ಕರ್ನಾಟಕ

ಮಕ್ಕಳಿಬ್ಬರ ಹತ್ಯಾ ಪ್ರಕರಣಕ್ಕೆ ಹೊಸ ತಿರುವು: ಹತ್ಯೆ ಮಾಡಿ ನಾಟಕವಾಡಿ ಸಿಕ್ಕಿಬಿದ್ದ ಮಹಾತಾಯಿ

Pinterest LinkedIn Tumblr

murder22

ಚಿತ್ರದುರ್ಗ, ನ.30: ಕಳೆದ ಮೂರು ದಿನಗಳ ಹಿಂದೆ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕುಂತಿ ಗ್ರಾಮದಲ್ಲಿ ನಡೆದಿದ್ದ ಇಬ್ಬರು ಸಹೋದರರ ಭೀಕರ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಬಾಲಕರ ತಾಯಿಯೇ ವಿಲನ್ ಆಗಿದ್ದಾಳೆ.

ಚಿಕ್ಕುಂತಿ ಗ್ರಾಮದ ಚಂದ್ರಪ್ಪ ಅವರ ಪತ್ನಿ ಕರಿಬಸಮ್ಮನನ್ನು ಬಂಧಿಸಿರುವ ಮೊಳಕಾಲ್ಮೂರು ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಮಲಗಿದ್ದಲ್ಲೇ ಚಂದ್ರಪ್ಪನ ಮಕ್ಕಳಾದ ನಾಗಮೂರ್ತಿ (12) ಹಾಗೂ ತಿಪ್ಪೇಶ್(10) ನನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ಪೊಲೀಸರು ತನಿಖೆ ಪ್ರಾರಂಭಿಸಿ ಗ್ರಾಮಸ್ಥರ ಹೇಳಿಕೆ ಹಾಗೂ ಕೆಲ ಮಾಹಿತಿ ಆಧರಿಸಿ ಚಂದ್ರಪ್ಪನ ತಮ್ಮ ಪಾಪಣ್ಣನನ್ನು ಅನುಮಾನದಿಂದ ವಶಕ್ಕೆ ಪಡೆದು ನಿನ್ನೆವರೆಗು ವಿಚಾರಣೆ ನಡೆಸಿದ್ದರು.

ವಿಚಾರಣೆ ಹಾಗೂ ತನಿಖೆ ವೇಳೆ ಪಾಪಣ್ಣ ನಿರಪರಾಧಿ ಎಂದು ಗೊತ್ತಾಗಿ ಆತನನ್ನು ಬಿಡುಗಡೆಗೊಳಿಸಲಾಗಿದೆ. ನಿನ್ನೆ ಸಂಜೆ ಕರಿಬಸಮ್ಮನ ವಿಚಿತ್ರ ನಡವಳಿಕೆಯಿಂದ ಅನುಮಾನಗೊಂಡು ಮೊಳಕಾಲ್ಮೂರು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು.

ಪತಿ ಚಂದ್ರಪ್ಪ ಹಾಗೂ ಮಕ್ಕಳಾದ ನಾಗಮೂರ್ತಿ ಮತ್ತು ತಿಪ್ಪೇಶ್ ನನ್ನ ನಡತೆ ಬಗ್ಗೆ ಅನುಮಾನಪಡುತ್ತಿದ್ದರು. ಏನೇನೋ ಹೇಳಿ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿ ಬಯ್ಯುತ್ತಿದ್ದರು. ಇದರಿಂದ ಬೇಸರವಾಗಿತ್ತು. ಹಾಗಾಗಿ ಮೊದಲು ಮಕ್ಕಳನ್ನು ಕೊಂದು ನಂತರ ನಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ ಎಂದು ಕರಿಬಸಮ್ಮ ಪೊಲೀಸರಿಗೆ ತಿಳಿಸಿದ್ದಾಳೆ. ಮಕ್ಕಳನ್ನು ಹತ್ಯೆ ಮಾಡಿದಾಗ ಪತಿಯ ತಂಗಿಯ ಮಗನಿಗೆ ಎಚ್ಚರವಾಗಿ ಕೂಗಿಕೊಂಡಿದ್ದ. ಅಷ್ಟರಲ್ಲಿ ಜನ ಬಂದುಬಿಟ್ಟರು ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶವಾಗಲಿಲ್ಲ ಎಂದು ಹೇಳಿದ್ದಾಳೆ. ಪೊಲೀಸರು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Write A Comment