ಕರ್ನಾಟಕ

ಹಿಡಿದ ನರಭಕ್ಷಕ ಹುಲಿ ಕಾಡಿಗೆ ಬಿಡಬಾರದಿತ್ತು: ಹಿರಿಯ ವನ್ಯಜೀವಿ ತಜ್ಞ ಉಲ್ಲಾಸ್‌ ಕಾರಂತ

Pinterest LinkedIn Tumblr

HULI

ಬೆಂಗಳೂರು: ‘ಮುಳ್ಳಯ್ಯನಗಿರಿ ಶ್ರೇಣಿಯ ಪಂಡ­ರವಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಸೆರೆ­ಸಿಕ್ಕಿದ್ದ ‘ನರ ಹಂತಕ’ ಹುಲಿ ಮತ್ತೆ ಮನುಷ್ಯರನ್ನು ಕೊಲ್ಲುವ ಸಾಧ್ಯತೆ ಇರು­ವು­ದರಿಂದ ಅದನ್ನು ಬಂಧಮುಕ್ತ ಮಾಡ­ಬಾರ­ದಿತ್ತು’ ಎಂದು ಹಿರಿಯ ವನ್ಯಜೀವಿ ತಜ್ಞ ಉಲ್ಲಾಸ್‌ ಕಾರಂತ ಅಭಿಪ್ರಾಯ­ಪಟ್ಟಿದ್ದಾರೆ.

‘ಮಹಿಳೆಯನ್ನು ಕೊಂದ ಆ ಹುಲಿ­ಯನ್ನು ಸೆರೆ ಹಿಡಿದಿದ್ದು ಒಳ್ಳೆಯ ಕೆಲಸ­ವಾಗಿತ್ತು. ಅದನ್ನು ಬಂಧನದಲ್ಲೇ ಇರಿಸ­ಬೇ­ಕಿತ್ತು. ಚಿಕ್ಕಪ್ರಾಯದ ಆ ಹುಲಿ ಬಂಧ­ನದ ವ್ಯವಸ್ಥೆಗೆ ಹೊಂದಿ­ಕೊಳ್ಳು­ವುದು ಏನೂ ಕಷ್ಟವಾಗಿರಲಿಲ್ಲ’ ಎಂದು ಹೇಳಿದ್ದಾರೆ.

‘ರೇಡಿಯೊ ಕಾಲರ್‌ ಅಳವಡಿಸಿ ಅದನ್ನು ಕಾಡಿನಲ್ಲಿ ಬಿಡಬಹುದಿತ್ತು ಎಂಬ ಸಲಹೆ ಕೂಡ ಒಳ್ಳೆಯದಲ್ಲ ಎನ್ನು­ವುದು ನನ್ನ ಬಲವಾದ ನಂಬಿಕೆ. ಏಕೆಂದರೆ, ಅದನ್ನು ಮತ್ತೆ ಸೆರೆ ಹಿಡಿಯು­ವುದು ಮುಂಚಿನಷ್ಟು ಸುಲಭದ ಕೆಲಸ­ವಲ್ಲ. ಈಗಾಗಲೇ ಸೆರೆ ಸಿಕ್ಕು ತಾನು ಅನು­ಭವಿಸಿರುವ ಆಘಾತದ ಪರಿಣಾಮ ಅದು ಮತ್ತಷ್ಟು ಜಾಗೃತ ವಾಗಿ ವ್ಯವಹರಿಸು­ತ್ತದೆ’ ಎಂದು ವಿವರಿಸಿದ್ದಾರೆ.

‘ಹುಲಿ ಒಂದುವೇಳೆ ನರಭಕ್ಷಕನಾಗಿ ಬದ ಲಾಗಿದ್ದರೆ ಅದನ್ನು ಹಿಡಿಯುವುದು ಮತ್ತಷ್ಟು ಕಷ್ಟದ ಕೆಲಸ. ಅಲ್ಲದೆ, ಈ ಚಿಕ್ಕಪ್ರಾಯದಲ್ಲಿ ಅದು 200ರಿಂದ 300 ಕಿ.ಮೀ. ದೂರ ಓಡಾಡುವ ಸಾಮರ್ಥ್ಯವನ್ನೂ ಹೊಂದಿರುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಭದ್ರಾ ಅರಣ್ಯದಲ್ಲಿ ನಾವು ಎರಡೂ­ವರೆ ವರ್ಷದ ಹಿಂದೆ ಒಂದು ಹೆಣ್ಣು ಹುಲಿಯ ಚಿತ್ರವನ್ನು ಸೆರೆ ಹಿಡಿದಿದ್ದೆವು. ಅದನ್ನು ಬಿಡಿಟಿ–ಎಲ್‌115 ಎಂದು ಗುರು­ತಿ­ಸಲಾಗಿತ್ತು. ಕಾಫಿ ಎಸ್ಟೇಟ್‌ನ ಕುರುಚಲು ಕಾಡಿನಿಂದ ಭದ್ರಾ ಅಭಯಾ­ರಣ್ಯದವರೆಗೆ ಆ ಹುಲಿ ಓಡಾಡಿದ ಹೆಜ್ಜೆ ಗುರುತುಗಳಿವೆ. ಏಪ್ರಿಲ್‌ 2012ರಿಂದ ಸೆಪ್ಟೆಂಬರ್‌ 2014ರ ವರೆಗಿನ ದತ್ತಾಂಶ­ಗಳು ಕೂಡ ಲಭ್ಯವಿವೆ. ಅದಕ್ಕೆ ಎರಡು ಮರಿಗಳಿವೆ. ಎಸ್ಟೇಟ್‌ನಲ್ಲಿ ಮಹಿಳೆಯನ್ನು ಕೊಂದ ಹುಲಿ ಆ ಮರಿಗಳಲ್ಲೊಂದು’ ಎಂದು ವಿವರಿಸಿದ್ದಾರೆ.

‘ಆ ಹುಲಿ ಮರಿಗಳನ್ನು ಭದ್ರಾ–ಎಸ್‌5146 ಮತ್ತು ಭದ್ರಾ14–ಯು119 ಎಂದು ಗುರುತಿಸ­ಲಾಗಿದೆ. ಅವು 2ರಿಂದ 3 ವರ್ಷ ಪ್ರಾಯದ ಮರಿ­ಗಳು ಎನ್ನುವುದು ಖಚಿತವಾಗಿತ್ತು. ಭದ್ರಾ–ಎಸ್‌5146 ಎಂದು ನಾವು ಗುರುತಿಸಿದ ಹುಲಿಯೇ ಮಹಿಳೆಯನ್ನು ಕೊಂದಿದ್ದು’ ಎಂದು ಹೇಳಿದ್ದಾರೆ. ‘ಒಂದುವೇಳೆ ಹುಲಿಯನ್ನು ಕಾಡಿಗೆ ಬಿಡುವುದೇ ಆಗಿದ್ದರೆ ತಿತಿಮತಿಯಲ್ಲಿ ಸೆರೆ ಸಿಕ್ಕು ಬನ್ನೇರುಘಟ್ಟದಲ್ಲಿ ಬಂಧನದಲ್ಲಿ­ರುವ ದೊಡ್ಡ ಹುಲಿ ಅದಕ್ಕೆ ಅರ್ಹ­ವಾಗಿದೆಯೇ ಹೊರತು ‘ನರಹಂತಕ’­ನಾದ ಈ ಪ್ರಾಯದ ಹುಲಿ ಅಲ್ಲ’ ಎಂದು ಅವರು ತಿಳಿಸಿದ್ದಾರೆ. ‘ಹುಲಿ ವಾಸಸ್ಥಾನ­ವನ್ನು ಸಂರಕ್ಷಿಸಲು ಹಾಗೂ ನರಬಲಿ ಆಗದಂತೆ ನೋಡಿಕೊಳ್ಳಲು ಸಮು­ದಾಯ, ಸರ್ಕಾರದ ಬೆಂಬಲ ಅಗತ್ಯ­ವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಹುಲಿಯನ್ನು ಹಿಡಿಯದಿದ್ದರೆ ಉಗ್ರ ಹೋರಾಟ’
ಖಾನಾಪುರ (ಬೆಳಗಾವಿ ಜಿಲ್ಲೆ):  ‘ತಾಲ್ಲೂಕಿನ ತಳೇವಾಡಿ ಅರಣ್ಯದಲ್ಲಿ ಕಳೆದ ಬುಧವಾರ ಬಿಟ್ಟಿರುವ ನರಹಂತಕ ಹುಲಿಯನ್ನು ತಿಂಗಳಾಂತ್ಯದೊಳಗೆ ಹಿಡಿಯದಿದ್ದರೆ ಅರಣ್ಯ ಇಲಾಖೆಯ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಭೀಮಗಡ ವನ್ಯಧಾಮ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಗ್ರಾಮಗಳ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.

ಹುಲಿ ಹಿಡಿಯಲು ವಿಫಲವಾದ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಪಟ್ಟಣದ ಅರಣ್ಯ ಇಲಾಖೆ ಕಚೇರಿಯ ಎದುರು ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಭೀಮಗಡ ವನ್ಯಜೀವಿ ವಲಯದ ವ್ಯಾಪ್ತಿಯ ಜನರ ಮತ್ತು ತಳೇವಾಡಿ ಅರಣ್ಯ ವ್ಯಾಪ್ತಿಯ ಸ್ಥಳೀಯರು, ಈ ಭಾಗದ ಅರಣ್ಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ನರಹಂತಕ ಹುಲಿಯನ್ನು ಬಿಟ್ಟ ಅರಣ್ಯ ಇಲಾಖೆಯ ಎಸಿಎಫ್ ಪಿ.ಕೆ. ನಾಯ್ಕ ಹಾಗೂ ಇತರ ಅಧಿಕಾರಿಗಳ ಕ್ರಮವನ್ನು ಪ್ರತಿಭಟನಾಕಾರರು ಖಂಡಿಸಿದರು.

Write A Comment