ಕರ್ನಾಟಕ

ರಾಜ್ಯದಲ್ಲಿ ಪ್ರತ್ಯೇಕ ಗುಪ್ತವಾರ್ತಾ ವೃಂದ ಸೃಜನೆಗೆ ತೀರ್ಮಾನ: ಸಿದ್ದರಾಮಯ್ಯ

Pinterest LinkedIn Tumblr

cm2

ಬೆಂಗಳೂರು, ಡಿ.29: ರಾಜ್ಯದಲ್ಲಿ ಗುಪ್ತಚರ ಚಟುವಟಿಕೆಗಳಲ್ಲಿ ವೃತ್ತಿಪರತೆ ತರಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಮುಂಜಾಗರೂಕತಾ ಕ್ರಮಗಳಿಗೆ ಪುಷ್ಠಿ ನೀಡಲು ಪ್ರತ್ಯೇಕ ಗುಪ್ತವಾರ್ತಾ ವೃಂದವನ್ನು ಸೃಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಗರದ ಚರ್ಚ್ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದ ಬಾಂಬ್ ಸ್ಪೋಟ ಕುರಿತಂತೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಅವರು ಈ ವಿಷಯವನ್ನು ಬಹಿರಂಗಪಡಿಸಿದರು.

ಸರ್ಕಾರದ ಈ ನಿರ್ಧಾರದ ಮೊದಲ ಹಂತದಲ್ಲಿ ಸೈಬರ್ ಅಪರಾಧಗಳ ವಿಶ್ಲೇಷಣೆ ಹಾಗೂ ಪತ್ತೆಗಾಗಿ 40 ಸಾಪ್ಟ್‌ವೇರ್ ಇಂಜಿನಿಯರ್‌ಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸಂಭವಿಸಬಹುದಾದ ಭಯೋತ್ಪಾದಕ ಕೃತ್ಯಗಳು ಹಾಗೂ ಇತರೆ ಉಗ್ರಗಾಮಿ ಚಟುವಟಿಕೆಗಳನ್ನು ತಡೆಗಟ್ಟಲು ಆಂಧ್ರ ಪ್ರದೇಶದ ಸಾರ್ವಜನಿಕ ಸುರಕ್ಷತಾ (ಉಪ ಕ್ರಮಗಳು)ಜಾರಿ ಕಾಯಿದೆ – 2013 ರ ಮಾದರಿಯಲ್ಲಿಯೇ ಸಾರ್ವಜನಿಕ ಸುರಕ್ಷತಾ (ಉಪ ಕ್ರಮಗಳು) ಜಾರಿ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

cm

ಯಾವುದೇ ಸಮಯದಲ್ಲಿ ಒಂದು ನೂರಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ವಾಣಿಜ್ಯ ಹಾಗೂ ಇತರೆ ಸ್ಥಳಗಳ ಒಳಭಾಗ ಹಾಗೂ ಹೊರಭಾಗದಲ್ಲಿ ಕ್ಲೋಸ್ ಸರ್ಕ್ಯೂಟ್ ಟೆಲೆವಿಷನ್‌ಗಳನ್ನು ಸಂಬಂಧಿತ ಸಂಸ್ಥೆಗಳು ತಮ್ಮ ಖರ್ಚಿನಲ್ಲಿಯೇ ಕಡ್ಡಾಯವಾಗಿ ಅಳವಡಿಸಬೇಕೆನ್ನುವುದು ಈ ಮಸೂದೆಯಲ್ಲಿನ ವಿಶೇಷತೆಯಾಗಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೆ ಹೊರೆ ಕಡಿಮೆಯಾಗುವುದರ ಜೊತೆಗೆ ಸರ್ಕಾರಕ್ಕೆ ಸಾರ್ವಜನಿಕರ ಸಹಭಾಗಿತ್ವವೂ ದೊರೆಯುತ್ತದೆ.

ರಾಜ್ಯದ ರಾಜಧಾನಿಯ ಶಕ್ತಿ ಕೇಂದ್ರ ವಿಧಾನ ಸೌಧದ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗುವುದು. ಅಲ್ಲದೆ, ಆಸ್ಪತ್ರೆ ಮತ್ತಿತರೆ ಜನನಿಬಿಡ ಸ್ಥಳಗಳಲ್ಲಿಹೊಯ್ಸಳ ಮತ್ತು ಚೀಟಾ ಸಂಚಾರದ ಜೊತೆಗೆ ಪೊಲೀಸರ ಪಹರೆಯನ್ನೂ ಹೆಚ್ಚಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಪ್ರತಿಫಲ ನೀತಿ
ಬಾಂಬ್ ಸ್ಪೋಟದಂತಹ ದುಷ್ಕೃತ್ಯಗಳು ಸಂಭವಿಸಿದ ನಂತರ ಅಪರಾಧಿಗಳನ್ನು ಪತ್ತೆ ಹಚ್ಚಲು ನೆರವಾಗುವ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವ ಪ್ರತಿಫಲ ನೀತಿ ರೂಪಿಸಲು ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡುವುದೂ ಈ ನೀತಿಯ ಪ್ರಮುಖ ಭಾಗವಾಗಿರುತ್ತದೆ ಎಂದು ಶ್ರೀ ಸಿದ್ದರಾಮಯ್ಯ ಅವರು ಹೇಳಿದರು.

ಸಿಮಿ ಕೈವಾಡ ?
ಭಾನುವಾರದ ಘಟನೆಯಲ್ಲಿ ಆಲ್ ಉಮಾ ಸಂಘಟನೆ, ಮಧ್ಯಪ್ರದೇಶದ ಜೈಲಿನಿಂದ ತಪ್ಪಿಸಿಕೊಂಡ ಸಿಮಿ ಕಾರ್ಯಕರ್ತರ ಅಥವಾ ಬೇರೆ ಸಂಘಟನೆಗಳ ಕೈವಾಡವಿದೆಯೇಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಬೆಂಗಳೂರು ನಗರ ಪೊಲೀಸ್‌ನ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಅಪರ ಆಯುಕ್ತ ಶ್ರೀ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಘಟನೆ ಕುರಿತು ತನಿಖೆ ನಡೆಸುತ್ತಿರುವ ಬಹು ವಿಶೇಷ ತಂಡ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಭದ್ರತಾ ಹಾಗೂ ತನಿಖಾ ದೃಷ್ಠಿಯಿಂದ ಈವರೆಗೆ ಸಂಗ್ರಹಿಸಿರುವ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೆಚ್ಚಿನ ವಿವರಗಳನ್ನು ಒದಗಿಸಲು ಮುಖ್ಯಮಂತ್ರಿ ನಿರಾಕರಿಸಿದರು.

ರಾಜ್ಯದೆಲ್ಲೆಡೆ ಕಟ್ಟೆಚ್ಚರ
ರಾಜ್ಯದೆಲ್ಲೆಡೆ ಕಟ್ಟೆಚ್ಚರ ಘೋಷಿಸಲಾಗಿದೆ. ಈ ಬಗ್ಗೆ ಎಲ್ಲಾ ವಲಯ ಆರಕ್ಷಕ ಮಹಾ ನಿರೀಕ್ಷಕರು ಹಾಗೂ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವಂತೆನಿರ್ದೇಶನ ನೀಡಲಾಗಿದೆ. ಅಲ್ಲದೆ, ಕೇಂದ್ರ ಗೃಹ ಮಂತ್ರಾಲಯದೊಂದಿಗೆ ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದೆ ಎಂದು ನುಡಿದರು.

ಸಂಭ್ರಮದ ಅವಧಿ ಕಡಿತ
ಹೊಸ ವರ್ಷಾಚರಣೆಯ ಸ್ವಾಗತಕ್ಕೆ ಡಿಸೆಂಬರ್ 31 ರಂದು ನಗರದ ಹೃದಯ ಭಾಗದಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ರಸ್ತೆಯಲ್ಲಿ ನಡೆಯುವ ಸಂಭ್ರಮದ ಅವಧಿಯಲ್ಲಿ ಜನವರಿ ಒಂದರ ಮುಂಜಾನೆ 2-00 ಗಂಟೆಯ ಬದಲು 1-00 ಗಂಟೆಗೇ ಕಡಿತಗೊಳಿಸಲು ಯೋಚಿಸಲಾಗಿದೆ. ಸಂಭ್ರಮಾಚರಣೆಗೆ ನಿಷೇಧ ಹೇರುವ ಯಾವುದೇ ಚಿಂತನೆ ಇಲ್ಲ.ಆದರೆ, ಸುರಕ್ಷತಾ ದೃಷ್ಠಿಯಿಂದ ಕೆಲವು ನಿಬಂಂಧಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಜಾರಿಗೊಳಿಸಲಿದ್ದಾರೆ ಎಂದು ಶ್ರೀ ಸಿದ್ದರಾಮಯ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಂತಹ ಸಂದರ್ಭಗಳನ್ನು ಯೂರೂ ರಾಜಕೀಯ ದುರ್ಲಾಭಕ್ಕೆ ಬಳಸಿಕೊಳ್ಳಬಾರದು ಎಂದು ಹಿತನುಡಿದ ಮುಖ್ಯಮಂತ್ರಿ ಭಯೋತ್ಪಾದಕಾ ಚಟುವಟಿಕೆಗಳ ಕುರಿತು ರಾಜ್ಯ ಸರ್ಕಾರ ಮೃದು ಧೋರಣೆ ತಳೆದಿಲ್ಲ. ಬದಲಾಗಿ ಭಯೋತ್ಪಾದನೆ ಮಟ್ಟ ಹಾಕಲು ಕಠಿಣ ನಿಲುವು ತಾಳಿದೆ ಎಂದರು.

ಬಾಂಬ್ ಸ್ಪೋಟಕ್ಕೆ ಬಲಿಯಾದ ಶ್ರೀಮತಿ ಭವಾನಿ ದೇವಿ ಅವರ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಅಲ್ಲದೆ, ಇದೇ ಸ್ಪೋಟದಲ್ಲಿ ಗಾಯಗೊಂಡ ಇತರ ಮೂವರಿಗೂ ಅತ್ಯುತ್ತಮ ಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.ಅಲ್ಲದೆ, ಈ ಮೂರೂ ಸಂತ್ರಸ್ತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಗೃಹ ಸಚಿವ ಶ್ರೀ ಕೆ. ಜೆ. ಜಾರ್ಜ್, ಗೃಹ ಸಚಿವರ ಭದ್ರತಾ ಸಲಹೆಗಾರ ಶ್ರೀ ಕೆಂಪಯ್ಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಕೌಶಿಕ್ ಮುಖರ್ಜಿ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಶೋಭನ್ ಕುಮಾರ್ ಪಾಟ್ನಾಯಕ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಡಿ. ಎನ್. ನರಸಿಂಹ ರಾಜು,ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹಾಗೂ ಮಹಾನಿರೀಕ್ಷಕ ಶ್ರೀ ಲಾಲ್ ರುಖಮೋ ಪಚಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಎಂ. ಎನ್. ರೆಡ್ಡಿ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.

Write A Comment