ಕರ್ನಾಟಕ

ಕಿಸ್ ಆಫ್ ಲವ್‌’ ಆಚರಣೆ ಬದಲಿಗೆ ಪ್ರತಿಭಟನೆ: ನೈತಿಕ ಪೊಲೀಸ್ ಗಿರಿ ವಿರೋಧ: ನ. 30ರಂದು ಕೆಲ ಸಂಘ ಸಂಸ್ಥೆಗಳಿಂದ ಪ್ರತಿಭಟನೆ

Pinterest LinkedIn Tumblr

kiss-of-love

ಬೆಂಗಳೂರು: ನೈತಿಕ ಪೊಲೀಸ್ ಗಿರಿ ವಿರೋಧಿಸಿ ನಗರದ ಟೌನ್‌ಹಾಲ್ ಬಳಿ ಹಮ್ಮಿಕೊಂಡಿದ್ದ ಕಿಸ್‌ ಆಫ್‌ ಲವ್ ಆಚರಣೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು ಇದೀಗ ಕೆಲವು ಸ್ವಯಂ ಸೇವಕ ಸಂಘಟನೆಗಳು ನ.30ರಂದು ಆಚರಣೆಯ ಬದಲಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿವೆ.

ಕಿಸ್‌ಆಫ್‌ಲವ್ ಆಚರಣೆಯ ಸಂಘಟನೆಕಾರರಾಗಿದ್ದ ರಚಿತಾ ತನೇಜಾ ಅವರಿಗೆ ಹಲವು ಜೀವ ಬೆದರಿಕೆ ಕರೆಬಂದಿದ್ದು, ಕಿಸ್ ಆಫ್ ಲವ್ ಆಚರಣೆಯಿಂದ ಹಿಂದೆ ಸರಿದಿದ್ದರು. ಆದರೆ ಇದೀಗ ಕೆಲವು ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ಕಿಸ್‌ಆಫ್‌ಲವ್ ಆಚರಣೆ ಕುರಿತಂತೆ ಬೆಂಬಲ ಸೂಚಿಸಿದ್ದವು. ಆದರೆ ಆಚರಣೆಗೆ ಅನುಮತಿ ಸಿಗದ ಕಾರಣ ನೈತಿಕ ಪೊಲೀಸ್ ಗಿರಿಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ.

ಬೆಂಗಳೂರು ಪೊಲೀಸರು ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನಿಕ ಹಕ್ಕುಗಳಿಗೆ ಗೌರವ ನೀಡಬೇಕಿದೆ. ಅಂತರಾಷ್ಟ್ರೀಯ ಮಾನದಂಡಗಳ ಅಡಿಯ ಪ್ರಕಾರ ಶಾಂತಿಯುತ ಸಭೆಗಳ ಕುರಿತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಇದೆಯೇ ಹೊರತು, ಅಧಿಕೃತ ಅನುಮತಿ ಪಡೆಯಲೇ ಬೇಕು ಎಂದೇನು ಇಲ್ಲ ಎಂದು ಪ್ರತಿಭಟನೆ ಹಮ್ಮಿಕೊಂಡಿರುವ ವಿಜಯನ್ ಹೇಳಿದ್ದಾರೆ.

ಅಲ್ಲದೇ ಪ್ರತಿಭಟನೆಗೆ ಸುಮಾರು 500 ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಭಾನುವಾರ ಸಂಜೆ 4 ರಿಂದ 5ಗಂಟೆಯವರೆಗೆ ಈ ಪ್ರತಿಭಟನೆ ನಡೆಯಲಿದೆ. ಪರಸ್ಪರ ಚುಂಬಿಸಿ ನೈತಿಕ ಪೊಲೀಸ್‌ಗಿರಿ ಖಂಡಿಸುವಂತೆ ಎಲ್ಲಿಯೂ ಸೂಚಿಸಿಲ್ಲ ಆದರೆ ಪ್ರತಿಭಟನೆ ವೇಳೆ ಅವರೇ ಸ್ವಯಂ ಪ್ರೇರಿತವಾಗಿ ಚುಂಬಿಸಿಕೊಂಡರೆ ತಡೆಯುವುದಿಲ್ಲ ಎಂದು ವಿಜಯನ್ ಹೇಳಿದ್ದಾರೆ.

ನೈತಿಕ ಪೊಲೀಸ್ ಗಿರಿ ವಿರೋಧಿಸಿ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದ್ದ ಕೆಲವು ಸ್ವಯಂ ಸೇವಕ ಸಂಘಟನೆಗಳು ಪ್ರತಿಭಟನೆ ಕುರಿತು ಈಗಾಗಲೇ ಪೂರ್ವ ತಯಾರಿ ನಡೆಸಿದ್ದು, ಪೊಲೀಸರ ಅನುಮತಿ ಇಲ್ಲದೆಯೇ ಇದೇ ಭಾನುವಾರದಂದು  ಟೌನ್‌ಹಾಲ್‌ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸಿ ಆರಂಭವಾದ ಪ್ರತಿಭಟನೆಯಿದು. ಕೇರಳದ ಕಲ್ಲಿಕೋಟೆಯ ಡೌನ್‌ಟೌನ್ ಕೆಫೆಯಲ್ಲಿ ಯುವ ಜೋಡಿಗಳು ಪರಸ್ಪರ ಮುತ್ತಿಕ್ಕುವ, ಅಪ್ಪಿಕೊಳ್ಳುವಂತಹ ದೃಶ್ಯಗಳನ್ನು ಚಾನೆಲ್‌ವೊಂದು ಪ್ರಸಾರ ಮಾಡಿತ್ತು. ಇದರ ಬೆನ್ನೆಲ್ಲೇ ಆ ಕೆಫೆ ಮೇಲೆ ದಾಳಿ ನಡೆಸಿದ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಇಡೀ ಕೆಫೆಯಲ್ಲಿ ದಾಂದಲೆ ಎಬ್ಬಿಸಿದರು.

ಕೇರಳದಲ್ಲಿ ನೈತಿಕ ಪೊಲೀಸರ ಅಟ್ಟಹಾಸದಿಂದ ರೋಸಿ ಹೋಗಿದ್ದ ಕೆಲವರು ಸಾರ್ವಜನಿಕವಾಗಿ ಪ್ರೀತಿಪಾತ್ರರಿಗೆ ಮುತ್ತಿಕ್ಕುವ ಮೂಲಕ ನೈತಿಕ ಪೊಲೀಸ್‌ಗಿರಿಯನ್ನು ಖಂಡಿಸಲು ನಿರ್ಧರಿಸಿದರು. ನಂತರ ದೇಶಾದ್ಯಂತ ವಿವಿಧ ನಗರಗಳಿಗೆ ಇದು ವ್ಯಾಪಿಸಿತು.

ಸಮಾನಮನಸ್ಕರೆಲ್ಲ ಒಂದೆಡೆ ಸೇರಿ ಸಾರ್ವಜನಿಕವಾಗಿ ಪರಸ್ಪರ ಚುಂಬಿಸುವ ಹಾಗೂ ಆಲಿಂಗಿಸುವ ಮೂಲಕ ನೈತಿಕ ಪೊಲೀಸರ ದಾಳಿಯನ್ನು ಖಂಡಿಸುವುದು ಇದರ ಉದ್ದೇಶ. ಕೊಚ್ಚಿಯ ಮೆರೈನ್‌ಡ್ರೈವ್ ಬೀಚಿನಲ್ಲಿ ಮೊದಲ ಬಾರಿ ನ.2ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಆದರೆ ಅನೇಕ ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳು ಇದನ್ನು ವಿರೋಧಿಸಿದ್ದರಿಂದ ಈ ಪ್ರತಿಭಟನೆ ಯಶಸ್ವಿಯಾಗಲಿಲ್ಲ.

Write A Comment