ಕರ್ನಾಟಕ

ರಾಜ್ಯದಲ್ಲಿ ಆಂಧ್ರ ಮಾದರಿ ಸಾರ್ವಜನಿಕ ಸುರಕ್ಷತಾ ಜಾರಿ ಕಾಯ್ದೆ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr

cm-meeting

ಅಂಗಡಿ,ಹೊಟೇಲ್‍ಗಳಲ್ಲಿ ಸಿಸಿಟಿವಿ ಕಡ್ಡಾಯ; ಗುಪ್ತಚರ ಇಲಾಖೆ ವೈಫಲ್ಯ ಆಗಿಲ್ಲ: ಗಾಯಾಳುಗಳಿಗೆ ಸರ್ಕಾರದಿಂದ ಚಿಕಿತ್ಸೆ

ಬೆಂಗಳೂರು: ರಾಜ್ಯದಲ್ಲಿ ಆಂಧ್ರ ಮಾದರಿ ಸಾರ್ವಜನಿಕ ಸುರಕ್ಷತಾ ಜಾರಿ ಕಾಯ್ದೆ ತರಲು ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕಾಯ್ದೆ ಪ್ರಕಾರ ಕಡ್ಡಾಯ ಸಿಸಿಟಿವಿ ಅಳವಡಿಕೆ, ಭದ್ರತೆ ಬಗ್ಗೆ ಶಾಪ್, ಹೋಟೆಲ್ ಮಾಲೀಕರು ಕ್ರಮ ಕೈಗೊಳ್ಳಬೇಕು. ಈಗಾಗಲೇ ಆಂಧ್ರದಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಶಾಪ್, ಹೋಟೆಲ್‍ಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಎಲ್ಲದಕ್ಕೂ ಸಾರ್ವಜನಿಕರ ಸಹಾಯ ಮುಖ್ಯ ಎಂದರು.

ಸುಳಿವು ನೀಡಿದವರಿಗೆ ಬಹುಮಾನ: ಚರ್ಚ್ ಸ್ಟ್ರೀಟ್‍ನಲ್ಲಿ ಸ್ಫೋಟಕ ಇಟ್ಟ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುಳಿವು ನೀಡಿದವರ ಹೆಸರು ಗೌಪ್ಯವಾಗಿಡುತ್ತೇವೆ ಎಂದು ಭರವಸೆ ನೀಡಿದ ಅವರು, ರಾಜ್ಯದಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಆಗಿಲ್ಲ. ಆದರೂ ಗುಪ್ತಚರ ಇಲಾಖೆ ಬಲಪಡಿಸಲು ಕ್ರಮ ಕೈಗೊಳ್ಳುತ್ತೇವೆ. ಕೇಡರ್ ಮಾದರಿಯಲ್ಲಿ ಗುಪ್ತಚರ ಇಲಾಖೆ ಬಲಪಡಿಸುತ್ತೇವೆ ಎಂದು ತಿಳಿಸಿದರು.

ನಗರದಲ್ಲಿ ಕಟ್ಟೆಚ್ಚರ: ಬಾಬ್ ಸ್ಟ್ರೀಟ್ ಸ್ಫೋಟದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಮೆಹದಿ ಬಂಧನ ಬಳಿಕವೂ ಕಟ್ಟೆಚ್ಚರ ವಹಿಸಿದ್ದೇವೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ. ಜನಸಂದಣಿ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸುತ್ತೇವೆ. ವಿಧಾನಸೌಧದ 5 ಕಿ.ಮೀ ಸುತ್ತಮುತ್ತ ಹೈಅಲರ್ಟ್ ಘೋಷಣೆಯಾಗಿದೆ. ಕೇಂದ್ರ ಸರ್ಕಾರದ ಜತೆಯೂ ಸಂಪರ್ಕದಲ್ಲಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಘಟನೆಯ ಮಾಹಿತಿ ಪಡೆದಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.

ರಾಜ್ಯ ಪೊಲೀಸರಿಂದ ತನಿಖೆ: ಸ್ಫೋಟದ ಬಗ್ಗೆ ರಾಜ್ಯದ ಪೊಲೀಸರೇ ತನಿಖೆ ನಡೆಸುತ್ತಾರೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಸಿಎಂ ತಿಳಿಸಿದರು. ಮಧ್ಯಪ್ರದೇಶದ ಜೈಲಿನಿಂದ ತಪ್ಪಿಸಿಕೊಂಡಿರುವ ಸಿಮಿ ಸಂಘಟನೆಯವರು ರಾಜ್ಯಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಇದೆ. ಆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎನ್‍ಐಎ ಜೊತೆ ಸಂಪರ್ಕ ಮಾಡಿ ಚರ್ಚೆ ಮಾಡುತ್ತೇವೆ. ಸಿಮಿ ಸಂಘಟನೆ ಸೇರಿದಂತೆ ನಿಷೇಧಿತ ಸಂಘಟನೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.

5 ಲಕ್ಷ ರೂ. ಪರಿಹಾರ: ಸ್ಫೋಟದಲ್ಲಿ ಮೃತಪಟ್ಟ ಮಹಿಳೆ ಭವಾನಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗಿಡಗಳ ಮಧ್ಯೆ ಬಾಂಬ್ ಇಟ್ಟು ನಿನ್ನೆ ರಾತ್ರಿ 8.30ಕ್ಕೆ ಸ್ಫೋಟ ನಡೆಸಿದ್ದಾರೆ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಮೂವರು ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ. ಭವಾನಿ ಮೃತದೇಹ ಮರಣೋತ್ತರ ಪರೀಕ್ಷೆ ಬಳಿಕ ಚೆನ್ನೈಗೆ ರವಾನೆ ಮಾಡುತ್ತೇವೆ. ಗಾಯಾಳುಗಳಿಗೆ ಸರ್ಕಾರದಿಂದ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಯಾರೆಲ್ಲ ಪಾಲ್ಗೊಂಡಿದ್ದರು: ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಗೃಹಸಚಿವ ಕೆ.ಜೆ.ಜಾರ್ಜ್, ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪಚಾವೋ, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಗೃಹ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Write A Comment