ಕರ್ನಾಟಕ

ಬೆಂಗಳೂರು ಬಾಂಬ್ ಸ್ಫೋಟ; ಆಕೆ ಬದುಕಬೇಕಿತ್ತು.. ಆಟೋ ಚಾಲಕ ನರಸಿಂಹನ ಅಳಲು

Pinterest LinkedIn Tumblr

bomb

ಬೆಂಗಳೂರು,ಡಿ.29: ಆಕೆ ಬದುಕಬೇಕಿತ್ತು. ಆಕೆ ಸಾವು ನನಗೆ ತುಂಬಾ ನೋವುಂಟು ಮಾಡಿದೆ. ಹೀಗೆಂದು ಕಣ್ಣೀರು ಹಾಕಿದವರು ಆಟೋ ಚಾಲಕ ಬಿ.ನರಸಿಂಹ. ನಿನ್ನೆ ಬಾಂಬ್ ಸ್ಫೋಟದ ಸ್ಥಳದಿಂದ ಭವಾನಿಯವರನ್ನು ಮಲ್ಯ ಆಸ್ಪತ್ರೆಗೆ ಕರೆತಂದ ನರಸಿಂಹ, ಆಕೆ ಮೃತಪಟ್ಟ ಸುದ್ದಿ ಕೇಳಿ ದುಃಖಿತರಾದರು. ನಾನು ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಹೋಗುತ್ತಿದ್ದಾಗ ದೊಡ್ಡದಾದ ಸದ್ದು ಕೇಳಿಸಿತು. ಜನ ಓಡಿ ಬರುತ್ತಿದ್ದರು. ಕುತೂಹಲದಿಂದ ನನ್ನ ಆಟವನ್ನು ಅತ್ತ ತಿರುಗಿಸಿದೆ. ನಾಲ್ಕು ಜನ ಗಾಯಗೊಂಡಿದ್ದ ಮಹಿಳೆಯನ್ನು ಹೊತ್ತು ತರುತ್ತಿದ್ದರು. ತಕ್ಷಣ ನನ್ನ ಆಟೋದಲ್ಲಿ ಕೂರಿಸಿಕೊಂಡು ಆಕೆಯನ್ನು ಮಲ್ಯ ಆಸ್ಪತ್ರೆಗೆ ಕರೆತಂದೆ. ಸಂಚಾರ ದಟ್ಟಣೆ ಇಲ್ಲದಿದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಆಸ್ಪತ್ರೆಗೆ ಕರೆತಂದೆ.

ಆದರೆ ಆಕೆ ಸಾವನ್ನಪ್ಪಿದ್ದಾಳೆ. ಸಾವುಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಆಕೆಯನ್ನು ನಾನು ಕಣ್ಣಾರೆ ಕಂಡಿದ್ದೆ ಎಂದು ಗದ್ಗರಿತರಾಗಿದ್ದಾರೆ.

ಬಾಂಬ್ ಸ್ಫೋಟವಾದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸುವುದು ಅಸಾಧ್ಯವಾಗಿತ್ತು. ನಿನ್ನೆ ಬಾಂಬ್ ಸ್ಫೋಟದಿಂದ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ಬಹಳಷ್ಟು ಜನ ಆಟೋ ಚಾಲಕರು ಮತ್ತು ಖಾಸಗಿ ವಾಹನ ಮಾಲೀಕರು ಹಿಂದೇಟು ಹಾಕಿದರು. ಆದರೆ ನರಸಿಂಹ ಅವರು ಧೈರ್ಯವಾಗಿ ಮುಂದೆ ಬಂದು ರಕ್ತಸಿಕ್ತ ಆಕೆಯನ್ನು ತಮ್ಮ ಆಟೋದಲ್ಲಿ ಮಲ್ಯ ಆಸ್ಪತ್ರೆ ಕರೆದೊಯ್ದದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಸ್ಫೋಟದ ತೀವ್ರತೆಯಿಂದ ಭವಾನಿಯವರ ತಲೆಗೆ ಗಂಭೀರ ಗಾಯವಾಗಿ ಮೆದುಳು ಹೊರಬಂದಿತ್ತು. ದಾರಿಯ ಮಧ್ಯದಲ್ಲೇ ಆಟೋದಲ್ಲೇ ಆಕೆ ಕುಸಿದು ಹೋಗಿದ್ದರು. ಮಲ್ಯ ಆಸ್ಪತ್ರೆಯಲ್ಲಿ ವೈದ್ಯರು ಹರಸಾಹಸಪಟ್ಟರೂ ಆಕೆಯನ್ನು ಬದುಕಿಸಲು ಆಗಲಿಲ್ಲ ಎಂದು ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ನರಸಿಂಹ ತಾವು ನೋಡಿದನ್ನು ನೋವಿನಿಂದ ವಿವರಿಸುತ್ತಾರೆ.

Write A Comment