ಕರ್ನಾಟಕ

ಸಾಕುಪ್ರಾಣಿಗೂ ಕುರಕಲು ಬೇಕರಿ

Pinterest LinkedIn Tumblr

ಬೆಕರಿ

ಸಾಕುಪ್ರಾಣಿಗಳೆಂದರೆ ಬಲು ಮುದ್ದು. ಅದಕ್ಕೇ ಸ್ಪಾ, ಸಲೂನ್‌, ಕ್ಯಾಬ್‌ ಸೇವೆ ಸೇರಿದಂತೆ ಮನುಷ್ಯ ಅನುಭವಿಸುವ ಎಷ್ಟೋ ಸೌಕರ್ಯಗಳನ್ನು ಅವುಗಳಿಗೂ ಒದಗಿಸಲಾಗುತ್ತಿದೆ. ಪೆಟ್‌ ಬೇಕರಿಗಳು ಈ ಪಟ್ಟಿಗೆ ಸೇರ್ಪಡೆಯಾಗಿವೆ. ಹುಟ್ಟಿದ ಹಬ್ಬ, ಸಂತೋಷಕೂಟಗಳಿಗೆ ಕೇಕ್‌ ಆರ್ಡರ್‌ ಮಾಡುತ್ತೇವೆ. ಸಾಕುಪ್ರಾಣಿಗಳ ಹುಟ್ಟು ಹಬ್ಬದಲ್ಲೂ ಮನುಷ್ಯರು ತಿನ್ನುವ ಕೇಕನ್ನೇ ತಂದು ಸಂಭ್ರಮಿಸುತ್ತೇವೆ. ಆದರೆ ಈಗ ಕಾಲ ಬದಲಾಗಿದೆ. ಮುದ್ದಿನ ಶ್ವಾನ, ಬೆಕ್ಕು, ಮೊಲಗಳಿಗಾಗಿ ಪ್ರತ್ಯೇಕವಾಗಿ ಕೇಕ್ಸ್‌, ಕುಕ್ಕೀಸ್‌, ವೆಜ್‌ ಹಾಗೂ ನಾನ್‌ವೆಜ್‌ನ ಹೊಸ ರೀತಿಯ ಪೇಸ್ಟ್ರೀಸ್‌ ತಯಾರಿಸುವ ಬೇಕರಿಗಳು ಹುಟ್ಟಿಕೊಂಡಿವೆ.

ಶ್ವಾನ, ಬೆಕ್ಕು ಸೇರಿದಂತೆ ಮನೆಯಲ್ಲಿರುವ ಪುಟಾಣಿ ಸಾಕುಪ್ರಾಣಿಗಳಿಗೆ ಇಷ್ಟವಾಗುವ, ಅವುಗಳ ಆರೋಗ್ಯಕ್ಕೆ ಹಾನಿ ಮಾಡದಂಥ, ಅವುಗಳ ರುಚಿ, ದೇಹ ಪ್ರಕೃತಿಗೆ ಅನುಗುಣವಾದ ಹೊಸ ರೆಸಿಪಿಗಳನ್ನು ತಯಾರು ಮಾಡುತ್ತಿದ್ದಾರೆ. ಇಂಥ ತಿನಿಸುಗಳನ್ನು ಮಾರುವ ಆನ್‌ಲೈನ್‌ನ ಹಾಗೂ ಅಂಗಡಿ ಸ್ವರೂಪದ ಪೆಟ್‌ ಬೇಕರಿಗಳು ತಲೆಎತ್ತಿವೆ.

ನಗರದ ಹಳೇ ವಿಮಾನ ನಿಲ್ದಾಣ, ಎಚ್‌ಎಎಲ್‌ ಬಳಿ ‘ಬೋನ್‌ ಆಪಿಟೈಟ್‌’ ಪೆಟ್‌ ಬೇಕರಿಯು ಸಾಕುಪ್ರಾಣಿಗಳ ರುಚಿಗೆ ತಕ್ಕಂತೆ ಹೊಸ ಹೊಸ ಖಾದ್ಯಗಳನ್ನು ಉಣಬಡಿಸುತ್ತಿದೆ. ಪ್ರಾಣಿಪ್ರಿಯರು ತಮ್ಮ ನೆಚ್ಚಿನ ಪ್ರಾಣಿಗೆ ಇಷ್ಟವಾದ ಫ್ಲೇವರ್‌ ಹಾಗೂ ರುಚಿಕರ ಪೇಸ್ಟ್ರಿಗಳನ್ನು ಆರ್ಡರ್‌ ಮಾಡಿ ಮನೆಗೆ ಕೊಂಡೊಯ್ಯುತ್ತಿದ್ದಾರೆ.

ಪ್ರಿಯಾ ಕುಲಕರ್ಣಿ ಹಾಗೂ ಶ್ರುತಿ ಕಳೆದ ಎರಡು ವರ್ಷಗಳಿಂದ ಈ ಬೇಕರಿ ನಡೆಸುತ್ತಿದ್ದಾರೆ. ಇಬ್ಬರೂ ಪ್ರಾಣಿಪ್ರಿಯರು. ಹೀಗಾಗಿಯೇ ಮನೆಯಲ್ಲಿ ಇದ್ದ ಶ್ವಾನಗಳಿಗೆ ನಿತ್ಯ ನೀಡುತ್ತಿದ್ದ ಬೋರಿಂಗ್‌ ತಿಂಡಿಯಿಂದ ಮುಕ್ತಿ ನೀಡಲು ಮನೆಯಲ್ಲೇ ಹೊಸ ಹೊಸ ರೆಸಿಪಿ ತಯಾರಿಸಲು ಪ್ರಾರಂಭಿಸಿದರು. ನಂತರ ಅದು ಶ್ವಾನಗಳಿಗೂ ಇಷ್ಟವಾಗತೊಡಗಿತು.

‘ನನ್ನ ಹಾಗೂ ಶ್ರುತಿ ಇಬ್ಬರ ಬಳಿಯೂ ನಾಯಿಗಳಿವೆ. ಅವುಗಳಿಗಾಗಿ ಮನೆಯಲ್ಲೇ ಹೊಸ ಹೊಸ ಖಾದ್ಯಗಳನ್ನು ಹಾಗೂ ಕೇಕ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆವು. ಆಗ ಸ್ನೇಹಿತರಿಂದಲೂ ಬೇಡಿಕೆ ಬಂತು. ಪೆಟ್‌ ಬೇಕರಿ ಪ್ರಾರಂಭಿಸುವ ಆಲೋಚನೆ ಮೂಡಿದ್ದು ಆಗ. ಅದಕ್ಕೆ ಸ್ನೇಹಿತರೂ ಸಾಥ್‌ ನೀಡಿದರು. ಮೊದ ಮೊದಲು ಮನೆಯಲ್ಲೇ ಕೇಳಿದವರಿಗೆ ಖಾದ್ಯ ತಯಾರಿಸಿ ನೀಡುತ್ತಿದ್ದೆವು. ಈಗ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಪ್ರಿಯಾ.

ಪೆಟ್‌ ಕೇಕ್ಸ್‌, ಕುಕ್ಕೀಸ್‌ ಹಾಗೂ ಹೊಸ ರೆಸಿಪಿಗಳನ್ನು ತಯಾರಿಸುವ ಮುನ್ನ ಪಶು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. ಪ್ರಾಣಿಗಳಿಗೆ ಯಾವುದು ಹಾನಿಕರ, ಯಾವುದು ಒಳ್ಳೆಯದು ಹಾಗೂ ಯಾವ ತಿನಿಸನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂದು ಅರಿತಿದ್ದಾರೆ. ‘ಸಕ್ಕರೆ, ಉಪ್ಪು, ಮೈದಾ ಹಿಟ್ಟು, ಕ್ರೀಮ್‌, ಕೃತಕ ಬಣ್ಣ ಹಾಗೂ ಫ್ಲೇವರ್ಸ್‌, ಎಣ್ಣೆ ಅಂಶ ಇಲ್ಲದ ಪದಾರ್ಥಗಳಿಂದ ರುಚಿಕರ ಆಹಾರವನ್ನು ತಯಾರಿಸುವುದು ಹೇಗೆ ಎಂಬುದೇ ದೊಡ್ಡ ಸವಾಲಾಗಿತ್ತು. ಆದರೆ ಸಕ್ಕರೆ ಹಾಗೂ ಚಾಕ್‌ಲೇಟ್‌ ಬದಲು ಜೇನುತುಪ್ಪ ಹಾಗೂ ಪೀನಟ್‌ ಬಟರ್‌ ಬಳಸಿ ಮಾಡುವ ಪೇಸ್ಟ್ರಿಗೆ ಸಿಹಿ ಬರುತ್ತದೆ’ ಎಂದು ವಿವರಿಸುತ್ತಾರೆ ಅವರು.

ಹಣ್ಣು, ತರಕಾರಿ, ಚಿಕನ್‌, ಮಟನ್‌, ಉಪ್ಪು ಹಾಕಿ ಒಣಗಿಸಿದ ಹಂದಿ ಮಾಂಸ, ಮೊಟ್ಟೆ, ಕುಂಬಳಕಾಯಿ, ಕ್ಯಾರೆಟ್‌, ಹುರುಳಿಕಾಯಿ, ಗೋಧಿಹಿಟ್ಟು, ಬಸಳೆ ಸೊಪ್ಪು, ಪಾಲಕ್‌ ಸೊಪ್ಪು, ಬಾಳೆಹಣ್ಣು, ರಾಗಿ, ಜೇನುತುಪ್ಪ, ಪೀನಟ್‌ ಬಟರ್‌, ಕಡಲೆಕಾಯಿ ಇತ್ಯಾದಿ ಬಳಸಿ ನಾನಾ ರೀತಿಯ ಕೇಕ್ಸ್‌, ಕುಕ್ಕೀಸ್‌, ಡಾಗ್‌ ಅಂಡ್‌ ಕ್ಯಾಟ್‌ ಮಫಿನ್ಸ್ ಹಾಗೂ ಚಿಕನ್‌ ಲಿಟ್ಲ್ ಅನ್ನು ತಯಾರಿಸಲಾಗುತ್ತದೆ.
ಆಯಾ ಶ್ವಾನಕ್ಕೆ ಅಥವಾ ಬೆಕ್ಕಿಗೆ ಇಷ್ಟವಾಗದ ಅಥವಾ ಅಲರ್ಜಿ ಆಗುವ ಪದಾರ್ಥಗಳಿದ್ದಲ್ಲಿ ಮೊದಲೇ ಬೇಕರಿಯವರಿಗೆ ತಿಳಿಸಬೇಕು.

ಅವುಗಳಿಗೆ ಇಷ್ಟವಾದ ತರಕಾರಿ, ಹಣ್ಣು, ಮಾಂಸದ ಬಗ್ಗೆ ಮಾಹಿತಿ ನೀಡಬೇಕು. ಇನ್ನು ಹುಟ್ಟುಹಬ್ಬದ ಕೇಕ್‌ಗಳಿಗೆ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ. ಕೇಕ್‌ ಹಾಗೂ ಕುಕ್ಕೀಸ್‌ಗಳನ್ನು ಆಕರ್ಷಕವಾಗಿ, ಆರ್ಡರ್ ಕೊಡುವವರ ಶ್ವಾನದ ಹೆಜ್ಜೆ ಗುರುತು, ಅವುಗಳು ತಿನ್ನುವ ಬೋನ್‌ ಪೀಸ್‌ ಆಕಾರದಲ್ಲಿ ಮಾಡಿಕೊಡಲಾಗುತ್ತದೆ. ಕೇಕ್‌ ಹಾಗೂ ಕುಕ್ಕೀಸ್‌ಗಳನ್ನು ಕನಿಷ್ಠ ಅರ್ಧ ಕೆ.ಜಿ.ಯಿಂದ ಅಗತ್ಯಕ್ಕೆ ತಕ್ಕಷ್ಟು ಬುಕ್‌ ಮಾಡಬಹುದು. ಬುಕ್ಕಿಂಗ್‌ ಅನ್ನು ದೂರವಾಣಿ ಅಥವಾ ಆನ್‌ಲೈನ್‌ ಮೂಲಕ ಮಾಡಬಹುದು.

ಈ ಹಿಂದೆ ನಗರದ ಬೆಳ್ಳಂದೂರು ಬಳಿ ರಾಕಿ ಡಾಗ್‌ ಬೇಕರಿ ಎಂದು ಪ್ರಾರಂಭಿಸಲಾಗಿತ್ತು. ಶ್ವಾನಗಳ ಇಷ್ಟದ ಖಾದ್ಯಕ್ಕಾಗಿ ಭಾರಿ ಬೇಡಿಕೆ ಇತ್ತು. ಆದರೆ ಬೇಕರಿ ವೈಯಕ್ತಿಕ ಸಮಸ್ಯೆ ಹಾಗೂ ಸಮಯದ ಅಭಾವದಿಂದ ಈ ಬೇಕರಿಯನ್ನು ಮುಚ್ಚಲಾಗಿದೆ. ಆದರೂ ಇನ್ನೂ ಖಾದ್ಯಗಳಿಗಾಗಿ ನಿತ್ಯ ಕರೆಗಳು ಬರುತ್ತಿವೆ. ಆದ್ದರಿಂದ ಒಂದು ವರ್ಷದ ನಂತರ ಮತ್ತೆ ಬೇಕರಿ ಪ್ರಾರಂಭಿಸುವ ಉದ್ದೇಶ ಇದೆ ಎನ್ನುತ್ತಾರೆ ರಾಕಿಡಾಗ್‌ ಬೇಕರಿ ಮಾಲೀಕರು.

ಮಾಹಿತಿಗೆ: ಪ್ರಿಯಾ: 9845707030, ಶ್ರುತಿ: 9845177162.
ಇಮೇಲ್‌: boneappetite@rocketmail.com
ಮೆನು ನೋಡಲು ಫೇಸ್‌ಬುಕ್‌ಗೆ ಲಾಗಿನ್‌ ಆಗಬಹುದು: https://www.facebook.com/BoneAppetiteIndia

ಕೇಕ್ಸ್‌ ಹಾಗೂ ಕುಕ್ಕೀಸ್‌
ಪೀನಟ್‌ ಬಟರ್‌ ಡಿಲೈಟ್‌, ಬೆಗ್ಗಿನ್‌ ಫಾರ್‌ ಪಂಪ್‌ಕಿನ್‌, ಚಿಕನ್‌ ಲಿಟಲ್‌, ಫಿಶ್‌ ಫಾರ್‌ ಡಾಗ್ಸ್‌, ಬೇಕನ್‌ ಬೈಟ್‌, ರೋಲರ್‌ ಓವರ್‌ ರಿವಾರ್ಡ್ಸ್‌, ನಟ್ಟಿ ಬೋನ್ಸ್‌, ಗೋಲ್ಡಿ ಬ್ಲಾಕ್ಸ್‌, ಮೈಟಿ ಮಲ್ಟಿ ಗ್ರೇನ್ಸ್‌, ಸಂಥಿಂಗ್‌ ಫಿಶಿ, ಚಿಕನ್‌ ಹಾರ್ಟ್‌, ಪಾರ್ಟಿ ಪಪ್‌ಕೇಕ್ಸ್‌, ಫಿಶ್‌ ಡೋನಟ್ಸ್‌, ಮಲ್ಟಿಗ್ರೇನ್‌ ಮಿನೀಸ್‌, ಮಿಯಾವ್‌ ಮಿಯಾವ್‌ ಮಫಿನ್ಸ್‌, ಫರ್‌–ಫೆಕ್ಟ್‌ ಮಫಿನ್ಸ್‌ ದೊರೆಯುತ್ತವೆ. ಇವುಗಳೊಂದಿಗೆ ಬರ್ತ್‌ಡೆ ಗುಡ್ಡೀಸ್‌, ಗಿಫ್ಟ್ ಹ್ಯಾಂಪರ್‌, ಗ್ರೂಮಿಂಗ್‌ ಹ್ಯಾಂಪರ್‌ ಹಾಗೂ ಪ್ರಾಣಿಗಳಿಗೆ ಬಳಸುವ ಎಲ್ಲಾ ರೀತಿಯ ವಸ್ತುಗಳು ಲಭ್ಯ. ಬೆಲೆಯು ಹೆಚ್ಚೂಕಡಿಮೆ ಮನುಷ್ಯರು ತಿನ್ನುವ ತಿನಿಸುಗಳಷ್ಟೇ ಇರುತ್ತದೆ.

ಆನ್‌ಲೈನ್‌ ಬೇಕರಿ
ಶ್ವಾನಗಳಿಗಾಗಿ ಚಾಕ್‌ಲೇಟ್‌, ಕುಕ್ಕೀಸ್‌, ಕೇಕ್ಸ್‌, ಬಿಸ್ಕಟ್ಸ್‌ ಸೇರಿದಂತೆ 33ಕ್ಕೂ ಹೆಚ್ಚು ತಿಂಡಿಗಳು ಈ ಡಾಗ್‌ ಸ್ಪಾಟ್‌ ಆನ್‌ಲೈನ್‌ ಸೇಲ್‌ನಲ್ಲಿ ಲಭ್ಯವಿದೆ. ಯಾವುದೇ ರೀತಿಯ ಆರ್ಡರ್‌ ಮಾಡಿದರೆ 10 ದಿನಗಳು ಅಥವಾ ಆರ್ಡ್‌ ಮಾಡಿದ ಸಮಯದಲ್ಲಿ ನೀಡಿದ ದಿನಾಂಕಕ್ಕೆ ಸರಿಯಾಗಿ ಡೆಲಿವರಿ ನೀಡಲಾಗುತ್ತದೆ.
ಸಹಾಯವಾಣಿ: 9212196633. ವೆಬ್‌ಸೈಟ್‌: www.dogspot.in

Write A Comment