ಕರ್ನಾಟಕ

ಮೊರಾರ್ಜಿ ವಸತಿ ನಿಲಯದ ಕೋಣೆಯ ಅನೈರ್ಮಲ್ಯಕ್ಕೆ ಕಾರಣರಾದವರ ಪತ್ತೆಗೆ ಕರ್ಪೂರ ಶಿಕ್ಷೆ: ವಾರ್ಡನ್ ಕ್ರೂರ ಪ್ರಯೋಗ

Pinterest LinkedIn Tumblr

539031994_477f4cc4fd_m

ಚಿಂತಾಮಣಿಯ ಗಡಿವಾರಪಲ್ಲಿ ಮೊರಾರ್ಜಿ ವಸತಿ ನಿಲಯದ ಕೋಣೆಯ ಅನೈರ್ಮಲ್ಯಕ್ಕೆ ಕಾರಣರಾದವರ ಪತ್ತೆಗೆ ವಿದ್ಯಾರ್ಥಿನಿಯರಿಗೆ ವಾರ್ಡನ್ ‘ಕರ್ಪೂರ ಶಿಕ್ಷೆ’ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಇದರಿಂದ ಇಬ್ಬರು ವಿದ್ಯಾರ್ಥಿನಿಯರಿಗೆ ತೀವ್ರ ಸುಟ್ಟುಗಾಯಗಳಾಗಿವೆ. ಆದರೆ ಈ ಘಟನೆ ಘಟನೆ ನಡೆದು ತಿಂಗಳಾಗುತ್ತ ಬಂದರೂ ವಾರ್ಡನ್ ಹಾಗೂ ಪ್ರಾಂಶುಪಾಲರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಯಾವುದೇ ಶಿಸ್ತುಕ್ರಮ ಜರುಗಿಸಿಲ್ಲ. ಮೌಢ್ಯಾಚರಣೆಯ ಈ ಅಮಾನವೀಯ ಶಿಕ್ಷೆಯ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ನಂದನವನ ಶ್ರೀರಾಮರೆಡ್ಡಿ ಮಂಗಳವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು.

ಪ್ರಕರಣವೇನು?: ವಸತಿ ನಿಲಯದ ಕೋಣೆಯೊಂದರಲ್ಲಿ ಆರು ವಿದ್ಯಾರ್ಥಿನಿಯರಿದ್ದರು. ಒಂದು ಕೋಣೆಯಲ್ಲಿ ಮುಟ್ಟಾದ ವಿದ್ಯಾರ್ಥಿನಿಯೊಬ್ಬಳು ತ್ಯಾಜ್ಯ ಸ್ವಚ್ಛಗೊಳಿಸದೇ ಹಾಗೇ ಬಿಟ್ಟಿರುವುದು ಶುಚಿತ್ವ ಸಿಬ್ಬಂದಿ ಮೂಲಕ ಹಾಸ್ಟೆಲ್ ವಾರ್ಡನ್ ಗಮನಕ್ಕೆ ಬಂತು. ಈ ಕುರಿತು ಆರು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದಾಗ ಯಾರೊಬ್ಬರೂ ಒಪ್ಪಿಕೊಳ್ಳದಿದ್ದಾಗ ವಾರ್ಡನ್ ರಾಘವೇಂದ್ರ ಕರ್ಪೂರದ ಪರೀಕ್ಷೆ ಮೊರೆ ಹೋದರು.

”ನಿಮ್ಮಲ್ಲಿ ಯಾರು ಈ ಗಲೀಜು ಮಾಡಿದ್ದಾರೆಂದು ದೇವರೇ ನಿರ್ಧರಿಸುತ್ತಾರೆ. ಕರ್ಪೂರವನ್ನು ಅಂಗೈಯಲ್ಲಿಟ್ಟುಕೊಳ್ಳಿ. ಬೆಂಕಿ ಹಚ್ಚುತ್ತೇನೆ. ಯಾರ ಕೈ ಸುಡುತ್ತದೋ ಅವರೇ ಈ ಕೃತ್ಯವೆಸಗಿರುವುದು ಎಂದು ಸಾಬೀತಾಗುತ್ತದೆ,” ಎಂದು ಆರು ಹುಡುಗಿಯರ ಅಂಗೈಗಳಲ್ಲಿ ಕರ್ಪೂರವಿಟ್ಟು ಸುಟ್ಟಿದ್ದಾರೆ. ನಾಲ್ವರು ಹುಡುಗಿಯರು ಬೆಂಕಿ ಹಚ್ಚುತ್ತಿದ್ದಂತೆ ಕಿರುಚಿ ಕೈಕೊಡವಿಕೊಂಡರೆ, 6 ಮತ್ತು 7ನೇ ತರಗತಿಯ ಇಬ್ಬರು ಹುಡುಗಿಯರ ಕೈಗೆ ಬೊಬ್ಬೆಗಳು ಬಂದಿವೆ. ಬಳಿಕ ಈ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆ ಪೋಷಕರನ್ನು ಆತಂಕಕ್ಕೆ ದೂಡಿದೆ.

ವಸತಿ ಶಾಲೆಯಲ್ಲಿ 250 ಮಕ್ಕಳಿದ್ದು ಹೆಣ್ಣುಮಕ್ಕಳ ವಸತಿ ನಿಲಯದ ಜವಾಬ್ದಾರಿಯನ್ನು ಪುರುಷ ವಾರ್ಡನ್‌ಗೆ ವಹಿಸಲಾಗಿದೆ. ವಾರ್ಡನ್ ಜತೆಗೆ ಅಡುಗೆಯವರೂ ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಹೇಳಲಾಗಿದೆ. ಹಾಸ್ಟೆಲ್ ತೀರಾ ಗಲೀಜಿನಿಂದ ಕೂಡಿರುವುದಾಗಿ ಘಟನೆ ನಡೆದ ಬಳಿಕ ಹಾಸ್ಟೆಲ್‌ಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ನಂದನವನ ಶ್ರೀರಾಮರೆಡ್ಡಿ ವಿಕಗೆ ತಿಳಿಸಿದ್ದಾರೆ.

ಪ್ರಕರಣ ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ನಾಗರತ್ನ ಪತ್ರ ಬರೆದಿದ್ದಾರೆ. ವಾರ್ಡನ್ ಬದಲಾವಣೆ ಹಾಗೂ ಪ್ರಭಾರಿ ಪ್ರಿನ್ಸಿಪಾಲರ ವೇತನ ಬಡ್ತಿ ತಡೆ ಹಿಡಿಯುವಂತೆ ಶಿಫಾರಸು ಮಾಡಿದ್ದು ಹದಿನೈದು ದಿನ ಕಳೆದರೂ ಇನ್ನೂ ಪತ್ರಕ್ಕೆ ಪ್ರತಿಕ್ರಿಯೆ ಬಂದಿಲ್ಲವೆಂದು ನಾಗರತ್ನ ವಿಕಗೆ ತಿಳಿಸಿದ್ದಾರೆ.

ಈ ಹೆಣ್ಮಕ್ಕಳನ್ನು ಭೇಟಿಯಾಗಿ ಪ್ರಕರಣ ಕುರಿತು ವಿವರ ಪಡೆದಿದ್ದೆ. ಈ ಕುರಿತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗಮನಕ್ಕೆ ತಂದು ತಿಂಗಳು ಕಳೆಯುತ್ತ ಬಂದರೂ ಇನ್ನೂ ಸೂಕ್ತ ಶಿಸ್ತು ಕ್ರಮ ಜರುಗಿಸದಿರುವುದು ಅಚ್ಚರಿ ತಂದಿದೆ.
-ನಂದನವನ ಶ್ರೀರಾಮರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ

ವಸತಿ ಶಾಲೆಯಲ್ಲಿರುವ ಹೆಣ್ಮಕ್ಕಳ ಕೈಗೆ ಕರ್ಪೂರವಿಟ್ಟು ಸುಟ್ಟ ಕುರಿತು ಪ್ರಕರಣ ನಡೆದು ಏಳು ದಿನಗಳ ಬಳಿಕ ನನ್ನ ಗಮನಕ್ಕೆ ಬಂತು. ತಕ್ಷಣ ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಪ್ರಕರಣ ನಡೆದಿರುವುದು, ಇಬ್ಬರು ಹುಡುಗಿಯರ ಕೈಯ್ಯಲ್ಲಿ ಸುಟ್ಟ ಗಾಯಗಳ ಕಲೆ, ಬೊಬ್ಬೆ ಇರುವುದು ಖಚಿತವಾಯಿತು. ವಾರ್ಡನ್ ವರ್ಗಾವಣೆ ಮತ್ತು ಪ್ರಭಾರಿ ಪ್ರಿನ್ಸಿಪಾಲರ ವೇತನ ಬಡ್ತಿ ತಡೆಹಿಡಿಯುವಂತೆ ಪತ್ರ ಬರೆದಿದ್ದೇನೆ.
-ನಾಗರತ್ನ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ

Write A Comment