ಕರ್ನಾಟಕ

ನಿಗಮ-ಮಂಡಳಿ ನೇಮಕಾತಿ ವಿಚಾರ : ಅಂಬರೀಶ್ ಅಂಬರೀಶ್ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

Photo Caption

ಬೆಂಗಳೂರು, ಡಿ.1: ಕಾಂಗ್ರೆಸ್‌ನಲ್ಲಿ ಬಹಳಷ್ಟು ಮಂದಿ ಹಿರಿಯರಿದ್ದಾರೆ. ಎಲ್ಲರನ್ನೂ ಕೇಳಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಸತಿ ಸಚಿವ ಅಂಬರೀಶ್ ಅವರ ಆಕ್ಷೇಪಕ್ಕೆ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ಅವರು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ನಿಗಮ ಮಂಡಳಿ ನೇಮಕಾತಿಯಲ್ಲಿ ಯಾವುದೇ ಅಸಮಾಧಾನಗಳಿಲ್ಲ. ಎಲ್ಲರೂ ಸಮಾಧಾನದಲ್ಲಿದ್ದಾರೆ ಎಂದು ಸಮರ್ಥಿಸಿಕೊಂಡರು. ವಸತಿ ಸಚಿವ ಅಂಬರೀಶ್ ತಾವು ಕೂಡ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ನಿಗಮ ಮಂಡಳಿ ನೇಮಕಾತಿಯ ವೇಳೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಪ್ರಜಾಪ್ರಭುತ್ವ ಅಲ್ಲ ಎಂದು ಕಳೆದ ಮೂರು ದಿನಗಳ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು.

ಇಂದು ಅಂಬರೀಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಎಲ್ಲರನ್ನು ಕೇಳುತ್ತಾ ಕೆಲಸ ಮಾಡಲಾಗುವುದಿಲ್ಲ. ಹೈಕಮಾಂಡ್ ನಿರ್ದೇಶನದಂತೆ ನೇಮಕಾತಿ ಮಾಡಲಾಗಿದೆ. 18 ತಿಂಗಳ ಅವಧಿಗೆ ಅಧ್ಯಕ್ಷ , ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ಪಕ್ಷದಲ್ಲಿ ಬಹಳಷ್ಟು ಹಿರಿಯ ನಾಯಕರಿದ್ದಾರೆ. ಎಲ್ಲರನ್ನು ಸಂಪರ್ಕಿಸಿದ್ದೇನೆ ಎಂದು ಹೇಳುವ ಮೂಲಕ ಅಂಬರೀಶ್‌ಗೆ ಟಾಂಗ್ ನೀಡಿದರು. ಬಹಳಷ್ಟು ಹಿರಿಯ ಸಚಿವರು ನಿಗಮ ಮಂಡಳಿ ನೇಮಕಾತಿಯಲ್ಲಿ ತಮ್ಮ ಬೆಂಬಲಿಗರಿಗೆ ಅವಕಾಶ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಇದ್ಯಾವುದನ್ನು ಕ್ಯಾರೆ ಎನ್ನದ ಮುಖ್ಯಮಂತ್ರಿಯವರು ಎಲ್ಲವೂ ಸುಸೂತ್ರವಾಗಿ ನಡೆದಿದೆ. ಎಲ್ಲರೂ ಸಮಾಧಾನದಿಂದಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದು , ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವವರನ್ನು ಮುಂದಿನ ಅವಧಿಗೆ ನೇಮಕಾತಿ ಮಾಡುವ ಭರವಸೆಯೊಂದಿಗೆ ಸಮಾಧಾನಗೊಳಿಸುತ್ತಿದ್ದಾರೆ. ಆದರೆ ಅಂಬರೀಶ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ಸಿದ್ದರಾಮಯ್ಯ ಹಿರಿಯ ನಾಯಕರುಗಳನ್ನೆಲ್ಲಾ ಕೇಳಿದ್ದೇನೆ ಎಂದು ಉತ್ತರಿಸಿದ್ದಾರೆ.

3 ದಿನದಲ್ಲಿ ನಂದಿತಾ ವರದಿ: ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತೀರ್ಥಹಳ್ಳಿಯ ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣ ಸಿಐಡಿ ತನಿಖೆ ನಡೆದಿದ್ದು, ಇನ್ನೆರಡು ಮೂರು ದಿನದಲ್ಲಿ ವರದಿ ಸರ್ಕಾರದ ಕೈ ಸೇರಲಿದೆ. ಆನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಡಿಸೆಂಬರ್ 15ರಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಗೊಳ್ಳಲಿವೆ ಎಂದು ತಿಳಿಸಿದರು. ಪಶ್ಚಿಮ ಘಟ್ಟ ಸಂರಕ್ಷಿತ ಅರಣ್ಯ ಪ್ರದೇಶ ಕುರಿತು ಡಾ.ಕಸ್ತೂರಿ ರಂಗನ್ ಅವರ ವರದಿಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಅನುಷ್ಠಾನದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅನಗತ್ಯವಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.

ಬಿಜೆಪಿಯನ್ನು ಎದುರಿಸುತ್ತೇವೆ: ಬೆಳಗಾವಿ ವಿಧಾನಮಂಡಲದ ಸಂದರ್ಭದಲ್ಲಿ ಬಿಜೆಪಿ ವಿವಿಧ ವಿಷಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲು ಮುಂದಾಗಿದೆ. ರಾಜಕೀಯ ಕಾರಣಕ್ಕಾಗಿ ಅವರು ಪ್ರತಿಭಟನೆ ಮಾಡುವುದನ್ನು ಸರ್ಕಾರ ಸಮರ್ಥವಾಗಿ ಎದುರಿಸಲಿದೆ ಎಂದು ಅವರು ಹೇಳಿದರು.

Write A Comment