ಕುಣಿಗಲ್,ಫೆ.24:ಶಾಲೆಗೆ ಹೊರಟಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಭೀಕರ ಘಟನೆ ಕುಣಿಗಲ್‌ನ ಹಿತ್ತಲಹಳ್ಳಿ ಕಾಲೋನಿ ಸಮೀಪ ನಡೆದಿದೆ. ಹುಲಿಯೂರುದುರ್ಗದ ಉಜ್ಜನಿಗ್ರಾಮದ ನಿವಾಸಿ, ಪ್ರಸ್ತುತ ಅಜ್ಜಿ ಮನೆಯಲ್ಲಿ ವಾಸವಾಗಿದ್ದ 11 ವರ್ಷದ ಬಾಲಕಿಯನ್ನು ಶಾಲೆಗೆ ಹೋಗುವ ಮಾರ್ಗಮಧ್ಯೆ ಅಡ್ಡಗಟ್ಟಿದ ಪುಂಡರ ಗುಂಪು ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಕಗರಪುರ ಬಳಿಯ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಈ ಬಾಲಕಿಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಬಡತನದಿಂದಾಗಿ ಅವರು ಈಕೆಯನ್ನು ಅಜ್ಜಿ ಮನೆಗೆ ಬಿಟ್ಟಿದ್ದರು ಎಂದು ತಿಳಿದುಬಂದಿದೆ. ಮನೆಯಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಶಾಲೆಗೆ ನಡುತೋಪಿನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ನಿನ್ನೆ ತಾತ-ಅಜ್ಜಿ ತುಮಕೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು.
ಎಂದಿನಂತೆ ಶಾಲೆ ಕಡೆ ಬೆಳಗ್ಗೆ ಹೊರಟ್ಟಿದ್ದ ಬಾಲಕಿ ಸಂಜೆಯಾದರೂ ಮನೆಗೆ ವಾಪಸ್ ಆಗದಿದ್ದಾಗ ಆತಂಕಗೊಂಡ ಅಜ್ಜಿ, ಗ್ರಾಮಸ್ಥರಿಗೆ ತಿಳಿಸಿದ್ದು, ತಡರಾತ್ರಿವರೆಗೂ ಎಲ್ಲರೂ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗದಿದ್ದಾಗ ಮತ್ತಷ್ಟು ಗಾಬರಿವುಂಟಾಗಿದೆ. ಇಂದು ಬೆಳಗ್ಗೆ ಶಾಲೆಗೆ ಹೋಗುವ ದಾರಿಯಲ್ಲೇ ಗ್ರಾಮಸ್ಥರು ಬಾಲಕಿಯ ಹುಡುಕಾಟ ನಡೆಸಿದಾಗ, ಗ್ರಾಮದ ಸಮೀಪವೇ ನಿರ್ಜನ ಪ್ರದೇಶದಲ್ಲಿ ಬ್ಯಾಗ್ ಪತ್ತೆಯಾಗಿದೆ. ನಂತರ ಆಸುಪಾಸಿನಲ್ಲೇ ಆಕೆ ಇರಬಹುದೆಂದು ಹುಡುಕಾಟ ನಡೆಸಿದಾಗ ಬಾಲಕಿಯ ಶವ ಕಂಡಿದೆ. ಇಡೀ ಗ್ರಾಮಸ್ಥರೇ ಅಲ್ಲಿ ಜಮಾಯಿಸಿದ್ದು, ಆಕೆ ಮೇಲೆ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಕೆ.ಆರ್.ಗಣೇಶ್ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಧರ್ಮೇಂದ್ರ, ಎಸ್‌ಐಗಳಾದ ಹರೀಶ್ ಮತ್ತು ರಾಜು ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನಿನ್ನೆ ಬಾಲಕಿ ಶಾಲೆಗೆ ಹೋಗುತ್ತಿದ್ದನ್ನು ನಾನು ನೋಡುತ್ತಿದ್ದೆ. ನಮ್ಮ ಗ್ರಾಮಕ್ಕೆ ಯಾರೋ ಅಪರಿಚಿತ ಹುಡುಗರು ಬಂದಿದ್ದರು. ಪಲ್ಸ್ ಪೊಲಿಯೋ ಹಾಕುವ ಸಿಬ್ಬಂದಿಗಳು ಎಂದು ಸುಮ್ಮನಾಗಿದ್ವಿ. ಇವರೇ ಈ ಕೃತ್ಯ ನಡೆಸಿರಬಹುದೆಂದು ಗ್ರಾಮದ ವ್ಯಕ್ತಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ. ಕುಣಿಗಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಗೆ ಹೊರಟ ಬಾಲಕಿಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಪಟ್ಟಣದ ಜನತೆಯನ್ನೇ ಬೆಚ್ಚಿಬೀಳಿಸಿದೆ.
