ಕರ್ನಾಟಕ

ದೇಶದಲ್ಲಿ ಹುಲಿಗಳ ಕಳ್ಳಬೇಟೆ ಹೆಚ್ಚಳ

Pinterest LinkedIn Tumblr

tig

ಚಾಮರಾಜನಗರ: ದೇಶದಲ್ಲಿ ಪ್ರತಿ ವರ್ಷ ಕಳ್ಳಬೇಟೆಗೆ ಬಲಿಯಾಗುತ್ತಿರುವ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವ ಸಂಗತಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಪ್ರಕಟಿಸಿರುವ ವರದಿಯಿಂದ ಬೆಳಕಿಗೆ ಬಂದಿದೆ.

ಎನ್‌ಟಿಸಿಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಯಂತೆ 2014ರಲ್ಲಿ ದೇಶದ ವಿವಿಧ ಹುಲಿ ರಕ್ಷಿತಾರಣ್ಯದಲ್ಲಿ 78 ಹುಲಿಗಳು ಮೃತಪಟ್ಟಿವೆ. ಈ ಪೈಕಿ 17 ಹುಲಿಗಳು ಕಳ್ಳಬೇಟೆಗೆ ಬಲಿಯಾಗಿವೆ. ಉಳಿದ ಹುಲಿಗಳ ಸಾವು ಪ್ರಕರಣ ತನಿಖೆಯ ಹಂತದಲ್ಲಿದೆ. ಹೀಗಾಗಿ, ಅವುಗಳ ಸಾವಿಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.

ಕಳ್ಳಬೇಟೆಗೆ ಬಲಿಯಾದ 17 ಹುಲಿಗಳ ಪೈಕಿ 12 ಹುಲಿಗಳ ಚರ್ಮ ವಶಪಡಿಸಿ ಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಇದೇ ವರ್ಷ ಕರ್ನಾಟಕದಲ್ಲಿ 7 ಹುಲಿ ಮೃತಪಟ್ಟಿವೆ ಎಂದು ಎನ್‌ಟಿಸಿಎ ಹೇಳಿದೆ.

ದೇಶದಲ್ಲಿ ಹುಲಿಗಳ ಕಳ್ಳಬೇಟೆಗೆ ಕಡಿವಾಣ ಬಿದ್ದಿಲ್ಲ. ಕಾಡಿನಿಂದ ಹೊರಬರುವ ಹುಲಿಗಳು ಬೇಟೆಗಾರರ ಬಂದೂಕಿಗೆ ಪ್ರಾಣ ಕಳೆದುಕೊಳ್ಳುತ್ತವೆ. ಇನ್ನೊಂದೆಡೆ ಅಪರಾಧ ಹಿನ್ನೆಲೆ ಹೊಂದಿರುವ ಬುಡಕಟ್ಟು ಬೇಟೆ ಗಾರರೊಂದಿಗೆ ಕುಖ್ಯಾತ ವನ್ಯಜೀವಿ ವ್ಯಾಪಾರಿಗಳು ಶಾಮೀಲಾಗುತ್ತಾರೆ. ಈ ಬೇಟೆಗಾರರಿಗೆ ಹಣ ನೀಡಿ, ಹುಲಿ ಸೇರಿದಂತೆ ಅಳಿವಿನಂಚಿನಲ್ಲಿರುವ ಇತರೇ ಪ್ರಾಣಿಗಳ ಹತ್ಯೆಗಾಗಿ ವಿವಿಧ ರಾಜ್ಯ ಗಳಿಗೆ ಕಳುಹಿಸುತ್ತಾರೆ.

ಬೇಟೆಗಾರರು ರಕ್ಷಿತಾರಣ್ಯದೊಳಗೆ ಅರಣ್ಯ ಸಿಬ್ಬಂದಿಯ ಕಣ್ಣು ತಪ್ಪಿಸಿ ಹುಲಿಗಳನ್ನು ಬೇಟೆ ಯಾಡುವುದು ನಡೆಯುತ್ತಿದೆ. ಎನ್‌ಟಿಸಿಎ ಸಾಂಪ್ರದಾಯಿಕ ಬೇಟೆ ಗಾರರಾದ ಬೆಹೆಲಿಯಾ, ಅಂಬಲ್‌ ಘರ್‌, ಬಡಕ, ಮೋಂಗಿಯಾ, ಬವಾರಿಯಾ, ಮಾಂಗ್ಲಿಯಾ, ಪರ್ದಿ, ಬೊಯಾ, ಕೈಕಡ್‌, ಕಾರವಾಲ್‌ನಾಟ್‌, ನಿರ್ಶಿಕಾರಿ, ಪಿಚಾರಿ, ವಲಯಾರ, ಯೆನಡಿ, ಚಕ್ಮಾ, ಮಿಜೊ, ಬರು, ಸೊಲುಂಗ್‌, ನಯಿಷಿ ಬುಡಕಟ್ಟು ಜನರನ್ನು ಗುರುತಿಸಿದೆ. ಆದರೆ, ಈ ಸಮುದಾಯಕ್ಕೆ ಪುನರ್‌ವಸತಿ ಸೌಲಭ್ಯ ಕಲ್ಪಿಸಿ ಬೇಟೆಗಾರಿಕೆಯಿಂದ ಹೊರತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಯೋಜನೆಗಳು ಅನುಷ್ಠಾನಗೊಂಡಿಲ್ಲ.

ಉತ್ತರ ಭಾರತದಲ್ಲಿಯೇ ಈ ಬುಡಕಟ್ಟು ಬೇಟೆಗಾರರು ಹೆಚ್ಚಿದ್ದಾರೆ. ಸುಮಾರು 5 ಸಾವಿರದಷ್ಟು ಬೇಟೆ ಗಾರರ ಕುಟುಂಬಗಳಿರುವ ಬಗ್ಗೆ ಅಂದಾಜಿಸಲಾಗಿದೆ. ಇವರು ಹುಲಿ ರಕ್ಷಿತಾರಣ್ಯಗಳ ಅಂಚಿನಲ್ಲಿಯೇ ನೆಲೆ ಕಂಡು ಕೊಂಡಿರುತ್ತಾರೆ.

ಅವರಿಗೆ ಜಾಗೃತಿ ಮೂಡಿಸಿ ಸೌಲಭ್ಯ ಕಲ್ಪಿಸಿಲ್ಲ. ಇದು ಕೂಡ ಹುಲಿ ಸಂರಕ್ಷಣಾ ವೈಫಲ್ಯಗಳಲ್ಲಿ ಒಂದಾಗಿದೆ ಎನ್ನುವುದು ವನ್ಯಜೀವಿ ಸಂರಕ್ಷಕರ ಆರೋಪ.

344 ಹುಲಿ ಸಾವು:  ಎನ್‌ಟಿಸಿಎ ವರದಿ ಅನ್ವಯ ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 344 ಹುಲಿಗಳು ಮೃತಪಟ್ಟಿವೆ. ಈ ಪೈಕಿ 122 ಹುಲಿಗಳು ಕಳ್ಳಬೇಟೆಗೆ ಬಲಿಯಾಗಿವೆ. ಇನ್ನು 117 ಹುಲಿಗಳ ಸಾವು ಪ್ರಕರಣಗಳ ತನಿಖೆ ಸಹ ನಡೆಯುತ್ತಿದೆ.

ವಯೋಸಹಜ, ಕಾದಾಟ, ಅನಾರೋಗ್ಯ ಸೇರಿದಂತೆ ನೈಸರ್ಗಿಕ ಕಾರಣಗಳಿಂದ ಈ ಅವಧಿಯಲ್ಲಿ 105 ಹುಲಿಗಳು ಮೃತಪಟ್ಟಿವೆ ಎಂದು ವರದಿ ಹೇಳಿದೆ.

Write A Comment