ಕನಕಪುರ/ರಾಮನಗರ: ಅರಣ್ಯ ಅಧಿಕಾರಿಗಳ ತಂಡಕ್ಕೆ ಸಿಕ್ಕಿಬಿದ್ದ ಬೇಟೆಗಾರರು ತಪ್ಪಿಸಿಕೊಳ್ಳಲು ಅರಣ್ಯಾಧಿಕಾರಿಗಳ ಮೇಲೆಯೇ ನಾಡ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಚೀಲಂದವಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.
ಈ ಘಟನೆಯಲ್ಲಿ ಕಾವೇರಿ ವನ್ಯ ಜೀವಿ ವಲಯದ ಅರಣ್ಯ ಕಾವಲುಗಾರ ಸಿದ್ದರಾಜು ನಾಯಕ್ (22) ಎಂಬುವರಿಗೆ ಗಾಯವಾಗಿದೆ. ಅವರ ತೊಡೆ ಹಾಗೂ ದೇಹದ ಇತರ ಭಾಗಕ್ಕೆ ಗುಂಡುಗಳು ತಾಗಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ಸಾಗಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದರಾಜು ದೇಹದಿಂದ ಮೂರು ಗುಂಡುಗಳನ್ನು ಹೊರತೆಗೆಯಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳ ಪರೀಕ್ಷೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಘಟನೆಯ ವಿವರ: ಚೀಲಂದವಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ತಂಡ ಕಾಡು ಪ್ರಾಣಿಗಳನ್ನು ಬೇಟೆಯಾಡಲು ನಾಡ ಬಂದೂಕುಗಳನ್ನು ಹಿಡಿದು ಸಂಚರಿಸುತ್ತಿದ್ದ ದೃಶ್ಯಗಳನ್ನು ಕಾವೇರಿ ವನ್ಯಜೀವಿ ವಲಯದಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು ಸೆರೆ ಹಿಡಿದಿದ್ದವು. ಇದರ ಆಧಾರದ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಹೆಚ್ಚಿನ ಗಸ್ತು ಏರ್ಪಡಿಸಲಾಗಿತ್ತು.
ಹೀಗೆ ಗಸ್ತು ಸುತ್ತುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ರವಿ ನೇತೃತ್ವದ ತಂಡವು ಶನಿವಾರ ಮುಂಜಾನೆ 3.30ರಿಂದ 4 ಗಂಟೆ ವೇಳೆಯಲ್ಲಿ ಬೇಟೆಗಾರರ ತಂಡವನ್ನು ಗುರುತಿಸಿದೆ. ಈ ವೇಳೆ ಪೊದೆಯಲ್ಲಿ ಅಡಗಿ ಕುಳಿತ ಅರಣ್ಯ ಸಿಬ್ಬಂದಿಯೊಬ್ಬರು ಒಬ್ಬ ಬೇಟೆಗಾರನನ್ನು ಸೆರೆ ಹಿಡಿದಿದ್ದಾರೆ. ಆ ಕೂಡಲೇ ಮತ್ತೊಬ್ಬ ಬೇಟೆಗಾರ ನಾಡ ಬಂದೂಕಿನಿಂದ ಸಿಬ್ಬಂದಿ ಕಡೆಗೆ ಗುಂಡು ಹಾರಿಸಿದ್ದಾನೆ. ಅರಣ್ಯ ಸಿಬ್ಬಂದಿ ನೋವಿನಿಂದ ಚೀರಿಕೊಂಡಾಗ ಸೆರೆ ಸಿಕ್ಕಿದ್ದ ಬೇಟೆಗಾರ ಸೇರಿದಂತೆ ಎಲ್ಲ ಬೇಟೆಗಾರರು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಎರಡು ನಾಡ ಬಂದೂಕು, ಒಂದು ಮೊಬೈಲ್ ಪತ್ತೆಯಾಗಿದೆ.