ಕರ್ನಾಟಕ

ಮುಧೋಳದ ಸಾವಯವ ಬೆಲ್ಲ ರಷ್ಯಾಕ್ಕೆ

Pinterest LinkedIn Tumblr

be

ಬಾಗಲಕೋಟೆ: ಜಿಲ್ಲೆಯ ಮುಧೋಳ­ದಲ್ಲಿರುವ ‘ಜಾಗರಿ ಪಾರ್ಕ್‌’ನಲ್ಲಿ ತಯಾ­­ರಾಗಿ­ರುವ ಉತ್ಕೃಷ್ಟ ಗುಣ­ಮಟ್ಟದ ಪುಡಿ ಬೆಲ್ಲ ರಷ್ಯಾಕ್ಕೆ ರಫ್ತಾಗುತ್ತಿದೆ.

ಮುಧೋಳಕ್ಕೆ ಬಂದಿರುವ ರಷ್ಯಾದ ಮಾಸ್ಕೊ ನಗರದ ವ್ಯಾಪಾರಿ ಅಲೆ­ಕ್ಸಾಂಡರ್‌ ಉಸಾನಿನ್‌, ರೈತರಿಂದ ನೇರ­ವಾಗಿ ಸುಮಾರು 25 ಟನ್‌ ಬೆಲ್ಲ ಖರೀದಿಸಿದ್ದು, ಇನ್ನೂ 250 ಟನ್‌ ಖರೀದಿಸಲಿದ್ದಾರೆ. ಈ ಸಂಬಂಧ ಅವರು ಮುಧೋಳದ ಸಾವಯವ ಕೃಷಿಕರಾದ ಲಕ್ಷ್ಮಣ ಬಿಲ್ಲೂರ, ಮುತ್ತು ಕೋಟಿಮನಿ, ಲಕ್ಷ್ಮಣ ಮಳಲಿ, ರಾಮನಗೌಡ ಪಾಟೀಲ ಅವ­ರೊಂದಿಗೆ ಒಪ್ಪಂದಮಾಡಿ­ಕೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮುಧೋಳ ತಾಲ್ಲೂಕಿನ ನಾಗರಾಳದ ಸಾವಯವ ಕೃಷಿಕ ಲಕ್ಷ್ಮಣ ಬಿಲ್ಲೂರ, ‘ಟನ್‌ಗೆ ₨ 50 ಸಾವಿರ ಬೆಲೆ ನೀಡಿ ಖರೀದಿಸುತ್ತಿದ್ದು, ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತಿದೆ’ ಎಂದರು.

ಇಸ್ಕಾನ್‌ಗೆ ಪೂರೈಕೆ: ‘ರಷ್ಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷ್ಣನ ಭಕ್ತರಿದ್ದು, ಇಲ್ಲಿಂದ ಕೊಂಡೊ­ಯ್ಯವ ಬೆಲ್ಲವನ್ನು ಇಸ್ಕಾನ್‌ನಲ್ಲಿ ಪ್ರಸಾದ ತಯಾರಿಕೆಗೆ ಬಳಸಲಾ­ಗು­ವುದು’ ಎಂದು ಅಲೆ­ಕ್ಸಾಂಡರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮೊದಲು ಬೆಳಗಾವಿ ಮತ್ತು ಮಹಾ­ರಾಷ್ಟ್ರದ ಕೊಲ್ಹಾಪುರದಿಂದ ಖರೀದಿಸ­ಲಾಗುತ್ತಿತ್ತು. ಆದರೆ, ಗುಣ­ಮಟ್ಟದ ಕೊರತೆಯಿಂದಾಗಿ ಈ ವರ್ಷ­ದಿಂದ ಮುಧೋಳದ ಜಾಗರಿ ಪಾರ್ಕ್‌ (ಧಾರವಾಡ ಕೃಷಿ ವಿಶ್ವವಿ­ದ್ಯಾಲಯದ ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆ) ನಿಂದ ಖರೀದಿಸಲಾಗುತ್ತಿದೆ’ ಎಂದರು.

‘ತಯಾರಿಕೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮತ್ತು ಶೇ 2ಕ್ಕಿಂತ ಕಡಿಮೆ ತೇವಾಂಶ ಇರುವ ಗುಣಮಟ್ಟದ ಬೆಲ್ಲ ತಯಾರಿಸಿ, ಪ್ಲಾಸ್ಟಿಕ್‌ ಚೀಲದಲ್ಲಿ ಸಂಗ್ರ­ಹಿ­­ಸುವಂತೆ ರೈತರಿಗೆ ತಿಳಿಸಲಾಗಿದೆ. ಮುಂದಿನ ವರ್ಷ 500ಟನ್‌ ಖರೀದಿ­ಸುವ ಉದ್ದೇಶವಿದೆ’ ಎಂದು ಅವರು ಹೇಳಿದರು.

ದುಬೈನಿಂದಲೂ ಬೇಡಿಕೆ
ಬಾಗಲಕೋಟೆ: ‘ಇಲ್ಲಿ ಉತ್ಕೃಷ್ಟ ಗುಣಮಟ್ಟದ, ಸ್ವಚ್ಛವಾದ ಮತ್ತು ಆರೋಗ್ಯ­ಪೂರ್ಣ­ವಾದ ಜಲಬೆಲ್ಲ (ಜೋನಿ ಬೆಲ್ಲ), ಪುಡಿ ಬೆಲ್ಲ, ಪೆಂಡಿ ಬೆಲ್ಲ ತಯಾರಿಸಿ, ದೇಶ–ವಿದೇಶಗಳ ಮಾರುಕಟ್ಟೆಗೆ ಪೂರೈಕೆ ಮಾಡಲಾಗುತ್ತಿದೆ’ ಎಂದು ‘ಜಾಗರಿ ಪಾರ್ಕ್‌’ ಯೋಜನಾಧಿಕಾರಿ ಡಾ. ಸಿ.ಪಿ.ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ದಿನ 12 ರಿಂದ 16 ಟನ್‌ ಉತ್ಪಾದನೆಯಾಗುತ್ತಿದ್ದು, ದುಬೈ­ನಿಂದಲೂ ಬೇಡಿಕೆ ಬಂದಿದೆ. ಜತೆಗೆ ಹೈದರಾಬಾದ್‌, ಗುಜರಾತ್‌ ಹಾಗೂ ರಾಜ್ಯದ ವಿವಿಧ ನಗರದ ವ್ಯಾಪಾರಿಗಳು ಕೂಡ ಇಲ್ಲಿಂದ  ಖರೀದಿಸುತ್ತಿದ್ದಾರೆ’ ಎಂದರು.

Write A Comment