ಕರ್ನಾಟಕ

ಧಾರವಾಡದಲ್ಲಿ ಲಾಕಪ್ ಡೆತ್ ; ಸಿಐಡಿ ಪೊಲೀಸರ ತನಿಖೆ

Pinterest LinkedIn Tumblr

lock-up-death

ಧಾರವಾಡ,ಡಿ.1: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು,ವರದಿಯಲ್ಲಿ ತಪ್ಪಿತಸ್ಥರೆಂಬುದು ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ತಿಳಿಸಿದ್ದಾರೆ.

ಮೂಲತಃ ಹುಬ್ಬಳ್ಳಿಯ ಅಕ್ಕಿಹೊಂಡ ನಿವಾಸಿ ಮಲ್ಲಿಕಾರ್ಜುನ ಅಡಕಿ(43) ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ನಿನ್ನೆ ತಾಲ್ಲೂಕಿನ ಯಮನೂರು ಗ್ರಾಮದಲ್ಲಿ ಚಾಂಗದೇವರ ದರ್ಶನಕ್ಕಾಗಿ ಹುಬ್ಬಳ್ಳಿಯಿಂದ ಬಂದು, ಪೂಜೆ ಸಲ್ಲಿಸಿದ ನಂತರ ಸ್ನೇಹಿತರೊಂದಿಗೆ ಜೂಜಾಡುತ್ತಿದ್ದನು. ಈ ವೇಳೆ ನವಲಗುಂದ ಪೊಲೀಸರು 9ಮಂದಿಯನ್ನು ವಶಕ್ಕೆ ಪಡೆದಿದ್ದರು. ಇವರ ಪೈಕಿ ಮಲ್ಲಿಕಾರ್ಜುನ ಅಡಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರಿಂದ ಆಕ್ರೋಶಗೊಂಡ ಈತನ ಕುಟುಂಬ ಸದಸ್ಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಪ್ರತಿಕ್ರಿಯಿಸಿ ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯನ್ನೂ ಸಹ ಪರಿಶೀಲಿಸಲಾಗುವುದಲ್ಲದೆ, ಸಿಐಡಿ ಪೊಲೀಸರು ನೀಡುವ ವರದಿಯಲ್ಲಿ ಸಾವು ಹೇಗಾಯಿತೆಂಬುದು ತಿಳಿದು ಬರಲಿದೆ. ತದನಂತರ ವರದಿ ಆಧರಿಸಿ ತಪ್ಪಿತಸ್ಥರೆಂಬುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ನಿನ್ನೆ ಸಂಜೆ ಪೊಲೀಸರ ವಶದಲ್ಲಿದ್ದ ಮಲ್ಲಿಕಾರ್ಜುನ ಅಡಕಿ ಏಕಾಏಕಿ ಸಾವನ್ನಪ್ಪಿದ್ದಾನೆಂಬ ವಿಷಯ ಕುಟುಂಬ ಸದಸ್ಯರಿಗೆ ತಿಳಿಯುತ್ತಿದ್ದಂತೆ, ಇದು ಲಾಕಪ್ ಡೆತ್ ಎಂದು ಗ್ರಾಮದಲ್ಲಿ ಹರಡಿತು. ಕುಟುಂಬ ಸದಸ್ಯರು ಶವಾಗಾರದ ಮುಂದೆ ಜಮಾಯಿಸಿ ಪೊಲೀಸರ ದೌರ್ಜನ್ಯದಿಂದಲೇ ಮಲ್ಲಿಕಾರ್ಜುನ ಮೃತಪಟ್ಟಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿ ರೋಧಿಸುತ್ತಿದುದು ಕಂಡುಬಂತು.

Write A Comment