ಕರ್ನಾಟಕ

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಬಿಗಿ ಬಂದೋಬಸ್ತ್‌

Pinterest LinkedIn Tumblr

250115R-day-14

ಬೆಂಗಳೂರು:  ನಗರದ ಮಾಣೆಕ್‌ ಷಾ ಕವಾ­ಯತು ಮೈದಾನದಲ್ಲಿ ಸೋಮ­ವಾರ ನಡೆಯಲಿರುವ  ರಾಜ್ಯಮಟ್ಟದ ಗಣರಾಜ್ಯೋತ್ಸವ ಸಮಾರಂಭಕ್ಕೆ ಪೂರ್ವಸಿದ್ಧತೆಗಳು ಪೂರ್ಣ­ಗೊಂ­ಡಿದ್ದು, ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸ­ಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಎಂ.ಎನ್‌.ರೆಡ್ಡಿ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈದಾನದ­ಲ್ಲಿನ ಘಟನೆಗಳ ಬಗ್ಗೆ ನಿಗಾ ವಹಿಸಲು 36 ಸಿಸಿಟಿವಿ ಕ್ಯಾಮೆರಾಗಳನ್ನು ಅಳವ­ಡಿ­ಸ­ಲಾಗಿದೆ. ವಾಚ್‌ ಟವರ್ಸ್‌ಗಳನ್ನು ನಿರ್ಮಿಸಿ ಶಸ್ತ್ರಸಜ್ಜಿತ ಪೊಲೀಸರಿಗೆ ಬೈನಾಕ್ಯುಲರ್ಸ್‌ಗಳನ್ನು ನೀಡಲಾಗಿದೆ’ ಎಂದರು.

‘ಬಂದೋಬಸ್ತ್‌ಗೆ 9 ಡಿಸಿಪಿ, 22 ಎಸಿಪಿ, 96 ಇನ್‌ಸ್ಪೆಕ್ಟರ್‌, 256 ಪಿಎಸ್‌ಐ, 327 ಎಎಸ್‌ಐ, 850 ಹೆಡ್‌ ಕಾನ್‌ಸ್ಟೆಬಲ್‌, 1882 ಕಾನ್‌­ಸ್ಟೆಬಲ್‌, 128 ಮಹಿಳಾ ಸಿಬ್ಬಂದಿ, 37 ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ ತುಕಡಿ, 2 ಕ್ಷಿಪ್ತ ಕಾರ್ಯಾಚರಣೆ ಪಡೆ­ಯನ್ನು ನಿಯೋಜಿಸಲಾಗಿದೆ’ ಎಂದರು.

ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾ­ಯಣ ಮಾತನಾಡಿ, ಬೆಳಿಗ್ಗೆ 9 ಗಂಟೆಗೆ ರಾಜ್ಯ­ಪಾಲ ವಜುಭಾಯಿ ವಾಲಾ ಧ್ವಜಾ­ರೋಹಣ ನೆರವೇರಿಸುವರು. ಈ ಸಂದರ್ಭದಲ್ಲಿ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

‘ಪಥಸಂಚಲನದಲ್ಲಿ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ, ಸೇವಾದಳ, ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಸೇರಿದಂತೆ 63 ತುಕಡಿಗಳಲ್ಲಿ 1900 ಮಂದಿ ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 2650 ವಿದ್ಯಾರ್ಥಿ­ಗಳು ಭಾಗವಹಿಸುವರು’ ಎಂದರು.

‘ಬೆಂಗಳೂರು ಉತ್ತರ ವಲಯದ ವಿವಿಧ ಶಾಲೆಗಳ 750 ಮಕ್ಕಳಿಂದ ಯೋಗಾಸನ, ಚಿಕ್ಕಬಿದರಕಲ್ಲು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ 650 ಮಕ್ಕಳಿಂದ ಹಲಗಲಿ ಬೇಡರು, ಹೆಸರು­ಘಟ್ಟ ಮುಖ್ಯ ರಸ್ತೆಯ ಸೇಂಟ್ ಥೆರೆಸಾ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ತ್ರಿವೇಣಿ ವಿದ್ಯಾಸಂಸ್ಥೆಯ 600 ಮಕ್ಕಳಿಂದ ವಂದೇ ಮಾತರಂ,  ಬನ್ನೇರುಘಟ್ಟ ರಸ್ತೆ ವೀವರ್ಸ್ ಕಾಲೋನಿಯ ಎನ್.ಬಿ.ಎನ್. ವಿದ್ಯಾ­ಮಂದಿರ ಹಾಗೂ ಹೆಬ್ಬಗೋಡಿಯ ಸೇಂಟ್ ಮೇರಿಸ್ ಪ್ರೌಢಶಾಲೆಯ 650 ಮಕ್ಕಳಿಂದ ನವಭಾರತ ಎಂಬ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

‘ಕಾರ್ಯಕ್ರಮ ವೀಕ್ಷಿಸಲು ಬರುವ ಅತಿಗಣ್ಯ, ಗಣ್ಯ, ಆಹ್ವಾನಿತರು ಹಾಗೂ ಸಾರ್ವಜನಿಕರಿಗೆ ಒಟ್ಟು 11 ಸಾವಿರ  ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಜಿ-2 ಪ್ರವೇಶದ್ವಾರದಲ್ಲಿ ಅತಿ ಗಣ್ಯವ್ಯಕ್ತಿಗಳಿಗೆ, ಜಿ-1 ಪ್ರವೇಶದ್ವಾರದಲ್ಲಿ ಗಣ್ಯ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾ­ರರು, ರಕ್ಷಣಾ ಇಲಾಖೆಯ ಅಧಿಕಾರಿ­ಗಳು ಹಾಗೂ ಮಾಧ್ಯಮ ಪ್ರತಿನಿಧಿ-­ಗಳಿಗೆ, ಜಿ-3 ಪ್ರವೇಶದ್ವಾರದಲ್ಲಿ ಇತರ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‍ಎಫ್ ಅಧಿಕಾರಿಗಳಿಗಾಗಿ ಹಾಗೂ ಜಿ-4 ಪ್ರವೇಶದ್ವಾರದಲ್ಲಿ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ’ ಎಂದರು. ಬೆಂಗಳೂರು ನಗರ ಜಿಲ್ಲಾಧಿಕಾರಿ  ವಿ.ಶಂಕರ್ ಇದ್ದರು.

Write A Comment