ಕರ್ನಾಟಕ

ಮಂಡ್ಯ- ರಾಯಚೂರು ಬಳಿ ಅಪಘಾತ : 6 ಸಾವು

Pinterest LinkedIn Tumblr

accident_images1

ಮಂಡ್ಯ/ರಾಯಚೂರು, ಫೆ.26: ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಮ್ಯಾಕ್ಸಿ ಕ್ಯಾಬ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಧುವಿನ ತಾಯಿ ಸೇರಿ ಮೂವರು ಮಹಿಳೆಯರು ಮೃತಪಟ್ಟ ಘಟನೆ ರಾಯಚೂರು ಬಳಿ ಸಂಭವಿಸಿದರೆ, ಮಂಡ್ಯದ ಬಳಿ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ರಾಯಚೂರು: ಸಿಂಧನೂರಿನ ಶರಣಬಾಳು ನಿವಾಸಿಯಾದ ಜಯಮ್ಮ ಅವರ ಮಗಳ ಮದುವೆ ಇಂದು ನಿಶ್ಚಯವಾಗಿತ್ತು. ಅದರಂತೆ ರಾತ್ರಿ 11.45ರಲ್ಲಿ ಕಲ್ಯಾಣ ಮಂಟಪಕ್ಕೆ ತೆರಳಲು ಮ್ಯಾಕ್ಸಿ ಕ್ಯಾಬ್‌ನಲ್ಲಿ 15 ಮಂದಿ ಹೋಗುತ್ತಿದ್ದರು.

ಇನ್ನೇನು ಮದುವೆ ಮಂಟಪ ತಲುಪಬೇಕೆನ್ನುವಷ್ಟರಲ್ಲಿ ಎದುರಿನಿಂದ ಯಮನಂತೆ ಬಂದ ಲಾರಿ ಕ್ಯಾಂಟರ್‌ಗೆ ಅಪ್ಪಳಿಸಿದ ಪರಿಣಾಮ ಕ್ಯಾಂಟರ್‌ನಲ್ಲಿದ್ದ ವಧುವಿನ ತಾಯಿ ಜಯಮ್ಮ, ಸಂಬಂಧಿಕರಾದ ಗೌರಮ್ಮ ಮತ್ತು ಶಿವಗಂಗಮ್ಮ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಗಿರಿಜಮ್ಮ, ಶರಣಬಸಪ್ಪ, ವೀರೇಶ್, ಪರಿಮಳ, ಬಸಮ್ಮ, ಪಾರ್ವತಿ, ಶಿವಕುಮಾರ್, ಶಶಿಕಲಾ, ಅಮರೇಶ್, ರಾಜೇಶ್ವರಿ, ರಕ್ಷಿತಾ, ಉಮೇಶ್ ಗಾಯಗೊಂಡಿದ್ದು, ಇವರಲ್ಲಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ವಧುವಿನ ತಾಯಿ ಮೃತಪಟ್ಟಿದ್ದರಿಂದ ಇಂದು ನಡೆಯಬೇಕಿದ್ದ ಮದುವೆ ರದ್ದಾಗಿದೆ. ಮಂಡ್ಯ: ಬೆಂಗಳೂರಿನ ಸಂಬಂಧಿಯೊಬ್ಬರ ಮನೆಯಲ್ಲಿ ಇಂದು ಹೋಮ ನಿಮಿತ್ತ ಮೈಸೂರಿನಿಂದ ಸಂಬಂಧಿಕರು ಕಾರಿನಲ್ಲಿ ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಇವರ ಕಾರಿಗೆ ಅಪ್ಪಳಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಮೈಸೂರಿನ ಸುಮಿತ್ರಾದೇವಿ (53), ರಘುನಂದನ್ (55)ಮತ್ತು ಪ್ರಕಾಶ್ (21) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಒಂದೇ ಕುಟುಂಬದವರು ಎನ್ನಲಾಗಿದೆ.

ಬೆಂಗಳೂರಿನಲ್ಲಿನ ವೈಜಯಂತಿ ಮಾಲಾ ಎಂಬುವರ ಮನೆಯಲ್ಲಿ ಇಂದು ಹೋಮ ಹಮ್ಮಿಕೊಳ್ಳಲಾಗಿತ್ತು. ಅದರ ನಿಮಿತ್ತ ರಾತ್ರಿ ಮೈಸೂರಿನಿಂದ ಸುಮಿತ್ರಾದೇವಿ ಅವರ ಕುಟುಂಬದ ನಾಲ್ವರು ಇಂಡಿಕಾ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ರಾತ್ರಿ 8 ಗಂಟೆ ಸಮಯದಲ್ಲಿ ಮಂಡ್ಯ ತಾಲೂಕಿನ ಹಳೇಬೂದನೂರು ಬಳಿ ಬರುತ್ತಿದ್ದಂತೆ ರಾಜ್ಯ ಹೆದ್ದಾರಿ-17ರ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬೆಂಗಳೂರು ಕಡೆಯಿಂದ ಅತಿ ವೇಗವಾಗಿ ಬರುತ್ತಿದ್ದ ಸಿಯಟೋ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಸುಮಿತ್ರಾದೇವಿ ಅವರ ಕಾರಿಗೆ ಅಪ್ಪಳಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೈತಾನಿ ಎಂಬುವರು ಗಂಭೀರ ಗಾಯಗೊಂಡಿದ್ದು, ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸಿಯಟೋ ಕಾರಿನ ಚಾಲಕ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳೀಯರ ನೆರವಿನಿಂದ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

Write A Comment