ಕರ್ನಾಟಕ

ಜಿ ಎಚ್ ನಾಯಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Pinterest LinkedIn Tumblr

g.h.nayak

ಹೊಸದಿಲ್ಲಿ ಜಿ ಎಚ್ ನಾಯಕ ಎಂದೇ ಪ್ರಸಿದ್ಧರಾಗಿರುವ ಕನ್ನಡದ ಹಿರಿಯ ವಿಮರ್ಶಕ ಪ್ರೊ. ಗೋವಿಂದರಾಯ ಹಮ್ಮಣ್ಣ ನಾಯಕ ಅವರ ಪ್ರಬಂಧ ಸಂಕಲನ ‘ಉತ್ತರಾರ್ಧ’ಕ್ಕೆ 2014ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಮುಂಬರುವ ಮಾ.9ರಂದು ಇಲ್ಲಿ ನಡೆಯಲಿರುವ ಅಕಾಡೆಮಿಯ ಅಕ್ಷರ ಉತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತಲಾ ಒಂದು ಲಕ್ಷ ರೂಪಾಯಿಯ ಚೆಕ್ ಮತ್ತು ತಾಮ್ರಫಲಕವನ್ನು ಪ್ರಶಸ್ತಿ ಒಳಗೊಂಡಿದೆ.

ಡಾ.ಬಿ ಎ ವಿವೇಕ ರೈ, ಡಾ.ಪ್ರಧಾನ ಗುರುದತ್ತ ಹಾಗೂ ಡಾ.ವೀರಣ್ಣ ದಂಡೆ ಅವರನ್ನು ಒಳಗೊಂಡ ಕನ್ನಡದ ಕೃತಿಗೆ ಸಂಬಂಧಿಸಿದ ತೀರ್ಪುಗಾರರ ಸಮಿತಿಯ ಸರ್ವಾನುಮತದ ಶಿಫಾರಸನ್ನು ಶುಕ್ರವಾರ ಇಲ್ಲಿ ನಡೆದ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಅನುಮೋದಿಸಿತು.

ಕೊಂಕಣಿ ಭಾಷೆಯ ಕೃತಿಗೆ ನೀಡಲಾಗುವ ಪ್ರಶಸ್ತಿಯು ಮಾಧವಿ ಸರ್ದೇಸಾಯಿ ಅವರ ‘ಮಂಥನ್’ ಎಂಬ ಹೆಸರಿನ ಪ್ರಬಂಧಗಳ ಕೃತಿಗೆ ಸಂದಿದೆ. ಕೊಂಕಣಿ ತೀರ್ಪುಗಾರರ ಸಮಿತಿಯಲ್ಲಿ ದಾಮೋದರ ಮಾಜೋ, ಆರ್ ಎಸ್ ಭಾಸ್ಕರ್ ಹಾಗೂ ಉದಯ ಎಲ್ ಭೈಂಬ್ರೆ ಇದ್ದರು.

ಹಿಂದಿ, ಇಂಗ್ಲಿಷ್, ಮರಾಠಿ, ತಮಿಳು, ತೆಲುಗು, ಮಲೆಯಾಳಂ, ಬಂಗಾಳಿ, ಉರ್ದು, ಬೋಡೋ, ಡೋಗ್ರಿ, ಸಂತಾಲಿ ಸೇರಿದಂತೆ ಒಟ್ಟು 22 ಭಾಷೆಗಳ ಲೇಖಕರಿಗೆ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ”ಸಂಸ್ಕೃತ ಮತ್ತು ಮಣಿಪುರಿ ಭಾಷೆಗಳ ಪ್ರಶಸ್ತಿಗಳನ್ನು ತೀರ್ಪುಗಾರರ ಸಮಿತಿ ಲಭ್ಯವಿಲ್ಲದ ತಾಂತ್ರಿಕ ಕಾರಣಗಳಿಗಾಗಿ ಮುಂದಿನ 15 ದಿನಗಳಲ್ಲಿ ಪ್ರಕಟಿಸಲಾಗುವುದು,” ಎಂದು ಅಕಾಡೆಮಿಯ ಕಾರ್ಯದರ್ಶಿ ಡಾ.ಕೆ ಶ್ರೀನಿವಾಸ ರಾವ್ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಯೊಂದು ಭಾಷೆಯ ಪ್ರಶಸ್ತಿ ವಿಜೇತ ಕೃತಿಯನ್ನು, ಅಕಾಡೆಮಿಯು ಗೊತ್ತು ಮಾಡಿರುವ ವಿಧಾನದ ಪ್ರಕಾರ ಆಯಾ ಭಾಷಾ ತೀರ್ಪುಗಾರರ ಸಮಿತಿಯ ಶಿಫಾರಸಿನ ಮೇರೆಗೆ ಆಯ್ಕೆ ಮಾಡಲಾಗಿದೆ. 2010ರ ಜನವರಿ ಒಂದರಿಂದ 2012ರ ಡಿಸೆಂಬರ್ 31ರ ನಡುವಣ ಅವಧಿಯ ಮೂರು ವರ್ಷಗಳ ಅವಧಿಯಲ್ಲಿ ಪ್ರಕಟಗೊಂಡಿರುವ ಕೃತಿಗಳನ್ನು ಪ್ರಶಸ್ತಿಗಳಿಗೆ ಪರಿಗಣಿಸಲಾಗಿದೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಇತರೆ ಭಾಷೆಗಳ ಲೇಖಕರು ಮತ್ತು ಕೃತಿಗಳು: ಮರಾಠಿ- ಜಯಂತ ವಿಷ್ಣು ನಾರಳೀಕರ ಅವರ ಚಾರ್ ನಗರಾಂತಲೆ, ಮಾಝೇ ವಿಶ್ವ (ಆತ್ಮಕತೆ), ತಮಿಳು- ಪೂಮಣಿ ಅವರ ಅಗ್ನಗ್ನಾಡಿ (ಕಾದಂಬರಿ), ತೆಲುಗು- ರಾಚೆಪಾಳೆಂ ಚಂದ್ರಶೇಖರ ರೆಡ್ಡಿ ಅವರ ಮನ ನವಲಾಲು- ಮನ ಕಥಾನಿಕಲು (ಸಾಹಿತ್ಯ ವಿಮರ್ಶೆ), ಮಲಯಾಳಂ- ಸುಭಾಷ್ ಚಂದ್ರನ್ ಅವರ ಮನುಷ್ಯಾನು ಒರು ಆಮುಖಂ (ಕಾದಂಬರಿ), ಉರ್ದು ಮುನವ್ವರ್ ರಾಣಾ ಅವರ ಶಾದಾಬಾ (ಕವಿತಾ ಸಂಕಲನ), ಗುಜರಾತಿ- ದಿವಂಗತ ಅಶ್ವಿನ್ ಮೆಹತಾ ಅವರ ಛಾಬಿ ಬಿತಾರಣಿ (ಪ್ರಬಂಧಗಳು), ಬಂಗಾಳಿ- ಉತ್ಪಲಕುಮಾರ ಬಸು ಅವರ ಪಿಯಾ ಮನ ಭಾಭೈ (ಕವಿತಾ ಸಂಕಲನ), ಹಿಂದಿ- ರಮೇಶ್ ಚಂದ್ರ ಶಾ ಅವರ ವಿನಾಯಕ (ಕಾದಂಬರಿ), ಇಂಗ್ಲಿಷ್- ಆದಿಲ್ ಜಸ್ಸಾವಾಲ ಅವರ ಟ್ರೈಯಿಂಗ್ ಟು ಸೇ ಗುಡ್ ಬೈ (ಕವಿತಾ ಸಂಕಲನ).

ವಿಮರ್ಶಕರಷ್ಟೇ ಅಲ್ಲ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಚಿಂತಕ: ಸಾಮಾನ್ಯವಾಗಿ ಕನ್ನಡದ ನವ್ಯವಿಮರ್ಶಕರ ಸಾಲಿನಲ್ಲಿ ಗುರುತಿಸಲಾಗುವ ಜಿ ಎಚ್ ನಾಯಕ ಪ್ರಾಚೀನ ಸಾಹಿತ್ಯದೊಂದಿಗೂ ಗಾಢ ಸಂಬಂಧ ಇಟ್ಟುಕೊಂಡವರು. ”ವಿಮರ್ಶಕರಾಗಿ ಇಡೀ ಕನ್ನಡ ಸಾಹಿತ್ಯ ಪರಂಪರೆಯ ಜೊತೆಗೆ ನಿರಂತರ ಸಂಬಂಧ ಇರಿಸಿಕೊಂಡು ಬಂದಿದ್ದೇನೆ,” ಎಂದು ನಾಯಕರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

”ಕನ್ನಡ ಸಾಹಿತ್ಯ ಪರಂಪರೆಯ ವಿಮರ್ಶಕರಾಗಿ ಎಷ್ಟೋ ನಿಲುವು, ತೀರ್ಮಾನಗಳನ್ನು ಮರುಚಿಂತನೆಗೆ ಒಡ್ಡುವಂತೆ ಮಾಡಿದ್ದೇನೆ. ನಮ್ಮ ಹಿಂದಿನ ನವೋದಯ ತಲೆಮಾರಿನ ಶ್ರೇಷ್ಠ ವಿಮರ್ಶಕರು, ವಿದ್ವಾಂಸರು ತಳೆದ ನಿಲುವನ್ನು ಹಾಗೇ ಒಪ್ಪಿಕೊಳ್ಳದೆ ಪ್ರಶ್ನಿಸಿದ್ದೇನೆ,” ಎಂದೂ ಅವರು ಹೇಳಿದ್ದಾರೆ.

ಮೂಲತಃ ಉತ್ತರಕನ್ನಡ ಜಿಲ್ಲೆಯವರಾದ ಪ್ರೊ. ನಾಯಕ ಅವರ ‘ನಿರಪೇಕ್ಷ ‘ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಅವರ ಮತ್ತೊಂದು ವಿಮರ್ಶಾ ಕೃತಿ ‘ನಿಜದನಿ’ಯು ವಿ.ಎಂ.ಇನಾಂದಾರ ಸ್ಮಾರಕ ಬಹುಮಾನಕ್ಕೆ ಪಾತ್ರವಾಗಿದೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಜಿ ಎಸ್ ಶಿವರುದ್ರಪ್ಪ ಸಾಹಿತ್ಯ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಕಬಡ್ಡಿ ಆಟಗಾರರಾಗಿದ್ದ ಅವರು ಮೈಸೂರು ರಾಜ್ಯ ತಂಡದಲ್ಲಿದ್ದವರು. ಮಹಾರಾಜ ಕಾಲೇಜಿನ ತಂಡದ ನಾಯಕರಾಗಿದ್ದರು. ಯಕ್ಷಗಾನ ರಂಗಭೂಮಿಯಲ್ಲಿ ಹಲವು ಪಾತ್ರಗಳನ್ನು ಧರಿಸಿದವರು.

ರಾಜ್ಯ ಸರಕಾರ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಪಂಪ ಪ್ರಶಸ್ತಿಗೆ ಪಾತ್ರರಾಗಿರುವ ಪ್ರೊ.ನಾಯಕ ಅವರು ನೇರ, ನಿಷ್ಠುರ, ಖಚಿತ, ನಿಲುವುಗಳಿಗೆ ಹೆಸರಾದವರು. ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಚಿಂತಕರೂ ಆದ ಅವರು ಸಮಸಮಾಜಕ್ಕಾಗಿ ತುಡಿಯುತ್ತಾರೆ. ಗಾಂಧಿ, ಅಂಬೇಡ್ಕರ್, ಲೋಹಿಯಾ ಕುರಿತು ಅವರು ಧೇನಿಸಿದವರು. ಅನೇಕ ಸಾಮಾಜಿಕ- ರಾಜಕೀಯ ಹೋರಾಟಗಳಲ್ಲಿ ಭಾಗವಹಿಸಿದವರು.

ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ವಿನಯ ವಿಮರ್ಶೆ (1991), ಸಕಾಲಿಕ (1995), ಹರಿಶ್ಚಂದ್ರ ಕಾವ್ಯ- ಓದು ವಿಮರ್ಶೆ, ಗುಣಗೌರವ( ವ್ಯಕ್ತಿಚಿತ್ರಗಳು, 2002), ದಲಿತ ಹೋರಾಟ- ಗಂಭೀರ ಸವಾಲುಗಳು (2004), ಕೃತಿಸಾಕ್ಷಿ (ಸಾಹಿತ್ಯ ವಿಮರ್ಶೆ, 2006), ಸ್ಥಿತಿ ಪ್ರಜ್ಞೆ (2007), ಬಾಳು- ಆತ್ಮಕಥಾನಕ (ಅಪೂರ್ಣ), ಮತ್ತೆ ಮತ್ತೆ ಪಂಪ (2009) ಸಾಹಿತ್ಯ ಸಮೀಕ್ಷೆ (2009) ಹಾಗೂ ಉತ್ರರಾರ್ಧ (2001) ಅವರ ಇತರೆ ಸಾಹಿತ್ಯ ವಿಮರ್ಶಾ ಕೃತಿಗಳು.

ಸಂವೇದನೆ(ಎಂ ಗೋಪಾಲಕೃಷ್ಣ ಅಡಿಗರ ಗೌರವ ಗ್ರಂಥ), ಕನ್ನಡ ಸಣ್ಣ ಕಥೆಗಳು, ಹೊಸಗನ್ನಡ ಕವಿತೆ, ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ, ಶತಮಾನದ ಕನ್ನಡ ಸಾಹಿತ್ಯ ಸಂಪುಟ-1’ ಕೃತಿಗಳನ್ನು ಅವರು ಸಂಪಾದಿಸಿದ್ದಾರೆ.

Write A Comment