ಕರ್ನಾಟಕ

ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನ: ಮಾತೃಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಕನ್ನಡಕ್ಕೆ ಕುತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

si

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಧಾನ ವೇದಿಕೆ (ಶ್ರವಣಬೆಳಗೊಳ): ಮಾತೃಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವು ಕನ್ನಡ ಭಾಷೆಗಷ್ಟೇ ಅಲ್ಲ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಬಹುದೊಡ್ಡ ಕುತ್ತಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಆರಂಭವಾದ ಅಖಿಲ ಭಾರತ 81ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯ ಭಾಷೆ ಸಾರ್ವಭೌಮ ಭಾಷೆಯಾ­ಗಬೇಕು. ಬೇರಾವುದೇ ಭಾಷೆ ಆ ನೆಲದ ಬದುಕಿನ ಮೇಲೆ ಪ್ರಭುತ್ವ ಸ್ಥಾಪಿಸು­ವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧ. ಸ್ಥಳೀಯ ಭಾಷೆಯ ಸ್ವಾಯತ್ತತೆ  ಉಳಿಸಿಕೊಂಡೇ, ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿಸಂಹಿತೆ ಎಂದು ಅವರು ಪ್ರತಿಪಾದಿಸಿದರು.

ಈ ಕಾರಣಕ್ಕೆ ಒಂದನೇ ತರಗತಿ­ಯಿಂದ ಐದನೇ ತರಗತಿವರೆಗಿನ ಶಿಕ್ಷಣ ಕಡ್ಡಾಯವಾಗಿ ಕನ್ನಡ­ದಲ್ಲಿಯೇ ಇರತಕ್ಕದ್ದು ಎಂದು ಕಡ್ಡಾಯ ಶಿಕ್ಷಣ ಕಾಯ್ದೆ–2012ಕ್ಕೆ ತಿದ್ದುಪಡಿ ತರಲಾಗಿದೆ. ತಮಿಳು­ನಾಡು ಸರ್ಕಾರ ಸ್ಥಳೀಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿರುವ ಮಾದರಿ ಆಧರಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಈಚೆಗೆ ನಡೆಸಿದ ದೇಶದ ಖ್ಯಾತ ಭಾಷಾತಜ್ಞ ವಿಚಾರ ಸಂಕಿರಣ­ದಲ್ಲಿ ವ್ಯಕ್ತವಾದ ಅಭಿಪ್ರಾಯ ಆಧರಿಸಿ ಮುಂದಿನ ಕಾನೂನು ಮತ್ತು ರಾಜಕೀಯ ಹೋರಾಟದ ಸ್ವರೂಪು ನಿರ್ಧರಿಸಲಾಗುವುದು ಎಂದರು.

ಇಂಗ್ಲಿಷ್ ಭಾಷೆಯ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಹಲ್ಲೆ, ರಾಜ್ಯ ಭಾಷೆಗಳ ಅಳಿವಿಗೆ ಬೀಸಿದ ಪ್ರಹಾರ. ಇಂಗ್ಲಿಷ್ ಈ ನೆಲದ ಮಾತೃಭಾಷೆ­ಯಲ್ಲ. ಅಕಸ್ಮಾತ್ ಮಾತೃಭಾಷೆ­ಯ­ನ್ನಾಗಿ ಇರುವವರು ಯಾರಾದರೂ ಇದ್ದರೆ, ಅವರು ಶೇ 0.5ಗೂ ಕಡಿಮೆ ಇರುವ ಆಂಗ್ಲೊ–ಇಂಡಿ­ಯನ್ನರು ಮಾತ್ರ. ಆದರೆ, ಇಂಗ್ಲಿಷನ್ನೇ ಮಾತೃ­ಭಾಷೆ ಎಂಬ ಮಹಾಸುಳ್ಳನ್ನು ಸತ್ಯವೆಂದು ತಿಳಿದು ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸು­ತ್ತಿರುವ ಸಂಖ್ಯಾ ಪ್ರಮಾಣವನ್ನು ನೋಡಿದರೆ ನ್ಯಾಯ ಎಲ್ಲಿದೆ ? ಎಂದು ಯೋಚಿಸಬೇಕಾಗಿದೆ ಎಂದರು.

ಕಸಾಪ ಸ್ವಾಯತ್ತತೆಗೆ ಧಕ್ಕೆ ತರುವುದಿಲ್ಲ: ಅರಮನೆ ಗುರುಮನೆಗಳಲ್ಲಿದ್ದ ಸಾಹಿತ್ಯವನ್ನು ಜನಸಾಮಾನ್ಯ­ರತ್ತ ತರುವ ಮಹೋದ್ದೇಶದಿಂದ ನಾಲ್ವಡಿ ಕೃಷ್ಣ­ರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿ­ಷತ್ತನ್ನು 1915ರ ಮೇ 3ರಂದು ಸ್ಥಾಪಿಸಿದರು. ಈಗಿನ ಬೆಂಗಳೂರು ಕೋಟೆ ಪ್ರೌಢಶಾಲಾ ಆವರಣ­ದಲ್ಲಿ ಸಭೆ ಸೇರಿ ಎಚ್.ವಿ. ನಂಜುಂಡಯ್ಯ ಅವರನ್ನು ಪರಿಷತ್ತಿನ ಪ್ರಥಮ ಅಧ್ಯಕ್ಷರನ್ನಾಗಿ ಆಯ್ಕೆ ಮಾಡ­ಲಾಯಿತು. ಅಂದಿನಿಂದ ಇಂದಿನವರೆಗೂ ರಾಜ­ಪ್ರಭುತ್ವ­ವಾಗಲಿ, ಪ್ರಜಾಪ್ರಭುತ್ವವಾಗಲಿ ಕಸಾಪದ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಕಸಾಪಗೆ ಇನ್ನಷ್ಟು ಅನುದಾನ: ಈಗಾಗಲೇ ಸಾಹಿತ್ಯ ಸಮ್ಮೇಳನಕ್ಕಾಗಿ ಎರಡು ಕೋಟಿ ರೂಪಾಯಿಯನ್ನು ನೀಡಲಾಗಿದೆ. ಆದರೆ, ಇದು ಸಾಕಾಗು­ತ್ತಿಲ್ಲ ಎಂದು ಮನವಿ ಮಾಡಿರುವು­ದರಿಂದ ಮತ್ತೊಂದು ಕೋಟಿಯನ್ನು ಸದ್ಯದಲ್ಲೆ ನೀಡುತ್ತೇನೆ. ಅಲ್ಲದೇ, ‘ಕಸಾಪ’ದ ಶತಮಾನೋತ್ಸವದ ಕಾರ್ಯ­ಕ್ರಮಗಳಿಗೆ ಸಲ್ಲಿಸಿರುವ ಕ್ರಿಯಾಯೋಜನೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ನೀಡಲಾಗುತ್ತಿರುವ ತಲಾ ಒಂದು ಲಕ್ಷ ರೂಪಾಯಿ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಕೊಡುತ್ತಿರುವ ಅನುದಾನಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.

ಸಮ್ಮೇಳನಗಳು ಜಾತ್ರೆಯಾದರೇ ಸಂಭ್ರಮ!: ಸಮ್ಮೇಳನಗಳು ನಿಜವಾದ ಅರ್ಥ­ದಲ್ಲಿ ಜಾತ್ರೆಯೇ. ಆದರೆ, ಜಾತ್ರೆ ಎಂದು ಕೀಳೆಂದು ನೋಡಬೇಕಾಗಿಲ್ಲ. ಸರ್ವ ಜನಾಂಗಗಳೂ ಸಹಭಾಗಿತ್ವದೊಂದಿಗೆ ಆಚರಿಸುವ ಒಂದು ಮಹೋನ್ನತ ಹಬ್ಬ. ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸರ್ವ ಜನಾಂಗಗಳ ಪಾಲ್ಗೊಳ್ಳುವಿಕೆಯ ಜಾತ್ರೆಯಾಗಿದ್ದರೆ, ಅದು ಸಂಭ್ರಮಿಸ­ಬೇಕಾದ ವಿಚಾರ. ಇದು ಅಕ್ಷರ ಜಾತ್ರೆ. ಇದು ನಾಡ ಬದುಕಿನ ವಿಚಾರಗಳನ್ನು ಕುರಿತು ಚರ್ಚಿಸುವ ನುಡಿ ಜಾತ್ರೆ. ಈ ಜಾತ್ರೆಯಲ್ಲಿ ಅಖಂಡ ಕರ್ನಾಟಕದ ಜನ ಮನಸ್ಸುಗಳು ಪಾಲ್ಗೊಳ್ಳುತ್ತವೆ ಎಂಬುದೇ ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಸಮ್ಮೇಳನಗಳು ಆತ್ಮಾವಲೋಕನದ ವೇದಿಕೆಗಳಾಗಬೇಕು: ಈಚೆಗೆ ಮನುಷ್ಯ- ಮನುಷ್ಯರ ನಡುವೆ ಧರ್ಮ-ಧರ್ಮಗಳ ನಡುವೆ, ಜಾತಿ- ಜಾತಿಗಳ ನಡುವೆ ದ್ವೇಷವನ್ನು ಹುಟ್ಟು ಹಾಕುವ ವಿದ್ಯಮಾನಗಳು ಎಗ್ಗಿಲ್ಲದೇ ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇಂತಹ ಹೊತ್ತಿನಲ್ಲಿ ಸಮ್ಮೇಳನಗಳು ಆತ್ಮಾವಲೋಕನದ ವೇದಿಕೆಗಳಾಗಬೇಕು ಎಂದು ಅಭಿಪ್ರಾಯಪಟ್ಟರು.

ಶ್ರವಣಬೆಳಗೊಳ ಕುರಿತು ಅಭಿಮಾನದ ನುಡಿ: ಗೆದ್ದವನು ಸೋತವನಿಗೆ ಸಾಮ್ರಾಜ್ಯ ಒಪ್ಪಿಸಿದ ಉದಾಹರಣೆ ಜಗತ್ತಿನ ಚರಿತ್ರೆ­ಯಲ್ಲೇ ಇಲ್ಲ. ಇಂತಹ ಅಪರೂಪದ ಕೆಲಸ ಮಾಡಿದ ಬಾಹುಬಲಿಯ ಮೂರ್ತಿ­ವೆತ್ತ ನೆಲವಿದು. ಇಂದು ಬಾಹು­ಬಾಲಿಯ ಆದರ್ಶ ನಮ್ಮದಾಗಬೇಕಿದೆ ಎಂದು ಕರೆ ನೀಡಿದರು.

ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾವ್, ಡಾ. ಎಸ್. ಎಲ್. ಭೈರಪ್ಪ, ಡಾ.ಎಚ್.ಕೆ. ಲಕ್ಕಪ್ಪಗೌಡ, ಬಾನು ಮುಷ್ತಾಕ್ ಮೊದಲಾದವರು ಹಾಸನ ಜಿಲ್ಲೆ­ಯವರು ಎಂದು ನೆನೆದ ಸಿದ್ದರಾಮಯ್ಯ, ಈ ಜಿಲ್ಲೆಯಲ್ಲಿ ಸಮ್ಮೇಳನ ಜರುಗುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

ನಿರ್ಣಯದ ಅನುಷ್ಠಾನದ ಭರವಸೆ: ಸಮ್ಮೇಳನ­ದಲ್ಲಿ ಕೈಗೊಂಡ ನಿರ್ಣ­ಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರ ಪುನರ್‌ಪರಿಶೀಲಿಸಿ ಅನುಷ್ಠಾನ­ಗೊಳಿಸಲು ಪೂರಕವಾದ ವಿಧಿ ವಿಧಾನಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಶ್ರಮಿಸಲಿದೆ ಎಂದು ಅವರು ಭರವಸೆ ನೀಡಿದರು.

ಶ್ರವಣಬೆಳಗೊಳದಲ್ಲಿ ಶಿಲಾಶಾಸನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕೆಂಬ ಇಲ್ಲಿನ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮನವಿಗೆ ಪೂರಕವಾಗಿ ಸ್ಪಂದಿಸಿದ ಅವರು ಈ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ದೇವನೂರರ ಅಭಿಪ್ರಾಯಕ್ಕೆ ಅಸಹಾಯಕತೆಯ ಉತ್ತರ!
‘ಸಾಹಿತಿ ದೇವನೂರ ಮಹದೇವ ಅವರು ಭಾಷಾ ಮಾಧ್ಯಮ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಸರ್ಕಾರದ ಸಮ್ಮತಿ ಇದೆ. ಆದರೆ, ಸಮಸ್ಯೆ ಕೇವಲ ರಾಜ್ಯ ಸರ್ಕಾರದಿಂದ ಮಾತ್ರ ಪರಿಹಾರವಾಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.

‘ಈ ಕುರಿತು ಸರ್ವಪಕ್ಷಗಳ ನಿಯೋಗ­ದೊಂದಿಗೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ’ ಎಂದು ತಾವು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.

Write A Comment