ಕರ್ನಾಟಕ

ನಾಲ್ಕನೇ ಮಹಡಿಯಿಂದ ಜಿಗಿದ ಟೆಕ್ಕಿ:ಎರಡು ತಾಸು ಮನವೊಲಿಕೆ ಯತ್ನ ವಿಫಲ

Pinterest LinkedIn Tumblr

pvec28Jump

ಬೆಂಗಳೂರು:  ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಸಾಫ್ಟ್‌ವೇರ್ ಉದ್ಯೋಗಿ ರಾಜೇಶ್ ಚೌಧರಿ (28) ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸೂರು ರಸ್ತೆಯ ಸಿಂಗಸಂದ್ರದಲ್ಲಿ ಗುರುವಾರ ನಡೆದಿದೆ.

ಇದಕ್ಕೂ ಮುನ್ನ ಕಟ್ಟಡದಿಂದ ಕೆಳಗಿಳಿ­ಯುವಂತೆ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ತಾಸುಗಳ ಕಾಲ ಮನವೊಲಿಸಲು ಯತ್ನಿಸಿದರು. ಆದರೆ, ಅವರ ಮಾತಿಗೆ ಕಿವಿಗೊಡದ ರಾಜೇಶ್, ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು.

ಉತ್ತರಪ್ರದೇಶ ಮೂಲದ ರಾಜೇಶ್, ಒಂದೂವರೆ ವರ್ಷ ಹಿಂದೆ ನಗರಕ್ಕೆ ಬಂದಿದ್ದರು. ಬಾಣಸವಾಡಿಯ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಉದ್ಯೋ­ಗಿಯಾಗಿದ್ದ ಅವರು, ರಾಮಮೂರ್ತಿ­ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು.

ಕೆಲ ದಿನಗಳಿಂದ ಖಿನ್ನತೆಗೆ ಒಳ­ಗಾಗಿದ್ದ ರಾಜೇಶ್, ಮಾನಸಿಕ ಅಸ್ವಸ್ಥ­ರಂತೆ ವರ್ತಿಸುತ್ತಿದ್ದರು. ಹೀಗಾಗಿ ಪೋಷ­ಕರು ಚಿಕಿತ್ಸೆ ಕೂಡ ಕೊಡಿಸಿದ್ದರು. ಬೆಳಿಗ್ಗೆ 7.30ರ ಸುಮಾರಿಗೆ ಕೂಡ್ಲುಗೇಟ್‌ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ರಾಜೇಶ್, ಬಂಧುಗಳ ಜತೆ ವಿನಾ ಕಾರಣ ಜಗಳ ಆರಂಭಿಸಿದ್ದರು. ಆಗ ಸಂಬಂಧಿಕರು, ‘ವಿಚಿತ್ರವಾಗಿ ವರ್ತಿಸಿದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ’ ಎಂದು ಬೆದರಿಸಿದ್ದರು. ಇದರಿಂದ ಕೋಪ­ಗೊಂಡ ರಾಜೇಶ್, ‘ನಾನು ಲಾರಿಯ ಚಕ್ರಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿ­ಕೊಳ್ಳು­ತ್ತೇನೆ’ ಎಂದು ಹೇಳಿ ಮನೆಯಿಂದ ಹೊರ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಸಿಂಗಸಂದ್ರದಲ್ಲಿ ಪ್ರಸಾದ್ ಎಂಬುವರು ಐದು ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿದ್ದಾರೆ. ರಾಜೇಶ್ ಅವರು ಎಂಟು ಗಂಟೆ ಸುಮಾರಿಗೆ ಆ ಕಟ್ಟಡ­­ವನ್ನು ಹತ್ತಿದ್ದರು. ನಾಲ್ಕನೇ ಮಹಡಿಯ ಅಂಚಿನಲ್ಲಿ ನಿಂತು, ‘ನಾನು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ’ ಎಂದು ಕೂಗುತ್ತಿದ್ದರು. ಇದರಿಂದ ಗಾಬರಿಗೊಂಡ ಸ್ಥಳೀಯರು, ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸನ್ನು ಸ್ಥಳಕ್ಕೆ ಕರೆಸಿಕೊಂಡರು. ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ಆರಂಭಿಸಲು ಮುಂದಾ­ದರು. ಆಗ, ‘ಯಾರಾದರೂ ಕಟ್ಟಡ ಏರಲು ಪ್ರಯ ತ್ನಿಸಿದರೆ ಅಥವಾ ರಕ್ಷಣೆಗೆ ಕ್ರಮ ಕೈಗೊಂಡರೆ ಕೆಳಗೆ ಜಿಗಿದು ಬಿಡುತ್ತೇನೆ’ ಎಂದು ರಾಜೇಶ್ ಬೆದರಿಸಿದರು.

‘ರಾಜೇಶ್ ವರ್ತನೆಯಿಂದ ದಿಕ್ಕು ತೋಚದಂತಾಯಿತು. 9.30ರ ಸುಮಾ­ರಿಗೆ ಇಬ್ಬರು ಸಿಬ್ಬಂದಿ, ಅವರಿಗೆ ಕಾಣ­ದಂತೆ ಹಿಂಭಾಗದಿಂದ ಕಟ್ಟಡ ಏರು­ತ್ತಿದ್ದರು. ಅಷ್ಟರಲ್ಲಿ ಅವರು ಕೆಳಗೆ ಜಿಗಿದು ಬಿಟ್ಟರು. ಗಾಯಾಳುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆ­ದೊಯ್ಯ­ಲಾಯಿತು. ಆದರೆ, ಅವರು ಮಾರ್ಗಮಧ್ಯೆಯೇ ಕೊನೆಯು­ಸಿರೆಳೆದರು’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

‘ಮಗ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಇದೇ ಕಾರಣದಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು. ಈ ಸಂಬಂಧ ಯಾರ ಮೇಲೂ ಅನು­ಮಾನ­ವಿಲ್ಲ’ ಎಂದು ಮೃತರ ಪೋಷಕರು ಹೇಳಿಕೆ ಕೊಟ್ಟಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮಾಹಿತಿ ನೀಡಿದರು.

Write A Comment