ಕರ್ನಾಟಕ

ಯಲಹಂಕ ವಾಯುನೆಲೆಯಲ್ಲಿ ‘ಏರೋ ಇಂಡಿಯಾ–2015’: ಬಾನಲ್ಲಿ ಬೆಂಕಿ, ಬೆಡಗಿಯರ ರಮ್ಯನರ್ತನ!

Pinterest LinkedIn Tumblr

air

ಬೆಂಗಳೂರು: ಯಲಹಂಕದ ವಾಯುನೆಲೆಯ ರನ್‌ವೇಯಿಂದ ಬೆಳಕಿನ ವೇಗದಲ್ಲಿ ವಿಮಾನದ ಜೋಡಿಯೊಂದು ಆಗಸಕ್ಕೆ ಜಿಗಿ­ಯು­ತ್ತಿದ್ದಂತೆ, ಜನರ ಹೃದಯ­ಬಡಿತದ ವೇಗವನ್ನೂ  ಹೆಚ್ಚಿಸಿ­ದವು. ಈ ವಿಮಾನಗಳ ರೆಕ್ಕೆಯ ಮೇಲಿದ್ದ ಸುರಸುಂದರಿ­ಯರೇ ಇದಕ್ಕೆ ಕಾರಣ.

ಬರೊಬ್ಬರಿ 200 ಕಿ.ಮೀ. ವೇಗದಲ್ಲಿ ವಿಮಾನಗಳು ಆಗಸದಲ್ಲಿ ಸಾಗುತ್ತಿದ್ದಾಗ ಬೆಡಗಿಯರು ಅದರ ರೆಕ್ಕೆಯನ್ನೇ ವೇದಿಕೆಯನ್ನಾಗಿ ಮಾಡಿಕೊಂಡು ರಮ್ಯ ನರ್ತನ ಮಾಡ­ಲಾ­ರಂಭಿಸಿದರು. ವಿಮಾನ ಗಿರಿಗಿಟ್ಲೆ ಹೊಡೆದಾಗಲೂ ಅವರದ್ದು ಅದೇ ತಾಕತ್ತು ಹುಮ್ಮಸ್ಸು ಧೈರ್ಯ!

ಯಲಹಂಕ ವಾಯುನೆಲೆಯಲ್ಲಿ ಬುಧವಾರ ಆರಂಭ­ಗೊಂಡ ‘ಏರೋ ಇಂಡಿಯಾ–2015’ ವೈಮಾನಿಕ ಪ್ರದರ್ಶನ­ದಲ್ಲಿನ ಒಂದು ಝಲಕ್ ಇದು. ಈ ಸಲದ   ಪ್ರದರ್ಶನದಲ್ಲಿ ಜನರಿಗೆ ಭರ್ಜರಿ ರಂಜನೆ ನೀಡಿದ್ದು   ಸ್ಕ್ಯಾಂಡಿನೇವಿಯಾದ ಬ್ರೆಟ್ಲಿಂಗ್‌ ‘ವಿಂಗ್‌ ವಾಕರ್ಸ್’ ವಿಮಾನಗಳು.

ಜೊತೆಗೆ ಅಲ್ಲಿ ಝೆಕ್ ರಿಪಬ್ಲಿಕ್‌ನ ‘ಫ್ಲೈಯಿಂಗ್ ಬುಲ್ಸ್’­ಗಳ (ಹಾರುವ ಹೋರಿಗಳು) ಘರ್ಜನೆಯೂ ಇತ್ತು. ಅಮೆ­ರಿಕದ ಸಿಡಿಲಬ್ಬರದ ಕೂಗುಮಾರಿ­ಗಳು ಮಿಂಚನ್ನೇ ಹರಿಸಿದವು. ನಡುವೆ ನಡುವೆ ಭಾರತದ ಟೈಗರ್‌ ಮಾತ್‌ (ಹುಲಿ ಮರಿ) ಜೋರಾಗಿ ಸದ್ದೆಬ್ಬಿಸುತ್ತಾ ಸಾಗಿತು.

ವಾಯುನೆಲೆಯಲ್ಲಿ ಉಕ್ಕಿನ ಹಕ್ಕಿಗಳು ನಡೆಸಿದ ಕಸರತ್ತು, ಪ್ರದ­ರ್ಶಿ­ಸಿದ ಚಮತ್ಕಾರ ಮತ್ತು ವೇಗವು ಬಾನಂಗಳದ ಹಕ್ಕಿಗಳನ್ನೂ ನಾಚಿಸುವಂತಿತ್ತು. ಶರವೇಗದಲ್ಲಿ ನಭಕ್ಕೆ ಚಿಮ್ಮಿದ ‘ಭಾರತೀಯ ವಾಯು­ಸೇನೆಯ ಅಧಿ­ಪತಿ’  ಎಂದೇ ಬಿಂಬಿತ­ವಾ­ಗಿ­ರುವ ಲಘು ಯುದ್ಧ ವಿಮಾನ ತೇಜಸ್, ರೆಪ್ಪೆ ಬಡಿ­ಯುವ ಮುನ್ನವೇ ಆಗಸದಲ್ಲಿ ಕಳೆದು ಹೋಗುತ್ತಿತ್ತು. ಭಾರತದ ‘ಸಾರಂಗ್’ ಹೆಲಿಕಾಪ್ಟರ್‌­ಗಳು ಒಂದರ ಪಕ್ಕ ಒಂದು, ಒಂದರ ಮೇಲೆ/ ಕೆಳಗೆ ಮತ್ತೊಂದು ಹಾರಾಡಿ ರಂಜಿಸಿದವು.

50 ವರ್ಷ ದಾಟಿರುವ ಪೈಲಟ್‌ಗಳೇ ಇರುವ ‘ಫ್ಲೈಯಿಂಗ್ ಬುಲ್ಸ್’ ತ್ರಿವಳಿ ವಿಮಾನಗಳು ಡಿಕ್ಕಿ ಹೊಡೆ­ಯುವ ರೀತಿಯಲ್ಲಿ ಎದುರು ಬದುರಾಗಿ, ತಲೆಕೆಳಗಾಗಿ, ಇನ್ನೇನು ನೆಲಕ್ಕೆ ಅಪ್ಪಳಿಸುವಂತೆ ಹೆದರಿಸಿ ನೋಡುಗರ ಕಣ್ಮನ ಸೆಳೆದವು. ಇವುಗಳ ಪ್ರತಿ ಕಸರತ್ತಿಗೂ ಜನರಿಂದ ‘ವಾವ್‌’ ಎಂಬ ಉದ್ಗಾರದ ಪ್ರೋತ್ಸಾಹ!

ಬಾನಿನಲ್ಲಿ ಬಿಸಿಲೇರುತ್ತಿದ್ದಂತೆ ವೈಮಾ­ನಿಕ ದಿಗ್ಗಜರ ‘ಪಟಾಕಿ’ಯ ಸದ್ದುಗದ್ದಲ ಶುರುವಾಯಿತು. ಆಗಸದಲ್ಲಿ ಬೆಂಕಿ ಬಿರುಗಾಳಿಯ ರೌದ್ರಾವತಾರ ಕಂಡುಬಂತು. ಜನಸಾಗರಕ್ಕೆ ಸಿಕ್ಕಿದ್ದು ರಸದೌತಣದ ತೃಪ್ತಿ. ಭಾರತವೂ ಸೇರಿದಂತೆ ನಾನಾ ದೇಶಗಳ ಯುದ್ಧ ವಿಮಾನ, ಲಘು ಯುದ್ಧ ವಿಮಾನ, ಹಗುರ ವಿಮಾನ ಮತ್ತು ಹೆಲಿ­ಕಾಪ್ಟರ್‌­­ಗಳು ಅಕ್ಷರಶಃ ಆಗಸಕ್ಕೆ ಮುತ್ತಿಕ್ಕಿ ಬಂದವು. ಕೆಲವು ತಮ್ಮ ಚಮತ್ಕಾರದಿಂದ ಮನಗೆದ್ದರೆ, ಇನ್ನೂ ಹಲವು ತಮ್ಮ ವೇಗ ಮತ್ತು ಶಬ್ದದಿಂದ ಮೈನವಿರೇಳಿಸಿದವು.

ಹೊಗೆಯ ಬದಲಿಗೆ ಬೆಂಕಿ ಉಗುಳಿದ  ‘ಸುಖೋಯ್‌’ ಮತ್ತು ಫ್ರಾನ್ಸ್‌ನ ‘ರಫೇಲ್’ ಯುದ್ಧ ವಿಮಾನಗಳು ಆಗಸ­ದಲ್ಲಿ ನಡೆಸಿದ ಚಮತ್ಕಾರ ನೋಡುಗರ ಮೆಚ್ಚುಗೆಗೆ ಪಾತ್ರ­ವಾದವು.

ರಣಹದ್ದುಗಳು ಮಾಯ: ಕಳೆದ ಬಾರಿಯ ಪ್ರದರ್ಶನದ ಮೆರುಗು ಹೆಚ್ಚಿಸಿದ್ದ ಜಗತ್ಪ್ರಸಿದ್ಧ ‘ರಷ್ಯಾದ ರಣಹದ್ದುಗಳ’ (ರಷ್ಯನ್ ನೈಟ್ಸ್ ತಂಡ) ಮೈ ನಡುಗಿಸುವ ಪ್ರದರ್ಶನ ಈ ಸಲ ಇರಲಿಲ್ಲ.

ರಣಹದ್ದುಗಳ ಕಾಟ: ಲೋಹದ ಹಕ್ಕಿಗಳ ಚಮತ್ಕಾರಕ್ಕೆ ಆಗಾಗ ಅಡ್ಡಿಪಡಿಸಲು ಪ್ರಯತ್ನಿಸಿದ್ದು ‘ರಣಹದ್ದು’ಗಳು. ಬೆಳಿಗ್ಗೆಯಿಂದಲೇ  ರಣಹದ್ದುಗಳು ವಾಯುನೆಲೆ­ಯತ್ತಲೇ ಧಾವಿಸುತ್ತಿದ್ದವು. ಅವುಗಳ ಕಿರಿಕಿರಿ ತಪ್ಪಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದರು.

Write A Comment