ಕರ್ನಾಟಕ

ಮತ್ತೊಂದು ಜೀವಂತ ಹೃದಯ ವರ್ಗಾವಣೆಗೆ ಸಾಕ್ಷಿಯಾದ ಬೆಂಗಳೂರು

Pinterest LinkedIn Tumblr

Live-Heart-7

ಬೆಂಗಳೂರು, ಜ.3-ವಿದ್ಯಾರ್ಥಿಯೊಬ್ಬನ ಜೀವಂತ ಹೃದಯವನ್ನು ಆಂಬುಲೆನ್ಸ್ ಮೂಲಕ ಸಾಗಿಸಿ ಮತ್ತೋರ್ವ ವ್ಯಕ್ತಿಗೆ ಯಶಸ್ವಿಯಾಗಿ ಜೋಡಣೆ ಮಾಡಿದ ಘಟನೆಗೆ ಉದ್ಯಾನನಗರಿ ಬೆಂಗಳೂರು ಇಂದು ಸಾಕ್ಷಿಯಾಯಿತು. ಈ ಹಿಂದೆ ಬೆಂಗಳೂರಿನಿಂದ ಎರಡು ಬಾರಿ ಜೀವಂತ ಹೃದಯವನ್ನು ಚೆನ್ನೈಗೆ ಸಾಗಿಸಿ ಯಶಸ್ವಿ ಜೋಡಣೆ ಮಾಡಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಅಂಥದ್ದೇ ಮನಕಲಕುವ ಘಟನೆ ನಡೆದಿರುವುದು ವಿಶೇಷ. ನಗರದ ಎಂ.ಎಸ್.ರಾಮಯ್ಯ ಮತ್ತು ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರ ಸಮಯೋಚಿತ್ತದಿಂದ ಕೊನೆಯುಸಿರೆಳೆಯಬೇಕಾಗಿದ್ದ ವ್ಯಕ್ತಿಗೆ ಹೃದಯ ಅಳವಡಿಸಿದ್ದರಿಂದ ಒಂದು ಅಮೂಲ್ಯ ಜೀವವನ್ನು ಉಳಿಸಿದ ಕೀರ್ತಿ ವೈದ್ಯರಿಗೆ ಸಲ್ಲುತ್ತದೆ.

ಘಟನೆ ಹಿನ್ನೆಲೆ:
ಬೆಂಗಳೂರಿನ ಮಾರಪ್ಪನಪಾಳ್ಯ ನಿವಾಸಿಯಾದ ಬಾಲಾಜಿ (21) ಎಂಬ ವಿದ್ಯಾರ್ಥಿ ಜ.1ರಂದು ಬೈಕ್‌ನಿಂದ ಬಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಹೊಸ ವರ್ಷಾಚರಣೆಗೆ ಸ್ನೇಹಿತರ ಜತೆ ತೆರಳಿದ್ದ ಈತ ತಲೆಗೆ ಹೆಲ್ಮೆಟ್ ಧರಿಸದ ಕಾರಣ ಬೈಕ್ ಜಾಲಹಳ್ಳಿ ಬಳಿ ಆಯತಪ್ಪಿ ಕೆಳಗೆ ಬಿದ್ದಿದ್ದ. ತಲೆಗೆ ಬಲವಾದ ಹೊಡೆತ ಬಿದ್ದ ಪರಿಣಾಮ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಾಜಿ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ರಕ್ತ ಸಂಚಾರ ಸ್ಥಗಿತಗೊಂಡು ಮಿದುಳು ನಿಷ್ಕ್ರಿಯ (ಬ್ರೈನ್‌ಡೆಡ್)ವಾಗಿತ್ತು. ವೈದ್ಯರು ಎಷ್ಟೇ ಹರಸಾಹಸ ಪಟ್ಟರೂ ಈತನನ್ನು ಉಳಿಸಲು ಸಾಧ್ಯವಿಲ್ಲ ಎಂಬುದನ್ನು ಅವರ ತಾಯಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆರು ತಿಂಗಳ ಹಿಂದೆ ಈತನ ತಂದೆ ತೀರಿಕೊಂಡಿದ್ದರು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಾಜಿ ದೂರ ಶಿಕ್ಷಣದ ಮೂಲಕವೇ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

ದಿನದಿಂದ ದಿನಕ್ಕೆ ಮೆದುಳು ನಿಷ್ಕ್ರಿಯವಾಗುತ್ತಿರುವುದನ್ನು ಗಮನಿಸಿದ ವೈದ್ಯರು ಹಣ ಎಷ್ಟೇ ಖರ್ಚು ಮಾಡಿದರೂ ಬಾಲಾಜಿ ಉಳಿಯಲು ಸಾಧ್ಯವಿಲ್ಲ ಎಂಬ ಅಂಶವನ್ನು ತಾಯಿ ಭುವನೇಶ್ವರಿಗೆ ಮನವರಿಕೆ ಮಾಡಿಕೊಟ್ಟರು. ಇದೇ ವೇಳೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಪಶ್ಚಿಮ ಬಂಗಾಳದ ವ್ಯಕ್ತಿಯೋರ್ವ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ. ಈತನಿಗೆ ಬೇರೊಂದು ಹೃದಯ ಜೋಡಣೆ ಮಾಡಬೇಕಾದ ಅಗತ್ಯವಿತ್ತು. ತಕ್ಷಣವೇ ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಮುಖ್ಯಸ್ಥ ಡಾ.ವೆಂಕಟರಮಣ ಹೃದಯ ಬದಲಾವಣೆ ವಿಷಯ ಪ್ರಸ್ತಾಪಿಸಿದರು. ಅದೇ ವೇಳೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಾಜಿ ಹೃದಯವನ್ನು ಬದಲಾಯಿಸಲು ಅವರ ತಾಯಿಯ ಒಪ್ಪಿಗೆ ಪಡೆಯಲಾಯಿತು.

ಕರುಣೆ ತೋರಿದ ತಾಯಿ: ತನ್ನ ಮಗ ಕೊನೆಯುಸಿರೆಳೆದರೂ ಬೇರೊಂದು ಜೀವ ಉಳಿಯಲಿ ಎಂದು ಕರುಣೆ ತೋರಿದ ಆ ಮಹಾತಾಯಿ ಹೃದಯ ಬದಲಾವಣೆಗೆ ಒಪ್ಪಿಗೆ ಸೂಚಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಎಂ.ಎಸ್.ರಾಮಯ್ಯ ಆಸ್ಪತ್ರೆ ಹೃದಯ ತಜ್ಞ ಡಾ.ಆನಂದ್ ಸುಬ್ರಹ್ಮಣ್ಯ ಅವರ ಐದು ಮಂದಿ ತಜ್ಞರ ತಂಡ ಹೃದಯ ಬದಲಾಯಿಸಿದರು.

ಸಜ್ಜಾಗಿದ್ದ ಆಂಬುಲೆನ್ಸ್: ಈ ಸಮಯಕ್ಕಾಗಲೇ ಆಸ್ಪತ್ರೆ ಬಳಿ ಬಿಜಿಎಸ್ ಆಸ್ಪತ್ರೆಯ ಆಂಬುಲೆನ್ಸ್ ಸಜ್ಜಾಗಿ ನಿಂತಿತ್ತು. ಜೀವಂತ ಹೃದಯವನ್ನು ಕಿಟ್‌ಬ್ಯಾಗ್‌ನಲ್ಲಿ ಹಾಕಿಕೊಂಡ ವೈದ್ಯರ ತಂಡ ನೇರವಾಗಿ ಬಿಜಿಎಸ್‌ನತ್ತ ಪ್ರಯಾಣಿಸಿತು.

ಸಂಚಾರ ಮುಕ್ತ: ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಉತ್ತರಹಳ್ಳಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ 29ಕಿಮೀ ಅಂತರವಿದೆ. ಸಂಚಾರ ದಟ್ಟಣೆಯಲ್ಲಿ ಜೀವಂತ ಹೃದಯವನ್ನು ಸಾಗಿಸಬೇಕೆಂದರೆ ಕನಿಷ್ಟ ಪಕ್ಷ ಎರಡು ಗಂಟೆ ಸಮಯ ಬೇಕಾಗಿತ್ತು. ತಕ್ಷಣವೇ ಆಸ್ಪತ್ರೆ ವೈದ್ಯರು ಪೊಲೀಸರನ್ನು ಸಂಪರ್ಕಿಸಿ ಆಂಬುಲೆನ್ಸ್‌ಗೆ ಸಂಚಾರ ಮುಕ್ತ ಮಾಡಿಕೊಡಬೇಕೆಂದು ಮನವಿ ಮಾಡಿದರು. ಕೂಡಲೇ ಸಂಚಾರಿ ಪೊಲೀಸರು ಆಂಬುಲೆನ್ಸ್ ಸಾಗುವ ಮಾರ್ಗವನ್ನು ಮುಕ್ತಗೊಳಿಸಿದ್ದರಿಂದ 30 ನಿಮಿಷದೊಳಗೆ ಆಸ್ಪತ್ರೆ ತಲುಪಿತು.

ಹಿಂದಿನ ಘಟನೆಗಳು: ಈ ಹಿಂದೆ ಸೆ.3ರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಚೆನ್ನೈನ ಪೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರ ಡಿ.19ರಂದು ನಗರದ ಮಣಿಪಾಲ್ ಆಸ್ಪತ್ರೆಯಿಂದ ಮಗುವಿನ ಜೀವಂತ ಹೃದಯವನ್ನು ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ತೆಗೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.

‘ಹೃದಯ’ವೈಶಾಲ್ಯತೆ ಮೆರೆದ ಮಹಾತಾಯಿ
ಬೆಂಗಳೂರು, ಜ.3-ನನ್ನ ಮಗನಿಗೆ ಬಂದಂತಹ ಪರಿಸ್ಥಿತಿ ಯಾರೊಬ್ಬರಿಗೂ ಬರಬಾರದು. ಮಗ ಬದುಕುಳಿಯದಿದ್ದರೂ ಬೇರೊಂದು ಜೀವದಲ್ಲಿ ನನ್ನ ಮಗನನ್ನು ಕಾಣುತ್ತೇನೆ… ಇದು ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಾಜಿ ತಾಯಿ ಭುವನೇಶ್ವರಿಯವರ ಮನದಾಳದ ಮಾತು. ಈ ಮಹಾತಾಯಿ ತೋರಿದ ವಿಶಾಲ ಹೃದಯಕ್ಕೆ ಸಾವನ್ನಪ್ಪಬೇಕಿದ್ದ ಜೀವವೊಂದು ಉಳಿಯಿತು. ಹೆತ್ತ ಮಗನ ಹೃದಯವನ್ನೇ ದಾನ ಮಾಡಿದ ಮಹಾತಾಯಿ ಎಂಬ ಕೀರ್ತಿಗೆ ಅವರು ಪಾತ್ರರಾದರು. ಸ್ನೇಹಿತರ ಜತೆಗೂಡಿ ಹೊಸ ವರ್ಷಾಚರಣೆಗೆ ತೆರಳಿದ್ದ ವೇಳೆ ಬೈಕ್ ಆಯತಪ್ಪಿ ತಲೆಗೆ ಗಾಯ ಮಾಡಿಕೊಂಡಿದ್ದ ಬಾಲಾಜಿ ಜೀವಂತವಾಗಿ ಉಳಿಯುವುದು ಕಷ್ಟವಾಗಿತ್ತು. ಮಗನ ಹೃದಯವನ್ನು ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬನಿಗೆ ಜೋಡಣೆ ಮಾಡಲು ಭುವನೇಶ್ವರಿ ಒಪ್ಪಿಗೆ ಸೂಚಿಸಿ ಇತರರಿಗೂ ಮಾದರಿಯಾಗಿದ್ದಾರೆ.

ನನ್ನ ಮಗ ಬದುಕುಳಿಯುವುದಿಲ್ಲ ಎಂದು ವೈದ್ಯರು ಖಚಿತಪಡಿಸಿದರು. ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತಿದ್ದ ಹೃದಯವನ್ನು ಬೇರೊಬ್ಬರಿಗೆ ನೀಡಿದರೆ ಒಂದು ಜೀವ ಉಳಿಸಬಹುದೆಂಬ ದೃಷ್ಟಿಯಿಂದ ನೀಡಿದ್ದೇನೆ ಎನ್ನುತ್ತಿದ್ದಂತೆ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಯಾವ ಮಕ್ಕಳೂ ಕುಡಿತಕ್ಕೆ ದಾಸರಾಗಬಾರದು. ಮುಪ್ಪಿನ ಕಾಲದಲ್ಲಿ ಮಕ್ಕಳು ಇದ್ದಕ್ಕಿದ್ದಂತೆ ಕೊನೆಯುಸಿರೆಳೆದರೆ ತಂದೆ-ತಾಯಿಗಳಿಗೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಯಾರೇ ಆಗಲಿ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ತಲೆಗೆ ಹೆಲ್ಮೆಟ್ ಧರಿಸಬೇಕು. ನನ್ನ ಮಗನಿಗೆ ಬಂದ ಪರಿಸ್ಥಿತಿ ಯಾರೊಬ್ಬರಿಗೂ ಬರಬಾರದು ಎಂದು ಮನವಿ ಮಾಡಿದರು.

Write A Comment