ಬೆಂಗಳೂರು, ಜ.10: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಮುಂತಾದವರು ಪ್ರಯಾಣಿಸಲು ಕುಳಿತಿದ್ದ ಹೆಲಿಕಾಪ್ಟರ್‌ನ ಸೈಲೆನ್ಸರ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸಿ ಶಬ್ದ ಕೇಳಿಬಂದಿದ್ದು, ಪೈಲೆಟ್‌ನ ಸಮಯ ಪ್ರಜ್ಞೆಯಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಜಂಟಿ ಕಾರ್ಯದರ್ಶಿ ರಾಮಯ್ಯ ಮತ್ತಿರರು ಕರ್ನಾಟಕ ಸರ್ಕಾರದ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಹೊರಟಿದ್ದರು.
ಹೆಲಿಕಾಪ್ಟರ್ ಹತ್ತಿ ಎಲ್ಲರೂ ಕುಳಿತು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ತಾಂತ್ರಿಕ ದೋಷದಿಂದಾಗಿ ಸೈಲೆನ್ಸರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿದೆ. ಸಿಡಿದ ಶಬ್ದ ಕೇಳಿಬಂದಿದೆ. ಕೂಡಲೇ ಪೈಲೆಟ್ ಎಲ್ಲರನ್ನೂ ಕೆಳಗಿಳಿಸಿದ್ದರಿಂದ ಸಂಭಾವ್ಯ ಅನಾಹುತವೊಂದು ತಪ್ಪಿದಂತಾಯಿತು.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಎಚ್‌ಎಎಲ್‌ನಿಂದ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದರು. ಈ ಘಟನೆಯಿಂದ ಕಂಗಾಲಾದ ವಿಮಾನ ನಿಲ್ದಾಣ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹೆಲಿಕಾಪ್ಟರ್‌ನಲ್ಲಿದ್ದ ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಯಾವುದೇ ಅಪಾಯಕ್ಕೆ ಅವಕಾಶವಿಲ್ಲದಂತೆ ಕೆಳಕ್ಕಿಳಿಸಿಕೊಂಡರು. ಘಟನೆ ನಂತರ ಕೆಲ ಸಮಯ ವಿಮಾನ ನಿಲ್ದಾಣದಲ್ಲಿದ್ದ ವಿಐಪಿ ಕೊಠಡಿಯಲ್ಲಿ ತಂಗಿದ ಸಿದ್ದರಾಮಯ್ಯ ಮತ್ತಿತರರು ರಸ್ತೆ ಮೂಲಕ ವಿಶೇಷ ವಾಹನದಲ್ಲಿ ಮೈಸೂರಿಗೆ ತೆರಳಿದರು.
ತಜ್ಞರಿಂದ ತನಿಖೆ: ಇಂದು ಬೆಳಗ್ಗೆ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಹೊರಡಲೆಂದು ಹೆಲಿಕಾಪ್ಟರ್‌ನಲ್ಲಿ ಕುಳಿತ ಸಂದರ್ಭದಲ್ಲಿ ಸಣ್ಣ ಸದ್ದು ಕೇಳಿತು. ಕೂಡಲೇ ಪೈಲೆಟ್ ಸೈಲೆನ್ಸರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಎಲ್ಲರನ್ನು ಕೆಳಗಿಳಿಸಿದರು. ಇದರಿಂದ ಯಾವುದೇ ರೀತಿಯ ಅಪಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಆದರೆ ಈ ರೀತಿಯಾಗಲು ಕಾರಣವೇನು? ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲವೆ ಎಂಬ ಬಗ್ಗೆ ತಜ್ಞರರಿಂದ ತನಿಖೆ ನಡೆಸುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.