ಬೆಂಗಳೂರು: ‘ತಮಿಳಿಗರಿಗೆ ತಮಿಳು ಭಾಷೆ ಮಾತನಾಡುವುದು ಒಂದು ಫ್ಯಾಷನ್. ಆದರೆ ಕನ್ನಡಿಗರು ಕನ್ನಡ ಮಾತನಾಡುವುದು ದಾರಿದ್ರ್ಯ ಎಂದು ಭಾವಿಸುವುದರಿಂದ ಭಾಷೆ ಬೆಳವಣಿಗೆಗೆ ಅಡ್ಡಿಯಾಗಿದೆ’ ಎಂದು ಸಾಹಿತಿ ಶ್ರೀನಿವಾಸ ವೈದ್ಯ ಬೇಸರ ವ್ಯಕ್ತಪಡಿಸಿದರು.
ಅಂಕಿತ ಪುಸ್ತಕ ಪ್ರಕಾಶನವು ನಗರದ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಚ್.ಡುಂಡಿರಾಜ್ ಅವರ ‘ಹನಿ ಮೋಹಿನಿ’, ವಸುಮತಿ ಉಡುಪ ಅವರ ‘ಮನ್ವಂತರ’, ಡಾ.ಮಮತಾರಾವ್ ಅವರ ಜಯಂತ್ ಕಾಯ್ಕಿಣಿ ಅವರ ‘ಕಥನಾವರಣ’, ಡಾ.ಜಿ.ಎನ್.ಉಪಾಧ್ಯ ಅವರ ‘ವಿನೋದ ಸೌಧದ ಸಾಹಿತಿ ಡುಂಡಿರಾಜ್’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕನ್ನಡಿಗರು ಕನ್ನಡ ಮಾತನಾಡುವುದೇ ಫ್ಯಾಷನ್ ಎಂದು ಪರಿಗಣಿಸಬೇಕು. ಅನ್ಯ ಭಾಷೆಗಳ ಮೋಹವನ್ನು ಬಿಟ್ಟು ಕನ್ನಡತನವನ್ನು ಉಳಿಸಿಕೊಳ್ಳಬೇಕಾಗಿದೆ. ಅಸ್ಮಿತೆ ಮತ್ತು ಅಭಿವೃದ್ಧಿಗಳು ಪರಸ್ಪರ ಪೂರಕವಾಗುವ ಬದಲು ವಿರೋಧಾಭಾಸವಾಗುತ್ತಿರುವುದು ವಿಪರ್ಯಾಸಯಾಗಿದೆ’ ಎಂದರು.
‘ಸರೋಜಿನಿ ಮಹಿಷಿ ತಮ್ಮ ವರದಿಯಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಅವರು ಅಸುನೀಗಿ ತಿಂಗಳೇ ಕಳೆದಿದೆ. ಮಹಿಷಿ ವರದಿಯಿಂದ ಪ್ರೇರೇಪಿತವಾಗಿ, ಬೇರೆ ರಾಜ್ಯಗಳು ತಮ್ಮ ರಾಜ್ಯದಲ್ಲಿ ಮಾತೃಭಾಷೆಗೆ ಮನ್ನಣೆ ನೀಡಿ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಕಲ್ಪಿಸಿಕೊಡುತ್ತಿವೆ. ಆದರೆ ನಮ್ಮಲ್ಲಿ ಇಂತಹ ಪ್ರಯತ್ನಗಳು ನಡೆದಿಲ್ಲ’ ಎಂದು ವಿಷಾದಿಸಿದರು.
ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್ ಅವರು ಮಾತನಾಡಿ, ‘ಕನ್ನಡ ಸಾಹಿತ್ಯ ಬರವಣಿಗೆಯಲ್ಲಿ ಹಾಸ್ಯ ರೂಢಿಸಿಕೊಂಡವರು ಎಚ್.ಡುಂಡಿರಾಜ್. ಜನರು ಅವರನ್ನು ಹಾಸ್ಯ ಸಾಹಿತಿ ಎಂದು ಕರೆಯುವ ಬದಲು ಹಾಸ್ಯಪ್ರಜ್ಞೆಯುಳ್ಳ ಸಾಹಿತಿ ಎಂದು ಕರೆಯಬೇಕು’ ಎಂದರು.