ಕರ್ನಾಟಕ

ಹುಬ್ಬಳ್ಳಿ: ರೈಲ್ವೆ ಕಾರ್ಯಾಗಾರದಲ್ಲಿ ಬೆಂಕಿ

Pinterest LinkedIn Tumblr

fire

ಹುಬ್ಬಳ್ಳಿ: ನಗರದ ಗದಗ ರಸ್ತೆಯಲ್ಲಿ­ರುವ ನೈರುತ್ಯ ರೈಲ್ವೆಯ ಕಾರ್ಯಾ­ಗಾರದ ಆವರಣದಲ್ಲಿ ಸಂಗ್ರಹಿಸಿಡ­ಲಾ­ಗಿದ್ದ ಅನುಪಯುಕ್ತ ವಸ್ತುಗಳಿಗೆ ಬುಧ­ವಾರ ಮಧ್ಯಾಹ್ನ ಬೆಂಕಿ ತಗುಲಿ, ದಟ್ಟ ಹೊಗೆ ಆವರಿಸಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಬ್ಯಾಟರಿ ವಿಭಾಗ ಮತ್ತು ರೆಕ್ಸಿನ್‌ ಇಡಲಾಗಿದ್ದ ಗೋದಾಮು ಸಮೀಪ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾರ್ಯಾ­ಗಾರದ ಸಿಬ್ಬಂದಿ ಗಾಬರಿಗೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಐದು ತಾಸಿಗೂ ಹೆಚ್ಚು ಹೊತ್ತು ನಡೆಸಿದ ಕಾರ್ಯಾ­ಚರ­ಣೆಯಿಂದ ಭಾರಿ ಅನಾಹುತ ತಪ್ಪಿದೆ.

ಪೇಯಿಂಟ್‌, ಬೋಗಿಗಳ ಆಸನಗಳಿಗೆ ಹಾಕಿ ಉಳಿದ ರೆಕ್ಸಿನ್‌ ತುಂಡುಗಳು, ದುರಸ್ತಿ ಬಳಿಕ ಉಳಿದ ಲೋಹಗಳು ಮತ್ತಿತರ ತ್ಯಾಜ್ಯಗಳ ಪೈಕಿ ಕೆಲವನ್ನು ಕಾರ್ಯಾಗಾರದ ಆವರಣದ ಶೆಡ್‌­ನಲ್ಲಿ ಪ್ರತಿದಿನ ಸುಡಲಾಗುತ್ತದೆ. ಬುಧವಾರವೂ ಕೆಲವು ವಸ್ತುಗಳನ್ನು ಸುಡ­ಲಾಗಿತ್ತು.

ಈ ವೇಳೆ ಸುತ್ತಲಿನ ಒಣಗಿದ ಹುಲ್ಲುಗಳಿಗೆ ಬೆಂಕಿ ವ್ಯಾಪಿಸಿ, ಬಳಿಕ ರಾಶಿ ಹಾಕಲಾಗಿದ್ದ ಇತರ ತ್ಯಾಜ್ಯಕ್ಕೂ ಬೆಂಕಿ ಹೊತ್ತಿಕೊಂಡಿತು. ಕೆಲ­ಹೊತ್ತು ಕಾರ್ಯಾಗಾರದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರೂ ಮಧ್ಯಾಹ್ನ 12ರ ಸುಮಾರಿಗೆ ತ್ಯಾಜ್ಯ­ವಿದ್ದ ಇಡೀ ಪ್ರದೇಶವನ್ನು ಬೆಂಕಿ ಆವರಿ­ಸಿಕೊಂಡಿತು. ಸಮೀಪದಲ್ಲಿದ್ದ ಕೆಲವು ಮರಗಳೂ ಸುಟ್ಟು ಕರಕಲಾಗಿವೆ.

ಬೆಂಕಿ ಮತ್ತಷ್ಟು ಪ್ರದೇಶಕ್ಕೆ ವ್ಯಾಪಿಸು­ತ್ತಿರುವುದನ್ನು ಕಂಡು ಆತಂಕಗೊಂಡ ಕಾರ್ಯಾಗಾರದ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಐದು ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ, ಹರಸಾಹಸ ನಡೆಸಿ ಬೆಂಕಿ ನಂದಿಸಿ­ದರು. ಕಾರ್ಯಾ­ಗಾರದ ಸಿಬ್ಬಂದಿ ಕೂಡ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

‘ಬೋಗಿಗಳನ್ನು ದುರಸ್ತಿಗೊಳಿಸಿದ ಬಳಿಕ ಉಳಿದ ತ್ಯಾಜ್ಯಗಳನ್ನು ಹಾಕಿದ ಜಾಗದಲ್ಲಿ ಬೆಂಕಿ ಹೊತ್ತಿಕೊಂಡಿತು.   ತ್ಯಾಜ್ಯಕ್ಕೆ ಬೆಂಕಿ ತಗುಲಿದ್ದರಿಂದ ರೈಲ್ವೆಗೆ ಯಾವುದೇ ನಷ್ಟವಾಗಿಲ್ಲ’ ಎಂದು ಕಾರ್ಯಾಗಾರದ ಮುಖ್ಯ ವ್ಯವಸ್ಥಾಪಕ ಕಾರ್ಯಾಗಾರ ಅಜಯಕುಮಾರ್‌ ತಿಳಿಸಿದರು.

Write A Comment