ಕರ್ನಾಟಕ

ರಾಜ್ಯದ ಹಲವೆಡೆ ಏಕಕಾಲಕ್ಕೆ ಲೋಕಾ ದಾಳಿ : ಭ್ರಷ್ಟರು ಬಲೆಗೆ

Pinterest LinkedIn Tumblr

Lokayukta_Kranataka_DC_0_0_0

ಬೆಂಗಳೂರು, ಫೆ.26: ಭ್ರಷ್ಟ ಅಧಿಕಾರಿಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಿರುವ ಲೋಕಾಯುಕ್ತ ಪೊಲೀಸರು ಇಂದೂ ಐದು ಅಧಿಕಾರಿಗಳ ಲಂಚಾವತಾರ ಬಯಲು ಮಾಡಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ. ಮೈಸೂರು, ಬೀದರ್, ಕಲ್ಬುರ್ಗಿಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾ ಪೊಲೀಸರು ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ಮೈಸೂರು ವರದಿ: ಲೋಕಾಯುಕ್ತ ಎಸ್‌ಪಿ ನಾರಾಯಣ್ ನೇತೃತ್ವದ ಲೋಕಾ ತಂಡ ವೈದ್ಯಾಧಿಕಾರಿ, ಪಾಲಿಕೆ ಸೂಪರಿಡಿಟೆಂಟ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಯೋಜನಾಧಿಕಾರಿಯ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಟಿ.ನರಸೀಪುರ ತಾಲೂಕಿನಲ್ಲಿ ವೈದ್ಯಾಧಿಕಾರಿಯಾಗಿರುವ ಕರಣಾಕರನ್ ಅವರ ಬನ್ನಿಮಂಟಪದಲ್ಲಿರುವ ನಿವಾಸ ಹಾಗೂ ನರ್ಸಿಂಗ್ ಹೋಂ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಅದೇ ರೀತಿ ಪಾಲಿಕೆ ಸೂಪರಿಡಿಟೆಂಡ್ ಪಾರ್ವತಮ್ಮ ಅವರ ರಾಜ್‌ಕುಮಾರ್ ರಸ್ತೆಯಲ್ಲಿರುವ ನಿವಾಸ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭಿವೃದ್ಧಿ ಮತ್ತು ಯೋಜನಾಧಿಕಾರಿ ಲಿಂಗಣ್ಣ ಅವರ ಬನ್ನೂರು ರಸ್ತೆಯ ಮಾನಸಿನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಈ ಮೂವರು ಭ್ರಷ್ಟ ಅಧಿಕಾರಿಗಳಿಗೆ ಸಂಬಂಧಿಸಿದಂತೆ 9 ಕಡೆ ಏಕ ಕಾಲಕ್ಕೆ ಲೋಕಾ ಪೊಲೀಸರು ದಾಳಿ ನಡೆಸಿ ಅವರ ಕರ್ಮಕಾಂಡ ಬಯಲು ಮಾಡಿದ್ದಾರೆ. ಬೀದರ್; ಬೀದರ್‌ನಲ್ಲಿ ಅರಣ್ಯಾಧಿಕಾರಿಯಾಗಿರುವ ಶಶಿಕಾಂತ್ ಅವರ ನಿವಾಸ ಹಾಗೂ ಆತನ ಇಬ್ಬರು ಸ್ನೇಹಿತರ ಮನೆಗಳ ಮೇಲೆ ದಾಳಿ ನಡೆಸಿರುವ ಸ್ಥಳೀಯ ಲೋಕಾ ಪೊಲೀಸರು ಭಾರಿ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಕಲ್ಬುರ್ಗಿ: ಎಸ್‌ಪಿ ಎಂ.ಬಿ.ಪಾಟೀಲ್ ನೇತೃತ್ವದ ಲೋಕಾ ತಂಡ ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ ಎಇಇ ಆಗಿರುವ ಮಹಮ್ಮದ್ ಹಾಜಿ ಅವರ ನಯಾ ಮೊಹಲ್ಲಾ ನಿವಾಸದ ಮೇಲೆ ದಾಳಿ ನಡೆಸಿ 4.30 ಲಕ್ಷ ನಗದು, ಎರಡು ಕಾರು ಮತ್ತಿತರ ಆಸ್ತಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ.

Write A Comment