ಕರ್ನಾಟಕ

ಕಸ್ತೂರಿ ರಂಗನ್‌ ವರದಿ: ಗಡುವು ಮುಗಿದರೂ ನಿದ್ದೆಯಲ್ಲಿ ಸರಕಾರ: ಕಸ್ತೂರಿ ರಂಗನ್‌ ವರದಿ ಕುರಿತು ನಿಲುವು ಇನ್ನೂ ಅಸ್ಪಷ್ಟ

Pinterest LinkedIn Tumblr

WESTERN_GHATS_1692743f

ರಾಜ್ಯದ ಹತ್ತು ಜಿಲ್ಲೆಗಳ ಅರಣ್ಯಕ್ಕೆ ಹೊಂದಿಕೊಂಡ 1,576 ಗ್ರಾಮಗಳ ನಿವಾಸಿಗಳ ಮೇಲೆ ಡಾ. ಕಸ್ತೂರಿ ರಂಗನ್ ವರದಿಯ ತೂಗುಗತ್ತಿಯ ಭಯ ಹುಟ್ಟಿಸಿದ್ದರೂ, ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸದೆ ಸುದೀರ್ಘ ನಿದ್ದೆಯಲ್ಲಿ ಮುಳುಗಿ ಇದೀಗ ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿದೆ.

ಕೇರಳದ 123 ಗ್ರಾಮಗಳು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಬರಲಿದ್ದರೂ, ಅಲ್ಲಿನ ಸರಕಾರ ಜನರೊಂದಿಗೆ ಧ್ವನಿಗೂಡಿಸಿ ಪ್ರತಿಭಟನೆಯ ಅಲೆ ಎಬ್ಬಿಸಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ತನ್ನ ನಿಷ್ಠುರ ಆಕ್ಷೇಪಣೆ ಸಲ್ಲಿಸಿದೆ. ಕರ್ನಾಟಕದ 10 ಜಿಲ್ಲೆಯ 40 ತಾಲೂಕುಗಳ 1,576 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರಲಿದೆ ಎಂಬ ಸತ್ಯ ಗೊತ್ತಿದ್ದರೂ ರಾಜ್ಯ ಸರಕಾರ ತನ್ನ ಮಹತ್ವದ ಜವಾಬ್ದಾರಿ ಮರೆತು ಕುಳಿತಿದೆ. ಸಚಿವ ಸಂಪುಟ ಉಪಸಮಿತಿ ರಚಿಸಿ, ನಾಲ್ಕೈದು ಸಭೆ ನಡೆಸಿದ್ದು ಬಿಟ್ಟರೆ ಜನರ ಅಹವಾಲು ಕೇಳಿಲ್ಲ. ತನ್ನ ನಿಲುವು, ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿಲ್ಲ.

ಗಡುವು ಮುಗಿದರೂ…
ಕಸ್ತೂರಿ ರಂಗನ್ ನೀಡಿದ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದ ಕೇಂದ್ರ ಪರಿಸರ ಸಚಿವಾಲಯ, ಕರಡು ಅಧಿಸೂಚನೆ ಪ್ರಕಟಿಸಿತ್ತು. ಅಲ್ಲದೇ 2014ರ ಮಾರ್ಚ್‌ನಲ್ಲಿಯೇ ಅಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು. ಡಿ.26ರ ಅಂತಿಮ ಗಡುವು ನೀಡಿತ್ತು. ಹಾಗಿದ್ದರೂ ರಾಜ್ಯ ಸರಕಾರ ಮುಂಜಾಗ್ರತೆ, ಜನಪರ ಕಾಳಜಿ ತೋರದೆ ವಿಳಂಬ ಧೋರಣೆ ತಾಳಿದೆ.

ವಿಧಾನಮಂಡಲದ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಯಾದಾಗ ಅರಣ್ಯ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸುವ ಶಾಸ್ತ್ರ ಮಾಡಿದ್ದ ಸರಕಾರ, ಈ ಕುರಿತು ನಿರ್ಲಕ್ಷ್ಯ ತಾಳುತ್ತ ಬಂದಿದೆ. ಕಸ್ತೂರಿ ರಂಗನ್ ವರದಿಯಿಂದ ಸಂಕಷ್ಟಕ್ಕೆ ಈಡಾಗುವ ಜನರು ಪ್ರತಿಭಟನೆಗೆ ಇಳಿದಾಗ ಸ್ಪಂದಿಸದ ಸರಕಾರ, ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತಿದೆ. ಅಲ್ಲದೇ ಅಹವಾಲು ಸ್ವೀಕರಿಸುವ ಮಟ್ಟಿಗೆ ತನ್ನ ಆಸಕ್ತಿಯನ್ನು ತೋರಿಸಿದೆ.

ತಡವಾಗಿ ಎಚ್ಚರ
ಜನರ ಕೂಗು, ಆಕ್ರೋಶ ಮಡುಗಟ್ಟಿ ರಾಜ್ಯ ಸರಕಾರದ ವಿರುದ್ಧವೇ ಪ್ರತಿಭಟನೆಗಳ ಮಹಾಪೂರ ಶುರುವಾದ ಬಳಿಕ ಸಚಿವ ಸಂಪುಟ ಉಪ ಸಮಿತಿಯು ಜಿಲ್ಲಾವಾರು ಭೇಟಿ ನೀಡಿ ಅಹವಾಲು ಸ್ವೀಕಾರಕ್ಕೆ ಮುಂದಾಗಿದೆ. ಜ.20ರಿಂದ 31ರೊಳಗೆ ಎರಡು ತಂಡಗಳಲ್ಲಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಆಯೋಜಿಸಿದೆ. ಏತನ್ಮಧ್ಯೆ ಜ.21ರಂದು ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಒಂದು ದಿನ ಬದಲಾವಣೆಯಾಗಲಿದೆ.

”ಅಹವಾಲು ಸ್ವೀಕಾರದ ಬಳಿಕ ಮತ್ತೊಮ್ಮೆ ಸಚಿವ ಸಂಪುಟ ಉಪಸಮಿತಿ ಸಭೆ ಸೇರಿ ಚರ್ಚಿಸಿ, ಕಸ್ತೂರಿ ರಂಗನ್ ವರದಿ ಕುರಿತು ಸರಕಾರ ಯಾವ ನಿಲುವು ತಾಳಬೇಕೆಂದು ಸಚಿವ ಸಂಪುಟಕ್ಕೆ ಶಿಫಾರಸು ಮಾಡಲಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ, ಕೇಂದ್ರಕ್ಕೆ ತನ್ನ ಆಕ್ಷೇಪಣೆ ಸಲ್ಲಿಸಲಿದೆ,”ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ವಿಕಗೆ ತಿಳಿಸಿದ್ದಾರೆ.

ಸದ್ಯಕ್ಕೆ ನಿರಾಳ
ಇತ್ತೀಚೆಗೆ ಕೇಂದ್ರ ಪರಿಸರ ಸಚಿವಾಲಯದ ಕಾರ್ಯದರ್ಶಿಯವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಕಳಿಸಿದ ಅಧಿಕೃತ ಟಿಪ್ಪಣಿಯಲ್ಲಿ ‘ಕಸ್ತೂರಿ ರಂಗನ್ ವರದಿ ಆಧರಿಸಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗುವ ಎಲ್ಲಾ ರಾಜ್ಯಗಳ ಆಕ್ಷೇಪಣೆ, ಅಹವಾಲು ಸಲ್ಲಿಕೆಯಾದ ಬಳಿಕ ಪರಿಷ್ಕೃತ ಕರಡು ಅಧಿಸೂಚನೆಯನ್ನು ಹೊಸದಾಗಿ ಹೊರಡಿಸಲಿದೆ. ಸಂಬಂಧಪಟ್ಟ ರಾಜ್ಯಗಳು, ಬಾಧಿತರ ಅಹವಾಲು ಆಲಿಸಲು ಸಮಯಾವಾಕಾಶ ನೀಡಿದ ಬಳಿಕವೇ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು’ ಎನ್ನುವ ಒಕ್ಕಣೆ ಬರೆದಿದೆ ಎಂದು ಅರಣ್ಯ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

ಅಲ್ಲಿಗೆ ಡಿ.26ರೊಳಗೆ ಆಕ್ಷೇಪಣೆ ಸಲ್ಲಿಸದೇ ಇದ್ದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ಅಂತಿಮ ಅಧಿಸೂಚನೆ ಹೊರಡಿಸುವ ಅಪಾಯಕಾರಿ ತೂಗುಗತ್ತಿ ಸದ್ಯಕ್ಕೆ ತೊಲಗಿದಂತಾಗಿದೆ. ಕೇಂದ್ರ ಪರಿಸರ ಸಚಿವಾಲಯ ಗಡುವು ವಿಧಿಸದೇ ಇರುವುದರಿಂದ ಆಕ್ಷೇಪಣೆ ಸಲ್ಲಿಕೆಗೆ ಇನ್ನಷ್ಟು ಅವಧಿ ಸಿಕ್ಕಂತಾಗಿದೆ. ಸರಕಾರ ಇದನ್ನು ಬಳಸಿಕೊಂಡು ಸಮರ್ಪಕವಾಗಿ ರಾಜ್ಯದ ನಿಲುವು ಮಂಡಿಸಲು ಅವಕಾಶ ದೊರೆತಂತಾಗಿದೆ.

ಉಪ ಸಮಿತಿಯಲ್ಲಿ ಯಾರಿದ್ದಾರೆ?
ಡಾ.ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ರಾಜ್ಯ ಸರಕಾರ ತಾಳಬೇಕಾದ ನಿಲುವನ್ನು ನಿರ್ಧರಿಸಲು ಅರಣ್ಯ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿತ್ತು. ರಮಾನಾಥ ರೈ, ಜಯಚಂದ್ರ, ವಿನಯಕುಮಾರ್ ಸೊರಕೆ ಒಂದು ತಂಡದಲ್ಲಿದ್ದರು. ದೇಶಪಾಂಡೆ, ಮಹದೇವ ಪ್ರಸಾದ್, ಡಿ.ಕೆ. ಶಿವಕುಮಾರ್ ಮತ್ತೊಂದು ತಂಡದಲ್ಲಿ ಜ.20ರಿಂದ 31ರವರೆಗೆ ಜಿಲ್ಲಾವಾರು ಪ್ರವಾಸ ಕೈಗೊಳ್ಳಲಿದ್ದಾರೆ.

ಸಚಿವ ಸಂಪುಟ ಉಪಸಮಿತಿ ಹಲವು ಬಾರಿ ಚರ್ಚಿಸಿದೆ. ಕೇರಳಕ್ಕಿಂತ ಪರಿಣಾಮಕಾರಿಯಾದ ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಿದೆ. ಈ ಮಧ್ಯೆ ಹೊಸದಾಗಿ ನೋಟಿಫಿಕೇಶನ್ ಹೊರಡಿಸುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಈಗ ಅಂತಿಮ ಗಡುವಿನ ಪ್ರಶ್ನೆಯಿಲ್ಲ. ಚುನಾವಣೆ ಬಂದಿದ್ದರಿಂದ ಸ್ವಲ್ಪ ನಿಧಾನವಾಯಿತು. ತಕ್ಷಣವೇ ಸಭೆ ಸೇರಿ, ಸಚಿವ ಸಂಪುಟದ ಅಂಗೀಕಾರ ಪಡೆದು ಕೇಂದ್ರಕ್ಕೆ ಕಳಿಸಲಾಗುವುದು. ರಾಜ್ಯದ ಜನರಿಗೆ ಅನ್ಯಾಯವಾಗಲು, ತೊಂದರೆಯಾಗದಂತೆ ಸರಕಾರ ತನ್ನ ಬದ್ಧತೆ ಪ್ರದರ್ಶಿಸಲಿದೆ.
-ಬಿ.ರಮಾನಾಥ ರೈ, ಅರಣ್ಯ ಸಚಿವ

ಆರು ರಾಜ್ಯಗಳ ಪಶ್ಚಿಮಘಟ್ಟ ವ್ಯಾಪ್ತಿಯ 59,940 ಸಾವಿರ ಕಿ.ಮೀ ವ್ಯಾಪ್ತಿ ಅಂದರೆ, ಶೇ. 36.49 ಭಾಗವನ್ನು ವರದಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕಸ್ತೂರಿ ರಂಗನ್ ವರದಿ ಗುರುತಿಸಿದೆ. ಕರ್ನಾಟಕದಲ್ಲಿ 44,448 ಚ.ಕಿ.ಮೀ ವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟ ಹರಡಿದೆ. ಈ ಪೈಕಿ 20668 ಚ.ಕಿ.ಮೀ, ಅಂದರೆ ಶೇ.45ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. 40 ತಾಲೂಕುಗಳ 1576 ಗ್ರಾಮಗಳು ಇದರಲ್ಲಿ ಸೇರಿವೆ.

ಯಾವ ರಾಜ್ಯದಲ್ಲಿ ಎಷ್ಟು?(ಚ.ಕಿ.ಮೀ)
ರಾಜ್ಯ ಪರಿಸರ ಸೂಕ್ಷ್ಮ ಪ್ರದೇಶ
ಕರ್ನಾಟಕ 4444820,668
ಕೇರಳ 2969313,108
ತಮಿಳುನಾಡು 270696914
ಮಹಾರಾಷ್ಟ್ರ 5534517340
ಗುಜರಾತ್ 5976449
ಗೋವಾ 17491461

ಜಿಲ್ಲೆ ಮತ್ತು ಗ್ರಾಮಗಳು
ಬೆಳಗಾವಿ: ಬೆಳಗಾವಿ ತಾ.-1 ಗ್ರಾಮ, ಖಾನಾಪುರ-62 ಗ್ರಾಮಗಳು
ಚಾಮರಾಜ ನಗರ: ಗುಂಡ್ಲುಪೇಟೆ-21
ಚಿಕ್ಕಮಗಳೂರು: ಚಿಕ್ಕಮಗಳೂರು ತಾ.-27, ಕೊಪ್ಪ-32, ಮೂಡಿಗೆರೆ-27, ನರಸಿಂಹರಾಜಪುರ-35, ಶೃಂಗೇರಿ-26
ಕೊಡಗು: ಮಡಿಕೇರಿ-23, ಸೋಮವಾರಪೇಟೆ-11, ವಿರಾಜಪೇಟೆ-21.
ಹಾಸನ: ಆಲೂರು-1, ಸಕಲೇಶಪುರ-34
ಉತ್ತರ ಕನ್ನಡ: ಅಂಕೋಲ-43, ಭಟ್ಕಳ-28, ಹೊನ್ನಾವರ-44, ಜೋಯಿಡಾ-110, ಕಾರವಾರ-39, ಕುಮಟಾ-43, ಸಿದ್ದಾಪುರ-107, ಶಿರಸಿ-125, ಯಲ್ಲಾಪುರ-87.
ದಕ್ಷಿಣ ಕನ್ನಡ: ಬೆಳ್ತಂಗಡಿ-17, ಪುತ್ತೂರು-11, ಸುಳ್ಯ-18,
ಮೈಸೂರು: ಹೆಗ್ಗಡದೇವನಕೋಟೆ-62.
ಶಿವಮೊಗ್ಗ : ಹೊಸನಗರ: 126, ಸಾಗರ-134, ಶಿಕಾರಿಪುರ-12, ಶಿವಮೊಗ್ಗ-66, ತೀರ್ಥಹಳ್ಳಿ-146.
ಉಡುಪಿ : ಕಾರ್ಕಳ- 13, ಕುಂದಾಪುರ-24 ಗ್ರಾಮಗಳು.

Write A Comment