ಬೆಂಗಳೂರು: ಸುವರ್ಣ ಸಂಭ್ರಮದಲ್ಲಿರುವ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ‘ಜೀವಮಾನ ಶ್ರೇಷ್ಠ ಸಾಧನೆ’ಗಾಗಿ ಆರು ಮಂದಿ ಹಿರಿಯ ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಕಲಾವಿದರನ್ನು ಸನ್ಮಾನಿಸಿದರು. ‘ಜೀವಮಾನ ಶ್ರೇಷ್ಠ ಸಾಧನೆ’ ಪ್ರಶಸ್ತಿ ಪುರಸ್ಕೃತರಿಗೆ ₨ 10 ಸಾವಿರ ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಯಿತು.
ಅಕಾಡೆಮಿಯು ಇತ್ತೀಚೆಗೆ ಆಯೋಜಿಸಿದ್ದ 43ನೇ ವಾರ್ಷಿಕ ಕಲಾ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ವಿಜೇತರಾದ 10 ಮಂದಿ ಯುವ ಕಲಾವಿದರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅವರಿಗೆ ₨ 5 ಸಾವಿರ ಬಹುಮಾನ ಹಾಗೂ ಫಲಕ ನೀಡಲಾಯಿತು.
ಇದೇ ಸಂದರ್ಭದಲ್ಲಿ ಅಕಾಡೆಮಿಯ ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆಗೊಳಿಸಲಾಯಿತು. ಬಳಿಕ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಂ.ಎಸ್.ಮೂರ್ತಿ ಅವರು, ‘50ನೇ ವರ್ಷಾಚರಣೆ ಕಾರಣ ಅಕಾಡೆಮಿ ವತಿಯಿಂದ ಮೂರು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.
ಪ್ರಶಸ್ತಿ ಪುರಸ್ಕೃತರು (ಜೀವಮಾನ ಶ್ರೇಷ್ಠ ಸಾಧನೆ): ಬೆಳಗಾವಿಯ ಚಂದ್ರಕಾಂತ ಕುಸನೂರ, ಬೆಂಗಳೂರಿನ ಡಾ.ಬಿ.ಕೆ.ಎಸ್.ವರ್ಮ, ಶಿವಮೊಗ್ಗದ ಲಕ್ಷ್ಮಿ ರಾಮಪ್ಪ (2013ನೇ ಸಾಲು) ಬೀದರ್‌ನ ಚಂದ್ರಶೇಖರ ಸೋಮಶೆಟ್ಟಿ, ಮೈಸೂರಿನ ಬಸವರಾಜ ಮುಸಾವಳಗಿ ಹಾಗೂ ವಿಜಯಪುರದ ಕೆ.ಗಂಗಾಧರ್ (2014ನೇ ಸಾಲು).
43ನೇ ವಾರ್ಷಿಕ ಕಲಾ ಬಹುಮಾನಿತರು: ಕಲಬುರ್ಗಿಯ ಎಸ್.ಎಚ್. ಮಶಾಳ್ಕರ್, ಅಶೋಕ್ ಜಿ.ನೆಲ್ಲಗಿ, ಎಸ್.ಎಸ್.ಮರಗೋಳ್, ಬೆಂಗಳೂರಿನ ಕೆ.ಎಸ್.ರಂಗನಾಥ್, ಜೆ.ದುಂಡರಾಜ, ಎನ್.ಕಾಂತರಾಜ್, ದಕ್ಷಿಣ ಕನ್ನಡದ ಆನಂದ ಬೆದ್ರಾಳ, ರಾಯಚೂರಿನ ದೇವೇಂದ್ರ ಹುಡಾ, ಮೈಸೂರಿನ ಎನ್.ಪರಮೇಶ್ವರ ಹಾಗೂ ಉತ್ತರ ಕನ್ನಡದ ವಿಶ್ವೇಶ್ವರ ಎಂ.ಪಟಗಾರ.
ಕಲಾವಿದರ ಅಸಮಾಧಾನ: ‘ಕಲಾವಿದರು ಕಲಾ ಸಂಸ್ಕೃತಿಶ್ರೀಮಂತಗೊಳಿಸುತ್ತಿದ್ದಾರೆ ಎಂದು ಭಾಷಣ ಮಾಡುತ್ತಾರೆ. ಆದರೆ, ಕಲಾವಿದರು ಮಾತ್ರ ಬಡವರಾಗಿಯೇ ಇರುತ್ತಾರೆ. ನೀವು ಕೊಡುವ ₨10ಸಾವಿರ ಬಹುಮಾನ ಮೊತ್ತ ಯಾವುದಕ್ಕೂ ಸಾಲುವುದಿಲ್ಲ’ ಎಂದು ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಪಡೆದ ಬೆಳಗಾವಿಯ ಚಂದ್ರಕಾಂತ ಕುಸನೂರು ಬೇಸರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಅಕಾಡೆಮಿ ಅಧ್ಯಕ್ಷ ಎಂ.ಎಸ್.ಮೂರ್ತಿ, ‘ನಮಗೂ ಮುಜುಗರವಾಗಿದೆ. ₨ 5 ಸಾವಿರ ಬಹುಮಾನ ಮೊತ್ತವನ್ನು ₨ 25ಸಾವಿರಕ್ಕೂ, ₨10 ಸಾವಿರವನ್ನು ₨ 75 ಸಾವಿರಕ್ಕೂ ಹೆಚ್ಚಿಸಲು ಸಚಿವೆ ಉಮಾಶ್ರೀ ಅವರ ಅನುಮತಿ ಲಭಿಸಿದೆ. ತಾಂತ್ರಿಕ ಅಡಚಣೆಯಿಂದ ಈ ಬಾರಿ ನೀಡಲು ಸಾಧ್ಯವಾಗಿಲ್ಲ’ ಎಂದರು.
ಉಮಾಶ್ರೀಗೆ ಧಿಕ್ಕಾರ
ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಸಾಹಿತಿಗಳ ಕಲಾವಿದರ ಒಕ್ಕೂಟದಿಂದ ಉಮಾಶ್ರೀ ವಿರುದ್ಧ ಧಿಕ್ಕಾರ ಇರುವ ಕರಪತ್ರ ಹಂಚಲಾಯಿತು. ಉಮಾಶ್ರೀ ಅವರಿಗೂ ಈ ಕರಪತ್ರ ಲಭಿಸಿತು. ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಸಚಿವರು ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪ ಅದರಲ್ಲಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಉತ್ತಮ ಕೆಲಸದಲ್ಲಿ ತೊಡಗಿರುವ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತಿದೆ. ದುರುಪಯೋಗಪಡಿಸಿಕೊಳ್ಳುವ ಸಂಸ್ಥೆಗಳಿಗೆ ಅನುದಾನ ನೀಡುವುದಿಲ್ಲ’ ಎಂದರು.