ಕರ್ನಾಟಕ

ವಿಜಯಪುರ ಜಿಲ್ಲೆ: ಬಸವನ ಬಾಗೇವಾಡಿ ತಾಲ್ಲೂಕಿನ ರೊಳ್ಳಿ ತಾಂಡಾದಲ್ಲಿ ಹಿಂದೂ ಧರ್ಮಕ್ಕೆ 470 ಕುಟುಂಬ

Pinterest LinkedIn Tumblr

hin

ವಿಜಯಪುರ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಜಿಲ್ಲೆಯ ಬಸವನ ಬಾಗೇವಾಡಿ ಹಾಗೂ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ 11 ತಾಂಡಾಗಳ 470 ಲಂಬಾಣಿ ಕುಟುಂಬಗಳು ವಿಶ್ವ ಹಿಂದೂ ಪರಿಷತ್‌ನ ‘ಘರ್ ವಾಪಸಿ’ ಕಾರ್ಯ­ಕ್ರಮದಡಿ ಹಿಂದೂ ಧರ್ಮಕ್ಕೆ ಮರಳಿವೆ.

‘ಬಸವನ ಬಾಗೇವಾಡಿ ತಾಲ್ಲೂಕಿನ ಕೊಲ್ಹಾರ ಬಳಿಯ ರೊಳ್ಳಿ ತಾಂಡಾ­ದಲ್ಲಿ ಇದೇ ಫೆ.1ರಂದು ನಡೆದ ‘ಘರ್‌ ವಾಪಸಿ’ ಕಾರ್ಯಕ್ರಮದಲ್ಲಿ ಹಣಮಾ­ಪುರ, ಸಿದ್ಧನಾಥ, ಚಿಮ್ಮಲಗಿ ತಾಂಡಾದ ಕುಟುಂಬಗಳು ಸೇರಿದಂತೆ ಬೀಳಗಿ ತಾಲ್ಲೂಕಿನ ಕೆಲ ತಾಂಡಾಗಳ ಕುಟುಂಬ­ಗಳು ಹಿಂದೂ  ಧರ್ಮಕ್ಕೆ ಮರಳಿವೆ’ ಎಂದು ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಸುನೀಲ್‌ ಭೈರವಾಡಗಿ ತಿಳಿಸಿದರು.

ಗೋವಾಕ್ಕೆ ಗುಳೆ ಹೋಗಿದ್ದ ಈ ಭಾಗದ ಬಹುತೇಕ ಕುಟುಂಬಗಳು ವಿವಿಧ ಆಮಿಷಗಳಿಗೆ ಒಳಗಾಗಿ ಮತಾಂತರ ಹೊಂದಿದ್ದವು ಎನ್ನಲಾಗಿದೆ. ‘ವಿಎಚ್‌ಪಿಯ ಸ್ವರ್ಣ ಮಹೋತ್ಸ­ವದ ಅಂಗವಾಗಿ ಕಳೆದ ಡಿಸೆಂಬರ್‌ 30ರಂದು ಇಲ್ಲಿ ನಡೆದ ಜಿಲ್ಲಾ ಹಿಂದೂ ಸಮಾವೇಶದಲ್ಲಿ ಪ್ರವೀಣ್‌ ತೊಗಾ­ಡಿಯಾ ಭಾಷಣ ಮಾಡಿದ ಬಳಿಕ, ಜಿಲ್ಲಾ ಸಂಘಟನೆ ಚುರುಕುಗೊಂಡು, ಹಿಂದೂ ಧರ್ಮ ತೊರೆದವರನ್ನು ಮತ್ತೆ ವಾಪಸ್‌ ಕರೆತರಲು ನಡೆಸಿದ ಯತ್ನದಲ್ಲಿ ಯಶಸ್ಸು ಕಂಡಿದೆ’ ಎಂದು ಅವರು ಹೇಳಿದರು.

‘ತಾಳಿಕೋಟೆ ಸಮೀಪದ ಕೆಸರಟ್ಟಿ ಗ್ರಾಮದ ಸೋಮಲಿಂಗ ಸ್ವಾಮೀಜಿ, ಬಾಗಲಕೋಟೆ ಜಿಲ್ಲೆಯ ಕುಮಾರ ಸ್ವಾಮಿ ಮಹಾರಾಜರು, ಕಲಬುರ್ಗಿ ಜಿಲ್ಲೆಯ ಬಳಿರಾಮ್‌ ಮಹಾರಾಜರ ನೇತೃತ್ವದಲ್ಲಿ ಹೋಮ–ಹವನ, ವಿಶೇಷ ಪೂಜೆ ಮೂಲಕ ಈ 470 ಕುಟುಂಬ­ಗಳನ್ನು ಹಿಂದೂ ಧರ್ಮಕ್ಕೆ ಬರಮಾಡಿ­ಕೊಳ್ಳಲಾಯಿತು’ ಎಂದು ಅವರು ಮಾಹಿತಿ ನೀಡಿದರು.

ಮಾಹಿತಿ ಇಲ್ಲ: ‘ಮರು ಮತಾಂತರ ಕುರಿತು ಜಿಲ್ಲಾಡಳಿತಕ್ಕೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ಈ ಕುರಿತು ವರದಿ ನೀಡುವಂತೆ ಬಸವನ ಬಾಗೇವಾಡಿ ತಾಲ್ಲೂಕು ತಹಶೀ­ಲ್ದಾರರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.

Write A Comment