ಕರ್ನಾಟಕ

ಬ್ಯಾಂಕ್ ಮುಷ್ಕರ, ವಹಿವಾಟು ಸ್ಥಗಿತ

Pinterest LinkedIn Tumblr

pvec04dec14rjUFBU 01

ಬೆಂಗಳೂರು: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾ­ಯಿಸಿ, ಬ್ಯಾಂಕ್‌ ನೌಕರರ ಸಂಯುಕ್ತ ವೇದಿಕೆಯ  (ಯುಎಫ್‌ಬಿಯು) ಸದಸ್ಯರು ನಗರದಲ್ಲಿ ಮಂಗಳವಾರ ಮುಷ್ಕರ ನಡೆಸಿದರು.

ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿವಿಧ ಬ್ಯಾಂಕ್‌ಗಳ ನೌಕರರು ಭಾರ­ತೀಯ ಬ್ಯಾಂಕುಗಳ ಒಕ್ಕೂಟ (ಐಬಿಎ) ಮತ್ತು ಕೇಂದ್ರ ಸರ್ಕಾ­ರದ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ಮಾಡಿದರು.

ಮುಷ್ಕರದ ನೇತೃತ್ವ ವಹಿಸಿದ್ದ ವೇದಿಕೆ ರಾಜ್ಯ ಘಟಕದ ಜಂಟಿ ಸಂಚಾಲಕ ಎ.ಎನ್‌.­ಕೃಷ್ಣ­ಮೂರ್ತಿ ಅವರು ಮಾತ­ನಾಡಿ, ‘ವೇತನ ಪರಿಷ್ಕರಣೆ ಸಂಬಂಧ­ಪಟ್ಟಂತೆ ಐಬಿಎ ಮತ್ತು ಕೇಂದ್ರ ಸರ್ಕಾ­ರದ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಪ್ರಯೋ­ಜನ­ವಾಗಿಲ್ಲ’ ಎಂದು ದೂರಿದರು.

‘2012ರ ನವೆಂಬರ್ ನಂತರ ವೇತನ ಪರಿಷ್ಕರಣೆ ಆಗಿಲ್ಲ. ಶೇ 25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಒಕ್ಕೂಟವು ಬೇಡಿಕೆ ಇಟ್ಟಿತ್ತು.  ನಂತರ ಶೇ  23­ ರಷ್ಟಾದರೂ ಹೆಚ್ಚಳ ಮಾಡು­ವಂತೆ ಒತ್ತಾಯಿಸಲಾಗಿತ್ತು. ಆದರೆ, ಶೇ 11ರಷ್ಟು ಮಾತ್ರ ವೇತನ ಹೆಚ್ಚಳ ಮಾಡುವುದಾಗಿ ಭಾರತೀಯ ಬ್ಯಾಂಕ್‌ಗಳ ಒಕ್ಕೂಟ (ಐಬಿಎ) ಹೇಳಿದೆ’ ಎಂದು ತಿಳಿಸಿದರು.

‘ಶೇ 11ರಷ್ಟು ವೇತನ ಹೆಚ್ಚಳ ಮಾಡು­ವುದರಿಂದ ಯಾವುದೇ ಲಾಭ­ವಿಲ್ಲ.  ಹಣದುಬ್ಬರದ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಗಳು ಗಗನ­ಕ್ಕೇರಿವೆ. ಇನ್ನೊಂದೆಡೆ ಬ್ಯಾಂಕ್ ವ್ಯವಹಾ­ರ­ದಲ್ಲಿ ಹೆಚ್ಚಳ ಹಾಗೂ ಸಿಬ್ಬಂದಿ ಕೊರ­ತೆ­ಯಿಂದ ಬ್ಯಾಂಕ್ ನೌಕರರು ಒತ್ತಡ­ದಲ್ಲಿ ಕೆಲಸ ಮಾಡುವ ಪರಿಸ್ಥಿತಿಯಿದೆ. ಇಂತಹ ಪ್ರತಿಕೂಲ ಸನ್ನಿವೇಶದಲ್ಲಿಯೂ ಬ್ಯಾಂಕ್‌­ಗಳು ಲಾಭದತ್ತ ಮುಖ ಮಾಡಿ­­ರು­ವುದು ಶ್ಲಾಘನೀಯವಾಗಿದೆ’ ಎಂದರು.

ಇದೇ ವೇಳೆ ಬ್ಯಾಂಕ್‌ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಐಬಿಎ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಹಕರ ಪರದಾಟ: ‘ಬ್ಯಾಂಕ್‌ ವಹಿ­ವಾಟು ಸ್ಥಗಿತಗೊಂಡ ಕಾರಣ ಗ್ರಾಹ­ಕರು ತೊಂದರೆ ಅನುಭವಿಸ­ಬೇಕಾ­ಯಿತು. ಕೆಲವು ಗ್ರಾಹಕರು ಮುಷ್ಕರದ ಅರಿವಿಲ್ಲದೆ ಬ್ಯಾಂಕುಗಳಿಗೆ ಬಂದು ಬೀಗ ಹಾಕಿರುವುದು ನೋಡಿ ವಾಪಸ್‌ ತೆರಳಿದರು. ಹಣ ಪಡೆಯಲು ಎಟಿಎಂಗೆ ಎಂದಿ­ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ  ಜನರು ಮುತ್ತಿಕೊಂಡಿದ್ದರು.

ಚೆಕ್‌ ಕ್ಲಿಯರೆನ್ಸ್‌, ಡಿಮ್ಯಾಂಡ್‌  ಡ್ರಾಫ್ಟ್‌ (ಡಿ.ಡಿ), ಠೇವಣಿ ಸಂಗ್ರಹ, ಸಾಲ ವಿತರಣೆ, ಆರ್‌ಟಿಜಿಎಸ್‌ ಮೊದಲಾದ ಸೇವೆಗಳು ದಿನದ ಮಟ್ಟಿಗೆ ಬ್ಯಾಂಕ್‌ ಗ್ರಾಹಕರಿಗೆ ಲಭ್ಯವಿರಲಿಲ್ಲ.

ಅಖಿಲ ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಕಾರ್ಯದರ್ಶಿ ಎಲ್.ಶ್ಯಾಮ್‌ಸುಂದರ್ ಕುಲಕರ್ಣಿ ಮಾತನಾಡಿ, ‘ಬ್ಯಾಂಕ್ ನೌಕರರ ಬೇಡಿ­ಕೆ­ಗಳ ಕುರಿತು  ನ.12 ರಂದು ರಾಷ್ಟ್ರ­ಮಟ್ಟ­ದಲ್ಲಿ ಬ್ಯಾಂಕ್ ಮುಷ್ಕರ ನಡೆಸ­ಲಾಗಿತ್ತು. ಆದರೆ, ಈ ಸಂಬಂಧ ಐಬಿಎ ವೇತನ ಪರಿಷ್ಕರಣೆ ಸಂಬಂಧಪಟ್ಟಂತೆ  ಭರವಸೆ ನೀಡಿಲ್ಲ. ಆದ್ದ­ರಿಂದ, ನಮ್ಮ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸ­ಬೇಕು’ ಎಂದು ಒತ್ತಾಯಿಸಿದರು.

‘ಬ್ಯಾಂಕ್ ಮುಷ್ಕರ ಪರಿಣಾಮ ರಾಜ್ಯದಲ್ಲಿ ಅಂದಾಜು ₨ 10 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಣದ ವಹಿವಾಟು ಸ್ಥಗಿತಗೊಂಡಿದೆ’ ಎಂದರು.

‘ಡಿ.3ರಂದು ಉತ್ತರ ವಲಯ, ಡಿ. 4ರಂದು ಪೂರ್ವ ವಲಯ ಹಾಗೂ ಡಿ. 5ರಂದು ಪಶ್ಚಿಮ ವಲಯದ ಬ್ಯಾಂಕ್‌ ನೌಕರರು ಮುಷ್ಕರ ನಡೆಸಲಿದ್ದಾರೆ’  ಎಂದು ತಿಳಿಸಿದರು.

Write A Comment