ಕರ್ನಾಟಕ

ಐಎಂ ಮುಖಂಡನ ಭೇಟಿಯಾಗಿದ್ದ ಬಂಧಿತ ಉಗ್ರ: ಶಾರ್ಜಾದಲ್ಲಿ ಸಲಾಹುದ್ದೀನ್-ಅಫಾಕ್ ಚರ್ಚೆ

Pinterest LinkedIn Tumblr

bamb

ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವ ಭಟ್ಕಳ ಮೂಲದ ಇಬ್ಬರು ಶಂಕಿತ ಉಗ್ರರ ವಿಚಾರಣೆಯಲ್ಲಿ ಹಲವು ಮಹತ್ವದ ಸಂಗತಿಗಳು ಬಯಲಾಗಿದ್ದು, ಬಂಧಿತರಲ್ಲಿ ಪ್ರಮುಖನಾಗಿರುವ ಇಸ್ಮಾಯಿಲ್ ಅಫಾಕ್, ಭಯೋತ್ಪಾದಕ ಸಂಘಟನೆಗಳಾದ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಹಾಗೂ ಇಂಡಿಯನ್ ಮುಜಾಹಿದ್ದೀನ್ (ಐಎಂ) ಮುಖಂಡ ಸಲಾಹುದ್ದೀನ್‌ನನ್ನು ಶಾರ್ಜಾದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದ ಎನ್ನುವುದು ಬೆಳಕಿಗೆ ಬಂದಿದೆ.

ಬಂಧಿತ ಇಸ್ಮಾಯಿಲ್ ಅಫಾಕ್, ಸಿಮಿ ಸಂಘಟನೆಯ ರಾಷ್ಟ್ರೀಯ ನಾಯಕ ಹೈದರಾಬಾದ್ ಮೂಲದ ಸಲಾಹುದ್ದೀನ್‌ನನ್ನು 2011 ಮತ್ತು 2014ರಲ್ಲಿ 2 ಬಾರಿ ಭೇಟಿಯಾಗಿದ್ದ ಎನ್ನುವುದು ವಿಚಾರಣೆ ವೇಳೆ ದೃಢಪಟ್ಟಿದೆ. ಸೋಮವಾರ ವರದಿಗಾರರ ಜತೆ ಮಾತನಾಡಿದ್ದ ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಇದನ್ನು ತಿಳಿಸಿದ್ದರಾದರೂ, ಯಾರು ಯಾರನ್ನು ಭೇಟಿಯಾಗಿದ್ದರು ಎನ್ನುವ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದರು.

2011 ಮತ್ತು 2014ರಲ್ಲಿ ರಾಜ್ಯದ 10 ಮಂದಿ ಸಲಾಹುದ್ದೀನ್‌ನನ್ನು ಶಾರ್ಜಾದಲ್ಲಿ ಭೇಟಿಯಾಗಿದ್ದರು ಎನ್ನುವ ಸಂಗತಿಯನ್ನು ಭಾರತದ ಗುಪ್ತಚರ ಸಂಸ್ಥೆ ‘ರಾ’ (ಆರ್‌ಎಡಬ್ಲ್ಯು-‘ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ಪತೆ ್ತಹಚ್ಚಿತ್ತು. ಅದರಂತೆ ರಾಷ್ಟ್ರೀಯ ತನಿಖಾದಳದ (ಎನ್‌ಐಎ)ಅಧಿಕಾರಿಗಳು ಆ ಹತ್ತು ಮಂದಿಯ ಶೋಧ ನಡೆಸುತ್ತಿದ್ದರು. ಇವರಲ್ಲಿ ಅನ್ವರ್ ಭಟ್ಕಳ್ 2013ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳಿಂದ ಹತನಾಗಿದ್ದ. ಉಳಿದಂತೆ ಹಫೀಜ್, ಶಫಿ, ಸುಲ್ತಾನ್ ಅಮರ್ ಕರಾಚಿಗೆ ತಮ್ಮ ನೆಲೆ ಬದಲಿಸಿಕೊಂಡಿದ್ದರು. ಫರ‌್ಹಾನ್, ಅಬ್ದುಲ್ ವಹಾಬ್ ದುಬೈನಲ್ಲಿ ನೆಲೆಸಿದ್ದಾರೆ. ಖಾಸಿಂ ಕುವೈತ್‌ನಲ್ಲಿದ್ದು, ಅಬ್ದುಲ್ ಹಡ್ಡಿ ಮತ್ತು ಮುಸಾಬ್ ಎಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಇವರಷ್ಟೇ ಅಲ್ಲದೆ ಶಾರ್ಜಾದಲ್ಲಿ ಸಲಾಹುದ್ದೀನ್‌ನನ್ನು ಭೇಟಿಯಾದ ಇನ್ನಿಬ್ಬರು ಯಾರು ಎನ್ನುವುದು ಪತ್ತೆಯಾಗಿರಲಿಲ್ಲ. ಸಿಸಿಬಿ ಪೊಲೀಸರು ಕಳೆದ ಬುಧವಾರ ಬೆಂಗಳೂರಿನಲ್ಲಿ ಬಂಧಿಸಿದ ಇಸ್ಮಾಯಿಲ್ ಅಫಾಕ್ ಹತ್ತು ಮಂದಿಯಲ್ಲಿ ಒಬ್ಬ ಎನ್ನುವುದು ವಿಚಾರಣೆ ವೇಳೆ ದೃಢಪಟ್ಟಿದೆ.

ಎನ್‌ಐಎ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಶೋಧನೆ ನಡೆಸುತ್ತಿದ್ದ ವ್ಯಕ್ತಿ ಇಸ್ಮಾಯಿಲ್ ಅಫಾಕ್ ಎನ್ನುವುದು ಗೊತ್ತಾದ ತಕ್ಷಣ ಎಲ್ಲಾ ತನಿಖಾ ಸಂಸ್ಥೆಗಳ ಅಧಿಕಾರಿಗಳು ಬೆಂಗಳೂರಿಗೆ ಧಾವಿಸಿ ತನಿಖೆಯನ್ನು ಚುರುಕುಗೊಳಿಸಿವೆ.

ಸೂರತ್ ಸರಣಿ ಸ್ಫೋಟ, ಪೂನಾ, ಹೈದರಾಬಾದ್, ಮುಂಬಯಿ ಹಾಗೂ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಸೇರಿದಂತೆ ದೇಶದಲ್ಲಿ ನಡೆದಿರುವ 11 ಮುಖ್ಯ ಸ್ಫೋಟಗಳಿಗೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಹೊಣೆ ಮಾಡಲಾಗಿದೆ. ಈ ಎಲ್ಲಾ ಸ್ಫೋಟಗಳ ಆರೋಪಿಗಳು ಈಗಾಗಲೇ ಬಂಧಿತರಾಗಿದ್ದಾರೆ. ಆದರೆ ಈ ಸ್ಫೋಟಗಳಿಗೆ ಬಳಸಲಾದ ಸ್ಫೋಟಕಗಳ ಬಿಡಿ ಭಾಗಗಳ ಸಂಗ್ರಹ-ಜೋಡಣೆ-ರವಾನೆ ಹೇಗೆ ಎಲ್ಲಿ ಯಾರಿಂದ ನಡೆದಿತ್ತು ಎನ್ನುವುದು ಮಾತ್ರ ಇದುವರೆಗೂ ಸ್ಪಷ್ಟಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇಸ್ಮಾಯಿಲ್ ಅಫಾಕ್ ತಂಡದ ವಿಚಾರಣೆ ಮಹತ್ವ ಪಡೆದುಕೊಂಡಿದೆ.

ಸಿಮಿ ಟು ಐಎಂ
ಸಿಮಿ ಸಂಘಟನೆ ಮೂಲಕ ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದ್ದ ಸಲಾಹುದ್ದೀನ್ ಪಳಗಿದವರನ್ನು ಐಎಂಗೆ ಪರಿಚಯಿಸುತ್ತಿದ್ದ. ಸಿಮಿಯಿಂದ ನಿವೃತ್ತಿ ಘೋಷಿಸಿಕೊಂಡು ದುಬೈಗೆ ತೆರಳಿದ ನಂತರ ಈತ ಐಎಂ ಜತೆ ಸೇರಿಕೊಂಡಿದ್ದ. ಬಾಂಬ್‌ಗಳ ತಯಾರಿಕೆ, ಬಿಡಿ ಭಾಗಗಳ ಸಂಗ್ರಹದಲ್ಲಿ ಪಳಗಿದ್ದ ಈತ ಈ ವಿಭಾಗದಲ್ಲೇ ಐಎಂಗೆ ನೆರವಾಗುತ್ತಿದ್ದ ಎನ್ನುವುದು ಗುಪ್ತಚರ ಇಲಾಖೆಯ ನಂಬಿಕೆ. ಅಫಾಕ್ ತಂಡದ ವಿಚಾರಣೆ ಕೂಡ ಇದೇ ಕೋನದಲ್ಲಿ ನಡೆಯುತ್ತಿದೆ.

ಹೈದರಾಬಾದ್ ಟು ದುಬೈ
ಎಂಜಿನಿಯರಿಂಗ್ ಪದವೀಧರನಾಗಿದ್ದ ಸೈಯದ್ ಸಲಾಹುದ್ದೀನ್ ವಿದ್ಯಾರ್ಥಿ ದೆಸೆಯಲ್ಲೇ ಇಸ್ಲಾಮಿಕ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ. ಸಿಮಿ ಸಂಘಟನೆ ಸೇರಿದ ಸಲಾಹುದ್ದೀನ್ 1998ರಲ್ಲಿ ಅದರ ರಾಷ್ಟ್ರೀಯ ಅಧ್ಯಕ್ಷನಾಗಿ 2000ವರೆಗೂ ಮುಂದುವರಿದಿದ್ದ. ಆನಂತರ ನಾನಾ ಸಂಘಟನೆಗಳ ಜತೆಗೆ ಈತನ ಹೆಸರು ಕೇಳಿಬಂದಿತ್ತು. 2002ರಲ್ಲಿ ಆಂಧ್ರಪ್ರದೇಶದ ದಿಲ್‌ಕುಶ್‌ನಗರದಲ್ಲಿ ನಡೆದ ಸಾಯಿಬಾಬ ದೇವಸ್ಥಾನದ ಸ್ಫೋಟಕ್ಕೆ ಸಂಬಂಧಪಟ್ಟಂತೆ ಎನ್‌ಐಎ ಈತನನ್ನು ಬಂಧಿಸಿತ್ತು. ಆ ನಂತರ ಮಧ್ಯಪ್ರದೇಶದಲ್ಲೂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ. ಆನಂತರ ದೇಶದ ನಾನಾ ಕಡೆ ನಡೆದಿದ್ದ ಸ್ಫೋಟಗಳಲ್ಲೂ ಈತನ ಹೆಸರು ಚಲಾವಣೆಗೆ ಬರತೊಡಗಿದ ನಂತರ ದುಬೈಗೆ ತೆರಳಿ ಹತ್ತಕ್ಕೂ ಹೆಚ್ಚು ವರ್ಷಗಳ ಕಾಲ ಅಲ್ಲೇ ನೆಲೆಸಿದ್ದ. ಆ ಸಂದರ್ಭದಲ್ಲೇ ಇಸ್ಮಾಯಿಲ್ ಅಫಾಕ್ ಉಳಿದವರ ಜತೆಯಲ್ಲಿ ಸಲಾಹುದ್ದೀನ್‌ನನ್ನು ಭೇಟಿಯಾಗಿದ್ದ ಎನ್ನುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಆತ ಬದುಕಿರುವುದೇ ಅನುಮಾನ ?
ಸಲಾಹುದ್ದೀನ್ ದುಬೈನಲ್ಲಿ ನೆಲೆಸಿದ ನಂತರ ಅಲ್ಲಿಂದಲೇ ಇಲ್ಲಿನ ಯುವಕರ ಸಂಪರ್ಕ ಬೆಳೆಸಿ ಅವರನ್ನು ತನ್ನ ಉಗ್ರ ಸಿದ್ಧಾಂತಕ್ಕೆ ಪೂರಕವಾಗಿ ಹದಗೊಳಿಸುತ್ತಿದ್ದ ಎನ್ನುವುದು ಗುಪ್ತಚರ ಇಲಾಖೆಯ ಬಳಿ ಇರುವ ಮಾಹಿತಿ. ಆದರೆ 2014ರ ಅಕ್ಟೋಬರ್‌ನಿಂದ ಆತನ ಚಲನವಲನ ಕುರಿತಾಗಿ ಯಾವುದೇ ಮಾಹಿತಿ ದೇಶದ ಯಾವುದೇ ತನಿಖಾ ಸಂಸ್ಥೆಗೂ ಲಭ್ಯವಾಗಿಲ್ಲ. ಇದುವರೆಗೆ ದೇಶದ ಹಲವೆಡೆ ಬಂಧಿತರಾದವರ ವಿಚಾರಣೆ ನಡೆಸಿದಾಗ ಸಲಾಹುದ್ದೀನ್ ಆಂಧ್ರದ ನಲ್ಗೊಂಡ ಜಿಲ್ಲೆಯಲ್ಲಿ 2014ರ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇದು ಎಷ್ಟರ ಮಟ್ಟಿಗೆ ನಿಜ, ದುಬೈ ಮತ್ತು ಕರಾಚಿಯಿಂದ ಸಲಾಹುದ್ದೀನ್ ಭಾರತಕ್ಕೆ ಮರಳಿದ್ದು ಯಾವಾಗ ಎನ್ನುವ ಪ್ರಶ್ನೆಗಳಿಗಿನ್ನೂ ಉತ್ತರ ಸಿಗಬೇಕಿದೆ ಎನ್ನುತ್ತಾರೆ ಅಧಿಕಾರಿಗಳು.

ರಿಯಾಜ್ ಬಂಧನದ ಅನುಮಾನಗಳು
ಅಫಾಕ್ ತಂಡದ ಬಂಧನದ ನಾಲ್ಕು ದಿನಗಳ ನಂತರ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಶಂಕಿತ ಸೈಯದ್ ರಿಯಾಜ್‌ನನ್ನು ತನಿಖಾಧಿಕಾರಿ ಓಂಕಾರಯ್ಯ ತಂಡ ಬಂಧಿಸಿತ್ತು. ಮೊದಲು ಬಂಧಿತರಾದವರು ಕೊಟ್ಟ ಸುಳಿವಿನ ಮೇರೆಗೆ ರಿಯಾಜ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಇವರುಗಳ ನಡುವೆ ಯಾವ ಸ್ವರೂಪದ ಸಂಬಂಧ ಇತ್ತು ಎನ್ನುವುದನ್ನು ಇನ್ನೂ ಬಹಿರಂಗಗೊಳಿಸಿಲ್ಲ. ಆದರೆ ರಿಯಾಜ್‌ಗೆ ಉಳಿದ ಬಂಧಿತರ ಜತೆಗೆ ಕಾನೂನು ಬಾಹಿರ ಸಂಬಂಧ ಇದ್ದದ್ದೇ ಆದರೆ ಅಫಾಕ್ ತಂಡ ಬಂಧನವಾಗಿ ನಾಲ್ಕು ದಿನಗಳವರೆಗೂ ರಿಯಾಜ್ ತಪ್ಪಿಸಿಕೊಂಡು ಪರಾರಿಯಾಗಲು ಏಕೆ ಯತ್ನಿಸಲಿಲಲ್ಲ ಎನ್ನುವ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ. ಅಲ್ಲದೆ, ರಿಯಾಜ್‌ನ ಪ್ರಯಾಣದ ದಿನಾಂಕ ಅಫಾಕ್ ಬಂಧನಕ್ಕೂ ಮೊದಲೇ ನಿಗದಿಯಾಗಿತ್ತು. ಇದನ್ನು ಬೆಂಗಳೂರು ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಕೂಡ ಒಪ್ಪಿಕೊಳ್ಳುತ್ತಾರೆ. ಸಣ್ಣ ಪುಟ್ಟ ಪ್ರಕರಣಗಳಲ್ಲೇ ಸಹಪಾಠಿಗಳು ಸಿಕ್ಕಿ ಬಿದ್ದ ತಕ್ಷಣ ಅವರ ಸಹಚರರು ಪರಾರಿಯಾಗುವುದು ಮಾಮೂಲು. ಹೀಗಿದ್ದಾಗ ಭಯೋತ್ಪಾದನೆಯಂತಹ ಗಂಭೀರ ಪ್ರಕರಣದಲ್ಲೂ ರಿಯಾಜ್ ತಪ್ಪಿಸಿಕೊಳ್ಳಲು ಯತ್ನಿಸದೆ ನಾಲ್ಕು ದಿನಗಳ ಕಾಲ ಮನೆಯಲ್ಲೇ ಇದ್ದದ್ದು ಏಕೆ ಎಂಬುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Write A Comment