ಕರ್ನಾಟಕ

ಸಂವಿಧಾನ ದಿನಾಚರಣೆ: ವಿಚಾರ ಸಂಕಿರಣ; ದಲಿತರ ಪತನಕ್ಕೆ ಬ್ರಾಹ್ಮಣ್ಯ ಕಾರಣ:ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದ ರಾವ್

Pinterest LinkedIn Tumblr

govindarao

ಬೆಂಗಳೂರು, ಜ. 25: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದಲ್ಲಿನ ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯುವ ಉದ್ದೇಶದಿಂದ ಸಂವಿಧಾನ ರಚಿಸಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ‘ಭಗವದ್ಗೀತೆ’ ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಲು ಹುನ್ನಾರ ನಡೆಸಿದೆ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಕೆಆರ್ ವೃತ್ತದಲ್ಲಿನ ಸರಕಾರಿ ಕಲಾ ಕಾಲೇಜು ಆವರಣದಲ್ಲಿನ ಬಾಪೂಜಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ದಸಂಸ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಒಬ್ಬ ಮನುಷ್ಯನನ್ನು ಮತ್ತೊಬ್ಬ ಮನುಷ್ಯ ಗೌರವಿಸದ ಸಮಾಜ ಸಮಾಜವೇ ಅಲ್ಲ. ಬ್ರಾಹ್ಮಣರು ಶ್ರೇಣಿಕೃತ ವ್ಯವಸ್ಥೆಗೆ ಅಡಿಪಾಯ ಹಾಕಿದ್ದರಿಂದಲೇ ಇಂದು ಶಾಲಾ- ಕಾಲೇಜು, ಸರಕಾರದ ವಿವಿಧ ಇಲಾಖೆಗಳು, ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ದಲಿತರನ್ನು ಕೀಳು ಮನೋಭಾವದಿಂದ ನೋಡುವಂತಾಗಿದೆ. ಹೀಗಾಗಿ ದಲಿತರು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಉನ್ನತ್ತಿ ಹೊಂದಿಲ್ಲ ಎಂದರು.

ಆರೆಸ್ಸೆಸ್, ಬಿಜೆಪಿ ಹಾಗೂ ಸಂಘ ಪರಿವಾರದವರು ಜಾತ್ಯತೀತ ರಾಷ್ಟ್ರವನ್ನು ‘ಹಿಂದೂ ರಾಷ್ಟ್ರ’ ನಿರ್ಮಾಣ ಮಾಡುತ್ತೇವೆಂದು ಹೇಳಿ ಮುಸ್ಲಿಮರು, ಕ್ರೈಸ್ತರು ಹಾಗೂ ಬೌದ್ಧ ಧರ್ಮಿಯರನ್ನು ‘ಘರ್ ವಾಪಸಿ’ ಹೆಸರಿನಲ್ಲಿ ಮರು ಮತಾಂತರ ಮಾಡುತ್ತಿದ್ದು, ಇವರೆಲ್ಲರನ್ನು ಯಾವ ಜಾತಿಗೆ ಸೇರಿಸಿಕೊಳ್ಳುತ್ತಾರೆಂಬ ಬಗ್ಗೆ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ ಎಂದು ಗೋವಿಂದರಾವ್ ಟೀಕಿಸಿದರು.

‘ಘರ್ ವಾಪಸಿ’ ಹೆಸರಿನಲ್ಲಿ ಮರು ಮತಾಂತರಗೊಂಡ ಮುಸ್ಲಿಮ್, ಕ್ರೈಸ್ತ, ಬೌದ್ಧ ಧರ್ಮಿಯರನ್ನು ಬ್ರಾಹ್ಮಣರೇ ತಮ್ಮ ಜಾತಿಗೆ ಸೇರಿಸಿಕೊಂಡು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಅವರಿಗೆ ಕೊಟ್ಟು ಮದುವೆ ಮಾಡಿ ಕೊಡಬೇಕು ಎಂದು ಗೋವಿಂದರಾವ್ ಲೇವಡಿ ಮಾಡಿದರು.

ಎಲ್ಲ ಮಠಗಳ ಸ್ವಾಮೀಜಿಗಳೂ ನಮ್ಮ ನಿಮ್ಮಂತೆಯೆ ಮನುಷ್ಯರಾಗಿದ್ದು, ಅವರ ಕಾಲಿಗೆ ಬಿದ್ದು ನಿಮ್ಮ ಗೌರವವನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದ ಗೋವಿಂದ ರಾವ್, ನಿಮ್ಮ ತಾಯಂದಿರ ಕಾಲಿಗೆ ಬಿದ್ದು ನಿಮ್ಮ ಗೌರವ ಹಾಗೂ ಪುಣ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಇದೇ ವೇಳೆ ಸಲಹೆ ನೀಡಿದರು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳುವಂತೆ ಮಠ-ಮಾನ್ಯಗಳಲ್ಲಿ ಸಾಕಷ್ಟು ಕಪ್ಪುಹಣವಿದ್ದು, ಆ ಹಣವನ್ನು ಶೋಷಣೆಗೆ ಒಳಗಾಗಿರುವ ದಲಿತ-ದಮನಿತರ ಜನರ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕನಿಷ್ಠ ಅಕ್ಷರ ಜ್ಞಾನವುಳ್ಳ ಬ್ರಾಹ್ಮಣರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾಷಣಗಳನ್ನು ಅಭ್ಯಾಸ ಮಾಡಿದರೆ ಅವರು ಸಂವಿಧಾನ ರಚಿಸಿದ್ದರ ಉದ್ದೇಶ ತಿಳಿಯುತ್ತದೆ. ಮಾತ್ರವಲ್ಲ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ್ದೇಕೆ ಎಂಬುದು ಅರಿವಿಗೆ ಬರುತ್ತದೆ ಎಂದರು.

ಬ್ರಾಹ್ಮಣರೇ ಅಸ್ಪಶ್ಯರು: ದೇಶದಲ್ಲಿ ಮನುಷ್ಯ-ಮನುಷ್ಯರ ಮಧ್ಯೆ ತಾರತಮ್ಯ ಸೃಷ್ಟಿಸುವ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದು ಬ್ರಾಹ್ಮಣರು. ಮಾತ್ರವಲ್ಲ ಹೆಚ್ಚು ಅಸ್ಪಶ್ಯರು ಬ್ರಾಹ್ಮಣರೇ ಎಂದು ಗೋವಿಂದರಾವ್ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದರು.

ಸ್ನಾನ ಆದ ಬಳಿಕ ಬ್ರಾಹ್ಮಣರು ‘ಮಡಿ’ ಕಾಪಾಡಿಕೊಳ್ಳಲು ತನ್ನ ಹೆಂಡತಿ ಮತ್ತು ಮಕ್ಕಳನ್ನೇ ಮುಟ್ಟಿಸಿಕೊಳ್ಳುವುದಿಲ್ಲ. ಆದರೆ, ದಲಿತರು ಸ್ನಾನ ಆದ ಬಳಿಕ ಎಲ್ಲರನ್ನು ಮುಟ್ಟಿಸಿಕೊಳ್ಳುತ್ತಾರೆ. ಆದುದರಿಂದ ಬ್ರಾಹ್ಮಣರೇ ಹೆಚ್ಚು ಅಸ್ಪಶ್ಯರು ಎಂಬುದನ್ನು ತೋರಿಸಿಕೊಟ್ಟಿದ್ದಾರೆಂದು ಗೋವಿಂದರಾವ್ ಟೀಕಿಸಿದರು.

ವಿಚರ ಸಂಕಿರಣದಲ್ಲಿ ಹೈಕೋರ್ಟ್ ಸರಕಾರಿ ಅಭಿಯೋಜಕ ಬಿ.ಟಿ.ವೆಂಕಟೇಶ್, ಬೆಂಗಳೂರು ವಿಶ್ವ ವಿದ್ಯಾಲಯದ ಪರೀಕ್ಷೆ ವಿಭಾಗದ ವಿಶೇಷ ಅಧಿಕಾರಿ ಡಾ.ಎಸ್.ಆರ್.ಕೇಶವ, ದಸಂಸ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಮುಖಂಡರಾದ ಇಂದಿರಾ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Write A Comment