ಕರ್ನಾಟಕ

ಮೇಲ್ಮನೆಯಲ್ಲೂ ಧರಣಿ– ಪ್ರತಿ ಧರಣಿ: ಬಿಜೆಪಿ ಸದಸ್ಯರಿಗೆ ಎಚ್ಚರಿಕೆ ನೀಡಿದ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ, ಜಯಮಾಲಾ

Pinterest LinkedIn Tumblr

pvec12-ASSEMBLY-KPN

ಸುವರ್ಣಸೌಧ (ಬೆಳಗಾವಿ): ಪ್ರಭು ಚವಾಣ್ ಪ್ರಕರಣ ಗುರುವಾರ ವಿಧಾನ ಪರಿಷತ್‌ನಲ್ಲೂ ಗದ್ದಲ ಸೃಷ್ಟಿಸಿತು. ಕಾಂಗ್ರೆಸ್‌ ಸದಸ್ಯರು ಸಭಾಪತಿಗಳ ಪೀಠದ ಮುಂದೆ ಧರಣಿ ನಡೆಸಿದರು. ಕಾಂಗ್ರೆಸ್‌ನ ಈ ಧೋರಣೆ ವಿರೋಧಿಸಿ ಬಿಜೆಪಿ ಸದಸ್ಯರೂ ಧರಣಿಗೆ ಇಳಿದರು.

‘ಕಬ್ಬು ಬೆಳೆಗಾರರ ಸಮಸ್ಯೆಯಂತಹ ಮಹತ್ವದ ವಿಷಯ ಚರ್ಚಿಸುವ ಸಂದರ್ಭದಲ್ಲಿ ಶಾಸಕರೊಬ್ಬರು ವಿಕೃತ ಭಾವನೆಯಿಂದ ಮಹಿಳೆಯೊಬ್ಬರ ಚಿತ್ರವನ್ನು ಮೊಬೈಲ್‌ನಲ್ಲಿ  ವೀಕ್ಷಿಸಿರು ವುದು ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದು ಸಭಾನಾಯಕ ಎಸ್‌.ಆರ್‌. ಪಾಟೀಲ ಆಕ್ಷೇಪಿಸಿದರು.

‘ಇದು ಮೊದಲನೇ ಘಟನೆ ಏನಲ್ಲ. ಬಿಜೆಪಿ ಸದಸ್ಯರು ಈ ಹಿಂದೆಯೂ ನೀಲಿ ಚಿತ್ರ ನೋಡಿದ್ದರು. ಇಂತಹವರನ್ನು ಮನೆಗೆ ಕಳಿಸುವುದು ಒಳ್ಳೆಯದು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಸದಸ್ಯರು ‘ಶೇಮ್.. ಶೇಮ್’ ಎಂದು ಬಿಜೆಪಿ ಸದಸ್ಯರನ್ನು ಹೀಗಳೆದರು. ಪಾಟೀಲರ ಹೇಳಿಕೆಗೆ ಪ್ರತಿಯಾಗಿ ಬಿಜೆಪಿಯ ಕೆಲವು ಸದಸ್ಯರು ಸಮರ್ಥನೆ ನೀಡಲು ಮುಂದಾದಾಗ, ಆಡಳಿತ ಪಕ್ಷದ ಸದಸ್ಯರು ಒಟ್ಟಾಗಿ ಬಿಜೆಪಿ ವಿರುದ್ಧ ಮುಗಿಬಿದ್ದರು.

‘ಹೆಣ್ಣಿನ ಅಂಗಾಂಗವನ್ನು ಝೂಮ್ ಮಾಡಿ ವೀಕ್ಷಣೆ ಮಾಡುವವರು ಶಾಸನ ಸಭೆಯಲ್ಲಿ ಇರಬೇಕೆ? ಭಾರತೀಯ ಸಂಸ್ಕೃತಿಯ ವಾರಸುದಾರರೇ ಯಾವ ಭಾರತೀಯ ಸಂಸ್ಕೃತಿ ಇದು? ಇಂತಹ ಕಾಮುಕರು ಸದನದಲ್ಲಿ ಇರಬೇಕೇ?’ ಎಂದು ಛೇಡಿಸಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಗದ್ದಲ ನಡೆಸಿದರಾದರೂ, ಕಾಂಗ್ರೆಸ್ ಸದಸ್ಯರ ಕೈಯೇ ಮೇಲಾಯಿತು.

ಬಿಜೆಪಿ ಹಿರಿಯ ನಾಯಕ ಕೆ.ಬಿ.ಶಾಣಪ್ಪ ಅವರು ಪ್ರಭು ಚವಾಣ್ ಅವರ ವರ್ತನೆಯನ್ನು ಸಮರ್ಥಿಸಲು ಯತ್ನಿಸಿದಾಗ ಮಧ್ಯ ಪ್ರವೇಶಿಸಿದ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ‘ನೀವು ಹಿರಿಯ ಸದಸ್ಯರು, ಚವಾಣ್ ಅವರನ್ನು ಕರೆದು ಛೀಮಾರಿ ಹಾಕುವುದರ ಬದಲು ಸಮರ್ಥಿಸಿಕೊಳ್ಳುತ್ತಿದ್ದೀರಿ. ಇದು ನಾಚಿಕೆಗೇಡು’ ಎಂದು ಕುಟುಕಿದರು.

ಮೊಬೈಲ್‌ ಮುಟ್ಟುಗೋಲು: ಗದ್ದಲದ ನಡುವೆ ಸಭಾಪತಿ ಡಿ.ಎಚ್. ಶಂಕರಮೂರ್ತಿ, ‘ಸದನದೊ ಳಗೆ ಮೊಬೈಲ್ ತರದಂತೆ ನಾನು ಈ ಹಿಂದೆಯೇ ಸೂಚಿಸಿದ್ದೇನೆ. ಒಂದು ವೇಳೆ ತಂದರೂ ಅದನ್ನು ಸ್ವಿಚ್ ಆಫ್ ಮಾಡಬೇಕು. ಫೋನ್ ರಿಂಗ್ ಆಗಿದ್ದು ತಿಳಿದರೆ ಮಾರ್ಷಲ್‌ಗಳನ್ನು ಕಳುಹಿಸಿ ಫೋನ್‌ಗಳನ್ನು ವಶಕ್ಕೆ ಪಡೆಯುತ್ತೇನೆ’ ಎಂದರು. ಬುಧವಾರದ ಪ್ರಕರಣವನ್ನೂ ಪ್ರಸ್ತಾಪಿಸಿದ ಅವರು, ‘ಆ ಪ್ರಕರಣ ಈ ಸದನದಲ್ಲಿ ನಡೆಯದೇ ಇರುವುದರಿಂದ ಇಲ್ಲಿ ಅದರ ಬಗ್ಗೆ ಚರ್ಚೆ ಬೇಡ’ ಎಂದರು.

ಧರಣಿ, ಪ್ರತಿ ಧರಣಿ: ಈ ಮಾತಿಗೆ ಮನ್ನಣೆ ನೀಡದ ಸಭಾ ನಾಯಕ ಪಾಟೀಲ, ‘ಈ ಘಟನೆಯಿಂದ ಜನಪ್ರ ತಿನಿಧಿಗಳು ತಲೆತಗ್ಗಿಸು ವಂತಾಗಿದೆ. ಇದನ್ನು ಖಂಡಿಸಿ ನಾವು ಧರಣಿ ನಡೆಸು ತ್ತೇವೆ’ ಎಂದು ಹೇಳುತ್ತಾ ಸದಸ್ಯ ರೊಂದಿಗೆ ಸಭಾಪತಿಗಳ ಪೀಠದ ಮುಂದೆ ಬಂದು ನಿಂತರು. ಆಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮ ಆಸನದಲ್ಲಿಯೇ ಕುಳಿತಿದ್ದರು. ‘ಆಡಳಿತ ಪಕ್ಷದ ಸದಸ್ಯರು ಧರಣಿ ಕುಳಿತಿದ್ದಾರೆ. ಅವರ ಜಾಗದಲ್ಲಿ ನಾವು ಕುಳಿತುಕೊಳ್ಳೋಣ’ ಎಂದು ಕೆಲವು ಬಿಜೆಪಿ ಸದಸ್ಯರು ಕೂಗಿದರು.

ವಿರೋಧ ಪಕ್ಷದ ನಾಯಕ ಈಶ್ವರಪ್ಪ ಮಾತನಾಡಿ, ‘ಆಡಳಿತ ಪಕ್ಷದ ಸದಸ್ಯರು ಯಾಕೆ ಧರಣಿ ನಡೆಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ನಾವೂ ಕೂಡ ಧರಣಿ ನಡೆಸುತ್ತೇವೆ’ ಎಂದು ಸಭಾಪತಿಗಳ ಪೀಠದ ಮುಂದೆ ತೆರಳಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದಾಗ ಶಂಕರಮೂರ್ತಿ ಅವರು ಕಲಾಪವನ್ನು 20 ನಿಮಿಷ ಮುಂದೂ ಡಿದರು.

ಕಲಾಪ ಮತ್ತೆ ಆರಂಭ ಗೊಂಡಾಗಲೂ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದರು. ಅವರ ಮನವೊಲಿಸಲು ಯತ್ನಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ‘ಬುಧವಾರದ್ದು ನಡೆಯಬಾರದ ಘಟನೆ. ನನ್ನ 34 ವರ್ಷದ ಅನುಭವದಲ್ಲಿ ಆಡಳಿತ ಪಕ್ಷದವರು ಸಭಾಪತಿಗಳ ಪೀಠದ ಮುಂದೆ ಧರಣಿ ನಡೆಸಿದ್ದನ್ನು ನೋಡಿರಲಿಲ್ಲ. ಕೆಳಮನೆಯಲ್ಲಿ ನಡೆದ ಘಟನೆಯನ್ನು ಇಲ್ಲಿ ಚರ್ಚಿಸುವುದು ಬೇಡ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಈ ಘಟನೆಯನ್ನು ಖಂಡಿಸಿ ಕಾಂಗ್ರೆಸ್‌ನವರು ಸದನದ ಬಾವಿಗೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ಭಾವನಾತ್ಮಕ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಭಾವಿಸಿದ್ದೇನೆ. ಮೇಲ್ಮನೆಗೆ ತನ್ನದೇ ಆದ ಘನತೆ ಇದೆ. 117 ವರ್ಷಗಳ ಇತಿಹಾಸ ಇರುವ ಪರಿಷತ್ತಿನಲ್ಲಿ ಇದುವರೆಗೆ ಇಂತಹ ಪರಿಸ್ಥಿತಿ ಸೃಷ್ಟಿಯಾಗಿರಲಿಲ್ಲ. ದಯವಿಟ್ಟು ಧರಣಿ ಕೈ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ’ ಎಂದು ಮನವಿ ಮಾಡಿದರು.

ಖಂಡನೀಯ: ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪಕ್ಷದ ಸದಸ್ಯರು ಮನನೊಂದು ಧರಣಿ ನಡೆಸಿದ್ದಾರೆಯೇ ವಿನಾ ಬೇರೆ ಉದ್ದೇಶ ಇಲ್ಲ. ಬುಧವಾರದ ಘಟನೆ ತಲೆ ತಗ್ಗಿಸುವ ವಿಚಾರ. ಮತ್ತೆ ಮರುಕಳಿ ಸಬಾರದು. ನಮ್ಮ ಚಲನವಲನಗಳನ್ನು ಎಲ್ಲರೂ ಗಮನಿಸುತ್ತಾ ಇರುತ್ತಾರೆ. ನಮ್ಮ ನಡತೆಗಳನ್ನು ನಾವೇ ನಿಯಂತ್ರಣ ಮಾಡಿಕೊಳ್ಳಬೇಕು. ರಾಜ್ಯದ ಜನತೆ, ಅದರಲ್ಲೂ ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಇಲ್ಲಿ ಅಧಿವೇಶನ ಕರೆದಿದ್ದೇವೆ. ಅದರ ಬಗ್ಗೆ ಚರ್ಚೆ ನಡೆಯಲಿ’ ಎಂದರು.

ಮೊಬೈಲ್ ತರದಂತೆ ಕ್ರಮ ಕೈಗೊಳ್ಳಿ: ‘ಸದನದ ಒಳಗೆ ಮೊಬೈಲ್ ತಂದರೆ ತಾನೆ ಈ ಸಮಸ್ಯೆ, ಮೊಬೈಲ್ ತರದಂತೆ ಕ್ರಮ ಕೈಗೊಳ್ಳಿ’ ಎಂದು ಸಭಾಪತಿಗಳಿಗೆ ಮನವಿ ಮಾಡಿದ ಅವರು, ‘ಸದಸ್ಯರೆಲ್ಲ ಧರಣಿ ಕೈ ಬಿಟ್ಟು ತಮ್ಮ ಸ್ಥಾನಗಳಿಗೆ ಹೋಗುತ್ತಾರೆ’ ಎಂದು ಹೇಳಿದರು.

ಅಂಬರೀಷ್ ರಾಜೀನಾಮೆಗೆ ಆಗ್ರಹ: ಸಮಸ್ಯೆ ಬಗೆಹರಿದು ಇನ್ನೇನು ಕಲಾಪ ನಡೆಯುತ್ತದೆ ಎನ್ನುವಷ್ಟರಲ್ಲಿ ಎದ್ದು ನಿಂತ ಈಶ್ವರಪ್ಪ, ‘ಪ್ರಭು ಚವಾಣ್ ಮೊಬೈಲ್‌ನಲ್ಲಿ ಚಿತ್ರ ನೋಡಿದ್ದು ತಪ್ಪು. ಅದನ್ನು ಖಂಡಿಸುತ್ತೇನೆ. ಆದರೆ ಸಚಿವ ಅಂಬರೀಷ್ ಕೂಡ ಬುಧವಾರ ವಿಧಾನ ಸಭೆಯಲ್ಲಿ ಮೊಬೈಲ್‌ನಲ್ಲಿ ವಿಡಿಯೊ ನೋಡಿದ್ದಾರೆ’ ಎಂದು ಹೇಳುತ್ತಿ ದ್ದಂತೆಯೇ ಮತ್ತೆ ಗದ್ದಲ ಆರಂಭ ವಾಯಿತು.

ಕಾಂಗ್ರೆಸ್‌ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಸಚಿವರಾದ ಟಿ.ಬಿ ಜಯಚಂದ್ರ, ವಿನಯಕುಮಾರ್ ಸೊರಕೆ, ಕೆಲ ಸದಸ್ಯರು ಅಂಬರೀಷ್ ಸಮರ್ಥನೆಗೆ ಮುಂದಾದರು. ಅಂಬರೀಷ್ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಧರಣಿ ಕುಳಿತರು.
ಇದರಿಂದ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸದಸ್ಯರ ಮೇಲೆ ರೇಗಾಡಿದರು. ‘ಇವರಿಗೆ ಕಲಾಪ ನಡೆಸುವುದು ಇಷ್ಟವಿಲ್ಲ.

ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯುವುದೂ ಬೇಡ. ಅದಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇದ್ದಾಗ,  ಸದನವನ್ನು ಭೋಜನ ವಿರಾ ಮದವರೆಗೆ ಸಭಾಪತಿ ಮುಂದೂಡಿದರು. ಸಂಜೆ ಮತ್ತೆ ಕಲಾಪ ಆರಂಭವಾದಾಗಲೂ ಗಲಾಟೆ ನಿಲ್ಲದ ಕಾರಣ ಶುಕ್ರವಾರಕ್ಕೆ ಮುಂದೂಡ ಲಾಯಿತು.

ಖಂಡನಾ ನಿರ್ಣಯಕ್ಕೆ ಕಾಂಗ್ರೆಸ್ ಆಗ್ರಹ
ಸುವರ್ಣಸೌಧ (ಬೆಳಗಾವಿ): ಬಿಜೆಪಿ ಶಾಸಕ ಪ್ರಭು ಚವಾಣ್ ಮೊಬೈಲ್‌ ಪ್ರಕರಣ ಖಂಡಿಸಿ ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಸುವರ್ಣಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ‘ಸದನದ ಒಳಗಡೆ ಚವಾಣ್ ಅವರು ಪ್ರಿಯಾಂಕಾ ಗಾಂಧಿ ಅವರ ಚಿತ್ರವನ್ನು ಕೆಟ್ಟ ದೃಷ್ಟಿಯಲ್ಲಿ ನೋಡಿದ ಘಟನೆ ನಾಚಿಕೆಗೇಡು. ಸಂಸ್ಕೃತಿಯನ್ನು ಬೋಧನೆ ಮಾಡುವವರು, ಸಂಸ್ಕೃತಿ ರಕ್ಷಕರು ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಬಿಜೆಪಿ ನಾಯಕರು ಇಂತಹ ಕೆಲಸ ಮಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಈ ಹಿಂದೆ ಅದೇ ಪಕ್ಷದ ಸದಸ್ಯರು ಸದನದಲ್ಲಿ ನೀಲಿ ಚಿತ್ರ ನೋಡಿ ಸಿಕ್ಕಿ ಬಿದ್ದಿದ್ದ ಪ್ರಕರಣ ಮರೆಯುವ ಮುನ್ನವೇ ಈ ಘಟನೆ ನಡೆದಿದೆ. ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಆ ಶಾಸಕರನ್ನು ಅನರ್ಹಗೊಳಿಸಬೇಕು. ಎರಡು ಸದನಗಳಲ್ಲಿ ಖಂಡನಾ ನಿರ್ಣಯ ಅಂಗೀಕರಿಸಬೇಕು’ ಎಂದು ಒತ್ತಾಯಿಸಿದರು.

ಸದನದಲ್ಲಿ ಧರಣಿ ಸಮರ್ಥನೆ:  ಇಂತಹ ಪ್ರಕರಣ ಮರುಕಳಿಸಬಾರದು. ಅನಿವಾರ್ಯವಾಗಿ ನಾವು ಸದನದಲ್ಲಿ ಧರಣಿ ಮಾಡಬೇಕಾಯಿತು’ ಎಂದರು. ವಿ.ಎಸ್. ಉಗ್ರಪ್ಪ ಮಾತನಾಡಿ, ‘ಸದನದ ಪಾವಿತ್ರ್ಯ ಹಾಳು ಮಾಡಿರುವ ಘಟನೆ ಇದು. ಮಹಿಳೆಯರ ಬಗೆಗಿನ ಬಿಜೆಪಿಯ ಮನಸ್ಥಿತಿ ಏನು ಎಂಬುದರಿಂದ ಗೊತ್ತಾಗುತ್ತದೆ’ ಎಂದು ಜರೆದರು.

Write A Comment