ಬೆಂಗಳೂರು: ‘ರಕ್ಷಣಾ ಸಾಮಗ್ರಿಗಳ ಆಮದು ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ನಂ. 1 ರಾಷ್ಟ್ರ ಎಂಬ ಹಣೆಪಟ್ಟಿಯನ್ನು ಭಾರತ ಆದಷ್ಟು ಬೇಗ ಕಳಚಿಕೊಳ್ಳಬೇಕಿದ್ದು, ಮುಂದಿನ ಐದು ವರ್ಷಗಳಲ್ಲಿ ಶೇ 70ರಷ್ಟು ರಕ್ಷಣಾ ಸಲಕರಣೆಗಳನ್ನು ದೇಶದಲ್ಲೇ ತಯಾರಿಸುವ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಯಲಹಂಕದ ಭಾರತೀಯ ವಾಯುಪಡೆ ನೆಲೆಯಲ್ಲಿ ಬುಧವಾರ 10ನೇ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಆಮದು ಕ್ಷೇತ್ರದಲ್ಲಿ ನಾವು ನಂ. 1 ಎನ್ನುವುದು ವಿದೇಶಿ ಉದ್ದಿಮೆದಾರರ ಕಿವಿಗಳಿಗೆ ಸಂಗೀತದಂತೆ ಬಲು ಇಂಪಾಗಿ ಕೇಳಬಹುದು. ಆದರೆ, ಈ ವಲಯದಲ್ಲಿ ನಮಗೆ ಅಗ್ರಪಟ್ಟ ಬೇಕಿಲ್ಲ’ ಎಂದು ಚಟಾಕಿ ಹಾರಿಸಿದರು. ರ
ಕ್ಷಣಾ ಸಾಮಗ್ರಿ ತಯಾರಿಕೆಯಲ್ಲಿ ಸ್ವಾವಲಂಬನೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ ಅವರು, ‘ವಿದೇಶಿ ಕಂಪೆನಿಗಳು ಕೇವಲ
ಮಾರಾಟ ಮಾಡುವ ವ್ಯಾಪಾರಿಗಳಾಗದೆ ದೇಶದ ರಕ್ಷಣಾ ಸಾಮಗ್ರಿಗಳ ತಯಾರಿಕೆ ಕ್ಷೇತ್ರದ ಪಾಲುದಾರರಾಗಬೇಕು. ನಮಗೆ ಅವುಗಳ ತಂತ್ರಜ್ಞಾನ, ಕೌಶಲ ಹಾಗೂ ಉತ್ಪಾದನಾ ಶಕ್ತಿ ಮೂರೂ ಬೇಕು’ ಎಂದು ಹೇಳಿದರು.
‘ರಕ್ಷಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಶೇ 49ಕ್ಕೆ ಹೆಚ್ಚಿಸಲಾಗಿದೆ. ಉತ್ಕೃಷ್ಟ ತಂತ್ರಜ್ಞಾನ ತರುವುದಾದರೆ ಈ ಮಿತಿಯನ್ನು ಇನ್ನೂ ಹೆಚ್ಚಿಸಲು ನಾವು ಸಿದ್ಧರಿದ್ದೇವೆ’ ಎಂದು ವಿದೇಶಿ ಕಂಪೆನಿಗಳಿಗೆ ಅವರು ಭರವಸೆ ನೀಡಿದರು.
‘ರಕ್ಷಣಾ ಕ್ಷೇತ್ರದಲ್ಲಿ ದೇಶಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದು ‘ಭಾರತದಲ್ಲಿಯೇ ತಯಾರಿಸಿ’ ಅಭಿಯಾನದ ಹೃದಯ ಭಾಗವಾಗಿದೆ’ ಎಂದ ಅವರು, ‘ಸರ್ಕಾರಿ, ಖಾಸಗಿ ಹಾಗೂ ವಿದೇಶಿ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿಕೊಂಡು ನಾವು ಕೈಗಾರಿಕೆಗಳನ್ನು ಬೆಳೆಸಲಿದ್ದೇವೆ’ ಎಂದು ತಿಳಿಸಿದರು.
‘ವಿದೇಶಿ ಕಂಪೆನಿಗಳು ರಕ್ಷಣಾ ಸಾಮಗ್ರಿಗಳನ್ನು ಭಾರತದಲ್ಲಿ ತಯಾರಿಸಿ ಇಲ್ಲಿನ ಬೇಡಿಕೆಯನ್ನು ಪೂರೈಸುವ ಜತೆಗೆ ತಮ್ಮ ಜಾಗತಿಕ ಪೂರೈಕೆ ಜಾಲವನ್ನೂ ವಿಸ್ತರಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು. ‘ವಿದೇಶಗಳಲ್ಲಿ ತಯಾರಿಸಿದ ಬಿಡಿಭಾಗಗಳನ್ನು ಇಲ್ಲಿ ತಂದು ಜೋಡಿಸಿದ ಮಾತ್ರಕ್ಕೆ ಅದನ್ನು ಭಾರತದಲ್ಲಿ ತಯಾರು ಮಾಡಲಾಗಿದೆ ಎನ್ನಲಾಗದು’ ಎಂದು ಹೇಳಿದರು.
‘ಬಾಹ್ಯ ಹಾಗೂ ಆಂತರಿಕ ಭದ್ರತಾ ಸವಾಲುಗಳು ಹೆಚ್ಚಿರುವ ಈ ದಿನಗಳಲ್ಲಿ ನಮ್ಮ ರಕ್ಷಣಾ ಪಡೆಗಳಿಗೆ ತಂತ್ರಜ್ಞಾನ ಆಧಾರಿತ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕಿದ್ದು, ರಕ್ಷಣಾ ಖರೀದಿ ನೀತಿಯಲ್ಲಿ ಸರ್ಕಾರ ಇನ್ನಷ್ಟು ಸುಧಾರಣಾ ಕ್ರಮಗಳನ್ನು ತರಲು ಉತ್ಸುಕವಾಗಿದೆ’ ಎಂದು ವಿವರಿಸಿದರು.
‘ನಾವು ರಾಷ್ಟ್ರೀಯ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಮಾತನಾಡುತ್ತೇವೆಯೇ ಹೊರತು ಸರ್ಕಾರಿ ಅಥವಾ ಖಾಸಗಿ ವಲಯ ಎಂಬ ಭೇದ ಎಣಿಸುವುದಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ತಂತ್ರಜ್ಞಾನ ಅಭಿವೃದ್ಧಿ ನಿಧಿ ಸ್ಥಾಪಿಸಿದ್ದೇವೆ’ ಎಂದು ಹೇಳಿದರು.
‘ರಕ್ಷಣಾ ಸಲಕರಣೆಗಳ ತಯಾರಿಕೆಯಲ್ಲಿ ದೇಶದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಈ ವಲಯದಿಂದ 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ’ ಎಂದರು.
‘ನಮ್ಮ ಸರ್ಕಾರಿ ಉದ್ದಿಮೆಗಳು ಇನ್ನೂ ಉತ್ತಮ ಸಾಧನೆ ತೋರುವ ಅಗತ್ಯವಿದೆ. ತಮ್ಮ ಸೌಲಭ್ಯ ಹಾಗೂ ಸಾಮರ್ಥ್ಯವನ್ನು ಅವುಗಳು ಇದುವರೆಗೆ ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ’ ಎಂದು ಅಭಿಪ್ರಾಯಪಟ್ಟರು.
ಟೋಪಿ ಧರಿಸಿ ಆಕಾಶದತ್ತ ಕಣ್ಣು
ಉದ್ಘಾಟನಾ ಸಮಾರಂಭದ ಬಳಿಕ ನಡೆದ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಟೋಪಿ ಧರಿಸಕೊಂಡು ಬಿಸಿಲಲ್ಲೇ ಕುಳಿತು ವೀಕ್ಷಿಸಿದರು. ದೇಶಿ ನಿರ್ಮಿತ ‘ತೇಜಸ್’ ಹಗುರ ಯುದ್ಧ ವಿಮಾನ ಗಗನದಲ್ಲಿ ನಡೆಸಿದ ಕಸರತ್ತು ಕಂಡು ಚಪ್ಪಾಳೆ ತಟ್ಟಿದರು. ಧ್ರುವ ಹೆಲಿಕಾಪ್ಟರ್ಗಳನ್ನು ಒಳಗೊಂಡ ‘ಸಾರಂಗ’ ತಂಡದ ಪ್ರದರ್ಶನವೂ ಅವರ ಮನಸೂರೆಗೊಂಡಿತು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಹಾಗೂ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮಳಿಗೆಗಳನ್ನೂ ಅವರು ವೀಕ್ಷಿಸಿದರು.
