ಕರ್ನಾಟಕ

ಹಿರಿಯ ಪತ್ರಕರ್ತ ಎನ್.ಡಿ.ಶಿವಕುಮಾರ್ ನಿಧನ

Pinterest LinkedIn Tumblr

shivakumar

ಬೆಳಗಾವಿ, ಡಿ.15: ಚಳಿಗಾಲದ ಅಧಿವೇಶನ ವರದಿ ಮಾಡಲು ಆಗಮಿಸಿದ್ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹಿರಿಯ ವರದಿಗಾರ ಎನ್.ಡಿ.ಶಿವಕುಮಾರ್ ಅನಾರೋಗ್ಯದ ಕಾರಣ ನಿಧನ ಹೊಂದಿದ್ದಾರೆ. ಬೆಂಗಳೂರಿನ ಕೋರಮಂಗಲದ ನಿವಾಸಿಯಾಗಿರುವ ಶಿವಕುಮಾರ್ ಅವರು ದಕ್ಷ , ನಿಷ್ಠ ಹಾಗೂ ಪ್ರಾಮಾಣಿಕ ಪತ್ರಕರ್ತ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಅಧಿವೇಶನ ವರದಿಗಾಗಿ ಆಗಮಿಸಿದ್ದ ಶಿವಕುಮಾರ್ ಅವರಿಗೆ ನಿನ್ನೆ ರಾತ್ರಿ ಡಯೇರಿಯಾ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತರು ಕೇವಲ ನಾಲ್ಕು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದು , ಪತ್ನಿ ಹಾಗೂ ಎರಡೂವರೆ ವರ್ಷದ ಪುತ್ರಿಯನ್ನು ಅಗಲಿದ್ದಾರೆ.

ಹಿನ್ನೆಲೆ: ಮೂಲತಃ ತುಮಕೂರಿನ ಕಳ್ಳಂಬೆಳ್ಳ ಸಮೀಪದ ನಂದಿಹಳ್ಳಿಯವರಾಗಿದ್ದು , ಆಂಗ್ಲ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಡೆಕ್ಕನ್ ಹೆರಾಲ್ಡ್‌ನಲ್ಲಿ ಸೇವೆ ಸಲ್ಲಿಸಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.

ತನಿಖಾ ವರದಿಗಾರಿಕೆಯಲ್ಲಿ ಸೈ ಎನಿಸಿಕೊಂಡಿದ್ದ ಶಿವಕುಮಾರ್ ಅವರು ಹಲವಾರು ತನಿಖಾ ವರದಿಗಳನ್ನು ಬರೆದಿದ್ದರು. ಇವರ ಬರವಣಿಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಹಿರಿಯ, ಕಿರಿಯರೆನ್ನದೆ ಸಮಕಾಲೀನ ಎಲ್ಲಾ ಪತ್ರಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಶಿವಕುಮಾರ್ ಅವರು ನಾಲ್ಕು ವರ್ಷಗಳ ಹಿಂದೆ ಕ್ರೈಸ್ಟ್ ಕಾಲೇಜಿನಲ್ಲಿ ಉಪನ್ಯಾಸಕಿಯನ್ನು ವಿವಾಹವಾಗಿದ್ದು , ಎರಡೂವರೆ ವರ್ಷದ ಹೆಣ್ಣು ಮಗುವಿತ್ತು.

ಸಂತಾಪ: ಎನ್.ಡಿ.ಶಿವಕುಮಾರ್ ಅವರ ನಿಧನಕ್ಕೆ ಬೆಳಗಾವಿ ಅಧಿವೇಶನದ ಉಭಯ ಸದನಗಳಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಸಚಿವರಾದ ಆರ್.ವಿ.ದೇಶಪಾಂಡೆ, ಮಾಜಿ ಸಚಿವ ಸುರೇಶ್‌ಕುಮಾರ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಎನ್.ಡಿ.ಶಿವಕುಮಾರ್ ಅವರ ನಿಧನಕ್ಕೆ ಬೆಂಗಳೂರು ವರದಿಗಾರರ ಕೂಟ, ಪ್ರೆಸ್‌ಕ್ಲಬ್ ಹಾಗೂ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿ ಶಿವಕುಮಾರ್ ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Write A Comment