ಕರ್ನಾಟಕ

ವಿಜ್ಞಾನಿಗಳು ದೇವರನ್ನು ನಂಬಿದರೆ ನಷ್ಟವೇನು?: ಯಾನ’ ವಿಚಾರ ಸಂಕಿರಣದ ಪ್ರಶ್ನೋತ್ತರದಲ್ಲಿ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ

Pinterest LinkedIn Tumblr

bairappa

ಬೆಂಗಳೂರು: ‘ವಿಜ್ಞಾನಿಗಳು ದೇವರನ್ನು ಏಕೆ ತಿರಸ್ಕರಿಸಬೇಕು? ಅವರು ತಮ್ಮ ಸಂಶೋಧನೆಯ ಆಚೆಗೆ ದೇವರನ್ನು ನಂಬಿದರೆ ನಮಗಾಗುವ ನಷ್ಟವೇನು. ವಿಜ್ಞಾನವನ್ನು ಮೀರಿದ ಎಷ್ಟೋ  ನಂಬಿಕೆಗಳು ಇರುತ್ತವೆ. ಅವುಗಳನ್ನು ನಾವು ತಿರಸ್ಕರಿಸಬೇಕೆಂದಿಲ್ಲ’
–ಕಾದಂಬರಿಕಾರ ಎಸ್‌. ಎಲ್‌. ಭೈರಪ್ಪ ಅವರು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರವಿದು.

ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ಮತ್ತು ಭೈರಪ್ಪ ಅಭಿ­ಮಾನಿ ಬಳಗ ನಗರದಲ್ಲಿ ಭಾನು­ವಾರ ಆಯೋಜಿಸಿದ್ದ ಭೈರಪ್ಪ ಅವರ ಹೊಸ ಕಾದಂಬರಿ ‘ಯಾನ’ ಕುರಿತ ವಿಚಾರ ಸಂಕಿ­ರಣದಲ್ಲಿ ನಡೆದ ಪ್ರಶ್ನೋತ್ತರ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.

ಆಯ್ದ ಪ್ರಶ್ನೋತ್ತರದ ಸಾರಾಂಶ ಇಲ್ಲಿದೆ…

* ‘ಯಾನ’ ಕಾದಂಬರಿಯಲ್ಲಿ ವೈಜ್ಞಾ­ನಿ­ಕತೆ, ವಿಜ್ಞಾನ ಹೇಳುವ ಸಂದರ್ಭ­ದಲ್ಲಿ ಗೊಂದಲ ಸೃಷ್ಟಿಸಿ ಸ್ಪಷ್ಟೀಕರಣ ನೀಡಲು ಮರೆತಿದ್ದೀರಾ?
ನಮ್ಮಲ್ಲಿ ವಿಜ್ಞಾನ ಗೊತ್ತಿಲ್ಲದ ಕಲಾ ಪದವೀಧರರು ಮಾತ್ರ ಬುದ್ಧಿಜೀವಿ­ಗಳೆಂದು ಕರೆದುಕೊ­ಳ್ಳುತ್ತಿದ್ದಾರೆ. ಅವರ ದೃಷ್ಟಿಯಲ್ಲಿ ವಿಜ್ಞಾನಿಗಳು ಬುದ್ಧಿಜೀವಿಗಳೇ ಅಲ್ಲ.
ಸಾಮಾಜಿಕ ಸಿದ್ಧಾಂತಗಳನ್ನು ರೂಪಿ­ಸಿ­ಕೊಂಡು ಪ್ರಗತಿಗೆ ಪರ, ವಿರೋಧ ಎಂದು ವಿಭಾಗಿಸಿ ಅದಕ್ಕಾಗಿ ನಾವು ಬಾವುಟ ಹಿಡಿದು ಪ್ರತಿಭಟಿ­ಸಬೇಕು ಎನ್ನು­ವಂತಹ ವಿಚಾರಗಳು ವಿಶ್ವ­ವಿದ್ಯಾ­ಲಯಗಳ ಮಾನವಿಕ ವಿಭಾಗ­ಗಳಲ್ಲಿ ಮಾತ್ರ ನಡೆಯುತ್ತವೆ. ಇದು ವಿಜ್ಞಾನ ವಿಭಾಗ­ಗಳಲ್ಲಿ ನಡೆಯುವುದಿಲ್ಲ. ಐಐಟಿ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ­ಗಳಲ್ಲಿ ಇಂತಹ ಪ್ರತಿಭಟನೆಗಳು ನಡೆಯುವುದೇ ಇಲ್ಲ. ಯಾಕೆಂದರೆ ಅವರು ಶುದ್ಧ ವಿಜ್ಞಾನಿಗಳು. ಅವರಿಗೆ ವಿಜ್ಞಾನದ ಪರಿಧಿಯ ಅರಿವಿದೆ. ಗೊತ್ತಿ­ಲ್ಲದ ವಿಷಯಕ್ಕೆ ನಾವು ತಲೆ­ಹಾಕಬಾರದು ಎನ್ನುವುದು  ವಿಜ್ಞಾನ ಅಭ್ಯಸಿಸು­ವವರಿಗೆ ಗೊತ್ತಿದೆ. ಆದರೆ, ಮಾನ­ವಿಕ ವಿಭಾಗ­ದವರು ಎಲ್ಲವೂ ನಮಗೆ ಗೊತ್ತಿದೆ ಎನ್ನುತ್ತಾರೆ. ಸಾಹಿ­ತ್ಯದ ವಿದ್ಯಾರ್ಥಿಗಳು ಸಾಹಿತ್ಯ­ವೊಂ­ದನ್ನು ಬಿಟ್ಟು ಉಳಿದೆಲ್ಲವುಗಳಿಗೂ ಜೈ ಎನ್ನುತ್ತಾರೆ.

* ಭೈರಪ್ಪನವರ  ಕೃತಿಗಳಿಗೆ ಸಂಬಂಧಿಸಿದಂತೆ ಕನ್ನ­ಡದ ಹೆಸರಾಂತ   ಕೆಲ ಲೇಖಕರು ಒಂದು ರೀತಿಯ ನಕಾರಾತ್ಮಕ ಧೋರಣೆ ತಳೆಯುವುದೇಕೆ?
ಯಾವುದೇ ಪ್ರಶಸ್ತಿಗೆ ನನ್ನ ಹೆಸರು ಪ್ರಸ್ತಾವ­ಗೊಂಡಾಗ ಆತ ವಿವಾದಾತ್ಮಕ ವ್ಯಕ್ತಿ, ಜಾತ್ಯತೀತ­ವಾದಿ­ಯಲ್ಲ ಎಂದು ಕೆಲವರು ನನಗೆ ಪ್ರಶಸ್ತಿ ತಪ್ಪಿಸುವ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಪ್ರಶಸ್ತಿ ಇತ್ಯಾದಿಗಳ ಆಯ್ಕೆ ಮೇಲೆ ಕೆಲವರ ಹಿಡಿತವಿದೆ. ಎಷ್ಟೋ ದಶಕಗಳಿಂದ ಒಂದು ಸ್ನೇಹಿತರ ವಲಯದವರು ಇದನ್ನು ಆಳುತ್ತಲೇ ಇದ್ದಾರೆ.

* ‘ಯಾನ’ದಲ್ಲಿ ಬರುವ ಹೆಣ್ಣು ಅತ್ಯಾಚಾರಕ್ಕೆ ಹಾತೊ­ರೆ­ಯುತ್ತಾಳೆ ಎಂಬ ಮಾತಿದೆ ಎಂದು ಕೆಲ ಮಹಿಳಾ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿ­ಸಿದವು. ಇದಕ್ಕೆ ನಿಮ್ಮ ಅಭಿಪ್ರಾಯ­ವೇನು?
ಈ ಪ್ರಶ್ನೆಯಲ್ಲಿರುವ ಮಾತನ್ನು ಯಾರು ಯಾರಿಗೆ ಯಾವ ಸಂದರ್ಭ­ದಲ್ಲಿ ಹೇಳಿದರು ಎನ್ನುವುದು ಮುಖ್ಯ. ಅದು ಇಂಗಾಳ ಪಾತ್ರದ ಮಾತೇ ವಿನಾ ನನ್ನ ಮಾತಲ್ಲ. ಯಾವುದೇ ಸಂಘಟನೆ ಮಾಡಿಕೊಂಡಿ­ರುವವರಿಗೆ ನಿಜವಾಗಿ ಸಾಹಿತ್ಯ ಅರ್ಥವಾಗುವುದಿಲ್ಲ. ಏಕೆಂದರೆ ಅವರು ಸಾಹಿತ್ಯದ ಯಾವುದೇ ಕೃತಿಯನ್ನು ತಮ್ಮ ದೃಷ್ಟಿಯಲ್ಲಿಯೇ ನೋಡುತ್ತಾರೆ.
ಎಲ್ಲಿದ್ದರೂ ತಪ್ಪು ಕಂಡು ಹಿಡಿಯ­ಬೇಕು ಎನ್ನುವ­ವರು ಪ್ರತಿಯೊಂದಕ್ಕೂ ತಪ್ಪು ಕಂಡೇ ಹಿಡಿಯುತ್ತಾರೆ. ಕೃತಿ­ಯಲ್ಲಿರುವ ಸನ್ನಿವೇಶವನ್ನು ಅರ್ಥ­ಮಾಡಿ­ಕೊಳ್ಳದ­ವರು ಇನ್ನೇನು ಮಾಡಲು ಸಾಧ್ಯ.

* ವೇದ, ಉಪನಿಷತ್ತು, ರಾಮಾಯಣ, ಮಹಾ­ಭಾರತ ಇವುಗಳಲ್ಲಿ ಇರುವ ಭಾರತೀಯ ತತ್ವ­ಜ್ಞಾನದ ಕೆಲ ಅಂಶಗಳನ್ನಾದರೂ ‘ಯಾನ’ ಓದುವ ಮೊದಲು ತಿಳಿದುಕೊಂಡಿರಬೇಕೆ?
ಯಾನಕ್ಕೆ ಮಾತ್ರವಲ್ಲ. ಯಾವುದೇ ಸಾಹಿತ್ಯ ಕೃತಿ­ಯನ್ನು ಓದುವ ಪೂರ್ವದಲ್ಲಿ ನಮ್ಮ ಸಂಸ್ಕೃತಿಯ ಮುಖ್ಯ ಅಂಶಗಳನ್ನು ನಾವು ತಿಳಿದುಕೊಂಡಿರಲೇ ಬೇಕು.  ಪ್ರಕೃತಿ ಪುರುಷ ಏನು ಎನ್ನುವುದು ಗೊತ್ತೆ ಇಲ್ಲ­ದಿದ್ದರೆ ಯಾನದಲ್ಲಿ ಬರುವ ಕೃಷ್ಣ ಗಹ್ವರದ ಕಲ್ಪನೆ ಸೇರಿದಂತೆ ಅನೇಕ ಅಂಶಗಳು ಅರ್ಥವೇ ಆಗುವುದಿಲ್ಲ.
ಒಬ್ಬ ವಿಮರ್ಶಕರು, ಭೈರಪ್ಪ ಮಹಿಳೆ­ಯನ್ನು ದೇವತೆಯಂತೆ ಇಲ್ಲವೇ ಭೋಗದ ವಸ್ತುವಿನಂತೆ ಕಾಣುತ್ತಾರೆ ಎಂದು ಬರೆಯುತ್ತಾರೆ. ಪ್ರಕೃತಿ ಪುರುಷ­ದಂತಹ ನಮ್ಮ ಸಂಪ್ರದಾಯ ಗೊತ್ತಿಲ್ಲದೆ ಇರು­ವ­ವರು ಯಾವಾಗಲೂ ತಪ್ಪೇ ತಿಳಿದುಕೊಳ್ಳು­ತ್ತಾರೆ. ಆದರೆ, ನಮ್ಮಲ್ಲಿ ಯಾವಾಗಲೂ ಇಂತಹವರೆ ವಿಮರ್ಶೆ ಬರೆಯುವವರು.

* ಕಾದಂಬರಿಯಲ್ಲಿ ವೈಜ್ಞಾನಿಕ ಚೌಕಟ್ಟಿರುವುದು ಸಹಜ. ಆದರೆ, ಸಾಂಪ್ರದಾಯಿಕ ಚೌಕಟ್ಟನ್ನು ಉದ್ದೇಶ­ಪೂರ್ವಕವಾಗಿ ಅಳವಡಿ­ಸಿದ್ದೀರಾ? ಅಥವಾ ರಚನೆ ಸಮಯದಲ್ಲಿ ಕತೆ ಆ ರೀತಿ ಬೆಳೆಯುತ್ತಾ  ಹೋಯಿತೆ?
ಎಷ್ಟೋ ಸಂದರ್ಭದಲ್ಲಿ ಬರೆಯುತ್ತಿ­ರುವಾಗ ನಮ್ಮ ಆಲೋಚನೆ ಈ ರೀತಿ ಬೆಳೆಯುತ್ತ ಹೋಗು­ತ್ತದೆ. ಕಾದಂಬರಿಯಲ್ಲಿ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ವೆಂಕಟ್‌ ತಿರುಪತಿಗೆ ಹೋಗುವ ಸನ್ನಿವೇಶ ಮೊದಲೇ ನನ್ನ ಮನಸ್ಸಿನಲ್ಲಿ ಮೂಡಿರಲಿಲ್ಲ. ಅದು ಬರೆಯುವಾಗ ಬಂತು. ಇಲ್ಲಿ ತಿರುಪತಿಗೆ ಹೋದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುವವರು ಲೆಕ್ಕಪತ್ರ ವಿಭಾಗ­ದ­ವರು. ಅವರೇ­ನಾದರೂ ಸಂಸತ್ತಿಗೆ ಇದನ್ನು ವರದಿ ಮಾಡಿ ಬಿಟ್ಟರೆ  ನಮ್ಮ ಜಾತ್ಯತೀತ ಸರ್ಕಾರದವರು ಇವರು ತಿರುಪತಿಗೆ ಏಕೆ ಹೋದರು ಎಂದು ಕ್ರಮ ಕೈಗೊಳ್ಳು­ತ್ತಾರೆ. ಪಾತ್ರಗಳು ಸಂಕೀರ್ಣವಾಗಿ ಬೆಳೆ­ಯುವುದು ಈ ರೀತಿ ಆಲೋಚಿಸುವುದರಲ್ಲಿಯೇ.

* ಸಹಸ್ರಾರು ವರ್ಷ ಯಾನಕ್ಕೆ ಬೇಕಾದ ಬಾಳಿಕೆಯ ಬಟ್ಟೆ, ಸಲಕರಣೆ ಬಗ್ಗೆ ಕಾದಂಬರಿಯಲ್ಲಿ ಉಲ್ಲೇಖ ಯಾಕಿಲ್ಲ.
ವಿಶೇಷ ರೀತಿಯ ಪ್ಲಾಸ್ಟಿಕ್‌ ಅನ್ನು ವಿಜ್ಞಾನಿಗಳು ತಯಾರಿ­ಸುತ್ತಾರೆ ಎನ್ನು­ವುದನ್ನು ನಾವು ಕಲ್ಪನೆ ಮಾಡಿ­ಕೊಳ್ಳಬೇಕು. ಯಾವುದೇ ಸಾಹಿತ್ಯ ಕೃತಿಯಲ್ಲಿ ಏನು ಕೊಟ್ಟಿರುತ್ತಾರೆ ಅದನ್ನು ಸ್ವೀಕರಿಸಬೇಕು. ಬದಲು, ಪ್ರತಿಯೊಂದನ್ನು ಇದು ಸಾಧ್ಯವೇ ಎನ್ನುವ ಪ್ರಶ್ನೆ­ಗಳನ್ನು ಎತ್ತುತ್ತ ಹೋದರೆ ನೀವು ಸಾಹಿತ್ಯ ಓದಲು ಸಾಧ್ಯವಿಲ್ಲ.

* ‘ಯಾನ’ದ ಮೇಲೆ ಭಾರತ ಮೂಲದ ಮಹಿಳಾ ಗಗನಯಾತ್ರಿಗ­ಳಾದ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್‌ ಅವರ ಛಾಯೆ ಬಿದ್ದಿದೆಯಾ?
ನನ್ನ ಕಾದಂಬರಿಯಲ್ಲಿರುವುದು ಕಲ್ಪಿತ ಪಾತ್ರಗಳು ಮಾತ್ರ.

* ಭಾರತದ ಯುವ ಪೀಳಿಗೆಗೆ ಯಾನದ ಸಂದೇಶವೇನು?
ವಿಜ್ಞಾನವನ್ನು ಹೆಚ್ಚು ಹೆಚ್ಚು ಓದಿ.

Write A Comment