ್‌ನ ಅಮೃತ­ಸರದ ಜಲಿಯನ್‌ ವಾಲಾಬಾಗ್‌ ಹಾಗೂ ಹೈದರಾಬಾದ್‌ನ ಕುತುಬ್‌ ಶಾಹಿ ಗುಮ್ಮಟ ಸೇರಿದಂತೆ 25 ತಾಣಗಳ ಮೂಲಸೌಕರ್ಯ ಮತ್ತು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗು­ವುದು ಎಂದು ಅವರು ಹೇಳಿದರು.

ವೀಸಾ ವಿಸ್ತರಣೆ
ದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮತ್ತು ಪ್ರವಾಸಿಗರನ್ನು ಸೆಳೆ­ಯಲು ವಿಮಾನ ನಿಲ್ದಾಣಕ್ಕೆ ಬಂದಿಳಿ­ಯುತ್ತಲೇ ನೀಡಲಾಗುವ ಅರೈವಲ್‌ ವೀಸಾ ವ್ಯವಸ್ಥೆಯನ್ನು 150 ರಾಷ್ಟ್ರ­ಗಳಿಗೆ ವಿಸ್ತರಿಸಲಾಗಿದೆ.

ಈ ಮೊದಲು 43 ರಾಷ್ಟ್ರಗಳಿಗೆ ಮಾತ್ರ ಸೌಲಭ್ಯ ಕಲ್ಪಿಸಲಾಗಿತ್ತು. ಪ್ರವಾಸೋದ್ಯಮ ಕ್ಷೇತ್ರದ ಗಣ್ಯರು ಮತ್ತು ಸಂಸ್ಥೆಗಳು, ದೇಶದ ಪ್ರವಾ­ಸೋ­ದ್ಯಮ ಇದೊಂದು ಉತ್ತಮ  ನಿರ್ಧಾರ ಎಂದು ಶ್ಲಾಘಿಸಿವೆ.

ಪ್ರವಾಸಿಗರಿಗೆ ಅಗತ್ಯವಾದ ಮೂಲ ಸೌಲಭ್ಯ ಕಲ್ಪಿಸುವುದರಿಂದ ಪ್ರವಾಸೋದ್ಯಮ ಗರಿಗೆದರುವುದರಲ್ಲಿ ಸಂಶಯವಿಲ್ಲ ಎಂದು ಈ ಕ್ಷೇತ್ರದ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

ರೂ. 8,200 ಕೋಟಿ ಹೆಚ್ಚುವರಿ ಅನುದಾನ
ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳ ಪಾಲಿನ ಪ್ರಮಾಣ ಏರಿಕೆ ಆಗಿರುವು­ದರಿಂದ ಪ್ರಸಕ್ತ ಹಣಕಾಸು ವರ್ಷ ಕರ್ನಾಟಕಕ್ಕೆ ರೂ. 8,200 ಕೋಟಿ ಹೆಚ್ಚುವರಿ ಹಣ ದೊರೆತಿದೆ.

2014–15ನೇ ಸಾಲಿನಲ್ಲಿ ರೂ. 16,589 ಕೋಟಿ ಹಂಚಿಕೆ ಮಾಡಲಾಗಿತ್ತು. 2015–16ನೇ ಸಾಲಿನಲ್ಲಿ ರೂ. 24,790 ಕೋಟಿ ನಿಗದಿಪಡಿಸಲಾಗಿದೆ.

ಹದಿನಾಲ್ಕನೇ ಹಣಕಾಸು ಆಯೋಗ ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡುವ ಪಾಲನ್ನು ಶೇ32ರಿಂದ 42ಕ್ಕೆ ಏರಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಆಯೋಗದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ಹಣ ದೊರೆತಿದೆ.

ಉನ್ನತ ಶಿಕ್ಷಣಕ್ಕೆ ಬಂಪರ್‌ ಕೊಡುಗೆ
ರೂ. 68,968 ಕೋಟಿ ಭವಿಷ್ಯದ ಬೇಡಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡ­ಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪ­ನೆಗೆ ಆದ್ಯತೆ ನೀಡಲಾಗಿದೆ.

Write A Comment