ಕರ್ನಾಟಕ

ಈ ಬೆಟ್ಟ ಕರಗಿಸಲು ಬೇಕು 90 ಕೋಟಿ

Pinterest LinkedIn Tumblr

pvec24mandur-

ಬೆಂಗಳೂರು: ಮಂಡೂರಿಗೆ ನಿತ್ಯವೂ ಬರುತ್ತಿದ್ದ ನೂರಾರು ಟನ್‌ಗಳ ಕಸದ ಭಾರವೇನೋ ಈಗ ತಪ್ಪಿದೆ. ಆದರೆ, ಬೆಟ್ಟದಂತೆ ಹಾಗೇ ಕುಳಿತಿರುವ ತ್ಯಾಜ್ಯದ ರಾಶಿ ಮಾತ್ರ ಗ್ರಾಮಸ್ಥರು ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳನ್ನು ಗುಮ್ಮನಂತೆ ಕಾಡುತ್ತಿದೆ.

ಮಂಡೂರಿನಲ್ಲಿ ಸಂಗ್ರಹವಾಗಿರುವ ಕಸವನ್ನು ಕರಗಿಸಲು ಬಿಬಿಎಂಪಿ ಅಧಿಕಾರಿಗಳು ಸಿದ್ಧಪಡಿಸಿದ ಪ್ರಸ್ತಾವ ಈಗ ನಗರಾಭಿವೃದ್ಧಿ ಇಲಾಖೆ ಪರಿಶೀಲನೆಯಲ್ಲಿದೆ. ಪುನರ್‌ಬಳಕೆ ಮಾಡಬಹುದಾದ ವಸ್ತುಗಳನ್ನೆಲ್ಲ ಪ್ರತ್ಯೇಕಗೊಳಿಸಿದ ಮೇಲೆ ಉಳಿಯುವ ತಿರಸ್ಕೃತ ತ್ಯಾಜ್ಯದ ಮೇಲೆ ಮಣ್ಣು ಹಾಕಿ ಮುಚ್ಚುವ (ಬಯೊಮೈನಿಂಗ್‌) ಯೋಜನೆ ಈ ಪ್ರಸ್ತಾವದಲ್ಲಿದೆ.

‘ಕಸ ಕರಗಿಸುವ ಪ್ರಕ್ರಿಯೆಗೆ ಐದು ವರ್ಷ ಬೇಕಿದ್ದು, ₨ 90 ಕೋಟಿ ಅನುದಾನದ ಅಗತ್ಯವೂ ಇದೆ’ ಎಂದು ಪ್ರಸ್ತಾವದಲ್ಲಿ ವಿವರಿಸ­ಲಾಗಿದೆ. ‘ನಗರಾಭಿವೃದ್ಧಿ ಇಲಾಖೆಯಿಂದ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕ ಬಳಿಕ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕು. ಈ ಎಲ್ಲ ಪ್ರಕ್ರಿಯೆ ಮುಗಿದು ಕೆಲಸ ಶುರುವಾಗಲು ಕಾಲಾವಕಾಶ ಅಗತ್ಯ­ವಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ಹೈಕೋರ್ಟ್‌ ನೇಮಕ ಮಾಡಿದ್ದ ತಜ್ಞರ ಸಮಿತಿ ಸಹ ಮಂಡೂರಿನ ಕಸದ ಸಮಸ್ಯೆಗೆ ಬಯೊಮೈನಿಂಗ್‌ ಉತ್ತಮ ಪರಿಹಾರ ಎಂದು ಅಭಿಪ್ರಾಯಪಟ್ಟಿತ್ತು. ಲೋಹ, ಪ್ಲಾಸ್ಟಿಕ್‌ ಸೇರಿದಂತೆ ಉಪಯುಕ್ತ ಎನಿಸುವಂತಹ ಘನ ಪದಾರ್ಥಗಳನ್ನೆಲ್ಲ ತೆಗೆದು ಮಿಕ್ಕ ತ್ಯಾಜ್ಯದ ಮೇಲೆ ಮಣ್ಣಿನ ಹೊದಿಕೆ ಹಾಕಬೇಕು ಹಾಗೂ ಈ ಪ್ರಕ್ರಿಯೆ ನಡೆಸುವಾಗ ನಗರ ಘನತ್ಯಾಜ್ಯ ನಿರ್ವಹಣೆ ಕಾನೂನು–2000ರ ನಿಯಮಾವಳಿ ಪಾಲನೆ ಮಾಡಬೇಕು ಎಂದು ಸಲಹೆ ನೀಡಿತ್ತು.

‘ಮಂಡೂರಿನಲ್ಲಿ 18.91 ಲಕ್ಷ ಟನ್‌ನಷ್ಟು ತ್ಯಾಜ್ಯ ಸಂಗ್ರಹವಾಗಿದೆ. ಆ ಕಸದ ಬೆಟ್ಟವನ್ನು ಕರಗಿಸಲು ವಿಳಂಬ ಮಾಡಿ­ದಷ್ಟೂ ಮಂಡೂರು ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸಮಸ್ಯೆ ಬಿಗ­ಡಾಯಿ­ಸುತ್ತದೆ. ಕಸ­ದಿಂದ ಬಸಿದು ಭೂಮಿ ಒಡಲು ಸೇರುತ್ತಿರುವ ದ್ರಾವಣ, ಹೆಚ್ಚುತ್ತಿರುವ ಸೊಳ್ಳೆ ಹಾಗೂ ಬೀದಿನಾಯಿಗಳಿಂದ ಅಪಾಯ ತಪ್ಪಿದ್ದಲ್ಲ’ ಎಂದು ಸಮಿತಿ ತನ್ನ ವರದಿಯಲ್ಲಿ ವಿವರಿಸಿತ್ತು.

‘ಕಸದ ರಾಶಿಯಲ್ಲಿ ಶೇ 30ರಷ್ಟು ನಿಷ್ಕ್ರಿಯ (ಹೂಳು ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯ) ಪದಾರ್ಥವಿದೆ. ಅದರಿಂದ ಯಾವುದೇ ಅಪಾಯ ಇಲ್ಲ. ಅದನ್ನು ಸಾವಯವ ಗೊಬ್ಬರದ ರೂಪದಲ್ಲಿ ಹೊಲ­ಗಳಿಗೂ ಬಳಕೆ ಮಾಡಲು ಸಾಧ್ಯವಿದೆ. ಶೇ 15ರಷ್ಟು ಪ್ಲಾಸ್ಟಿಕ್‌ ಹಾಗೂ ಲೋಹದ ಪದಾರ್ಥಗಳು ಇವೆ. ಅದನ್ನು ಪುನರ್‌ಬಳಕೆ ಮಾಡಲು ಸಾಧ್ಯ. ಮಿಕ್ಕ ತ್ಯಾಜ್ಯವು ಸಾವಯವ ಸ್ವರೂಪದ್ದು. ಅದರಲ್ಲಿ ರಾಸಾಯನಿಕವೂ ಸೇರಿದೆ. ಅದರಿಂದ ಇಂಧನ ತೆಗೆಯು­ವಾಗ ಶೇ 20­ರಷ್ಟು ತಿರಸ್ಕೃತ ತ್ಯಾಜ್ಯ ಹೊರ ಬರುತ್ತದೆ. ಅದನ್ನು ಹೂಳದೆ ವಿಧಿಯಿಲ್ಲ’ ಎಂದು ತಿಳಿಸಿತ್ತು.

ಬಿಬಿಎಂಪಿಯಿಂದ ಟೆಂಡರ್‌ ಕರೆದು ಕಾಮಗಾರಿಯನ್ನು ಗುತ್ತಿಗೆ ನೀಡುವಾಗ ಸಂಸ್ಥೆಯ ಕಾರ್ಯಕ್ಷಮತೆಯನ್ನು ಖಚಿತಪಡಿಸಿ­ಕೊಳ್ಳು­ವುದು ಕಡ್ಡಾಯ. ಕನಿಷ್ಠ ಮೊತ್ತ ದಾಖಲಿಸಿದ ಏಕೈಕ ಕಾರಣಕ್ಕೆ ಅಂತಹ ಸಂಸ್ಥೆಗೆ ಗುತ್ತಿಗೆ ನೀಡುವಂತಿಲ್ಲ ಎಂದು ಕೂಡ ಸೂಚಿಸಿತ್ತು. ತಜ್ಞರು ನೀಡಿರುವ ಈ ವರದಿಯನ್ನು ಆಧರಿಸಿಯೇ ಬಿಬಿಎಂಪಿ ಇದೀಗ ಪ್ರಸ್ತಾವ ಸಿದ್ಧಪಡಿಸಿದೆ.
ಕಾನೂನು ಏನು ಹೇಳುತ್ತದೆ?

ನಗರ ಘನತ್ಯಾಜ್ಯ ನಿರ್ವಹಣೆ ಕಾನೂನು–2000ರಲ್ಲಿ ಭೂಭರ್ತಿ ತ್ಯಾಜ್ಯ ಸಂಗ್ರಹ ಘಟಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಾವಳಿ ರೂಪಿ­ಸ­ಲಾಗಿದೆ. ಸಾವಯವ ಸ್ವರೂಪದಲ್ಲಿರದ, ನಿಷ್ಕ್ರಿಯ ಪದಾರ್ಥ­ವನ್ನು ಮಾತ್ರ ಹೂಳಬಹುದು. ಪುನರ್‌ಬಳಕೆ ಮಾಡಬಹು­ದಾದ ಇಲ್ಲವೆ ಸಂಸ್ಕರಿ­ಸಬಹುದಾದ ಯಾವುದೇ ಪದಾರ್ಥವನ್ನೂ ಹೂಳುವಂತಿಲ್ಲ ಎಂದು ನಿಯಮ ಸ್ಪಷ್ಟವಾಗಿ ತಿಳಿಸುತ್ತದೆ. ಸಮ್ಮಿಶ್ರ ಕಸವನ್ನು ಯಾವುದೇ ಕಾರಣಕ್ಕೂ ಮಣ್ಣಿನ ಅಡಿಯೊಳಗೆ ಹಾಕು­ವಂತಿಲ್ಲ. ತ್ಯಾಜ್ಯವನ್ನು ಹೂಳುವ ಮುನ್ನ ಅದರಲ್ಲಿನ ಎಲ್ಲ ಪದಾರ್ಥಗಳನ್ನು ಪ್ರತ್ಯೇಕಗೊಳಿಸಿರಬೇಕು. ಪೂರ್ಣ ಕಾರ್ಯ ಮುಗಿಯುವವರೆಗೆ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ನೀರು ಕಲುಷಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ನಿಯಮ ಹೇಳುತ್ತದೆ.

ಡೀಸೆಲ್‌, ಸ್ಟೀಲ್‌ ಹಾಗೂ ಕಾರ್ಮಿಕರ ವೆಚ್ಚವನ್ನು ಗಣನೆಗೆ ತೆಗೆದು­ಕೊಂಡು ಪ್ರತಿ ಟನ್‌ ಕಸ ಸಂಸ್ಕರಣೆಗಾಗಿ ₨ 380 ರಿಂದ ₨ 420ರ ವರೆಗೆ ವ್ಯಯವಾಗಬಹುದು ಎಂದು ಅಂದಾಜಿಸಲಾಗಿದೆ. ಕಸ ಕರಗಿ­ಸಲು ಕಾಲಮಿತಿ ನಿಗದಿ ಮಾಡಬೇಕು ಹಾಗೂ ಗುರಿ ತಲುಪಲು ಎಡವಿದರೆ ದಂಡ ವಿಧಿಸಬೇಕು ಎಂಬ ನಿಯಮವನ್ನೂ ಅಳವಡಿಸಲು ನಿರ್ಧರಿಸಲಾಗಿದೆ.

ಕಸ ಸಂಸ್ಕರಣೆಗೆ ಗುತ್ತಿಗೆ ಪಡೆದ ಯಾವುದೇ ಸಂಸ್ಥೆ ಅದನ್ನು ಮರು ಗುತ್ತಿಗೆ ನೀಡುವಂತಿಲ್ಲ. ಮರುಬಳಕೆ ಮಾಡಬಹುದಾದ ಪದಾರ್ಥ­ಗಳ ಸಂಗ್ರಹ ಹಾಗೂ ವಿಲೇವಾರಿ ಗುತ್ತಿಗೆ ಪಡೆದ ಸಂಸ್ಥೆಯದ್ದೇ ಹೊಣೆ ಆಗಿರಲಿದೆ. ದಕ್ಷತೆಗೆ ಹೆಸರಾದ ಮೂರನೇ ಸಂಸ್ಥೆಯೊಂದು ಕಸದ ರಾಶಿ ಕರಗಿಸುವ ಕಾರ್ಯವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಿದ ಬಳಿಕವೇ ಗುತ್ತಿಗೆದಾರರಿಗೆ ಹಣ ಸಂದಾಯವಾಗಲಿದೆ. ಗುತ್ತಿಗೆ ಒಪ್ಪಂದದಲ್ಲೇ ಈ ನಿಯಮ ಇರಲಿದೆ.

ಮತ್ತೆ ಸಮೀಕ್ಷೆ: ಮಂಡೂರಿನಲ್ಲಿ 18.91 ಲಕ್ಷ ಟನ್‌ನಷ್ಟು ತ್ಯಾಜ್ಯ ಸಂಗ್ರಹ ಇದೆ ಎನ್ನುವ ಅಂದಾಜಿದೆ. ಆದರೆ, ವಾಸ್ತವ ಸ್ಥಿತಿಯನ್ನು ತಿಳಿದು­ಕೊಳ್ಳಲು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಎಂಜಿನಿಯರ್‌ಗಳು ಶೀಘ್ರವೇ ಸಮಗ್ರ ಸಮೀಕ್ಷೆ ಕಾರ್ಯ ನಡೆಸಲಿ­ದ್ದಾರೆ. ಸಂಗ್ರಹವಾಗಿರುವ ಕಸದ ಅಂದಾಜು ತೂಕ ಹಾಗೂ ಅದರ ಕ್ಯೂಬಿಕ್‌ ಮೀಟರ್‌ನ ಮರು ಲೆಕ್ಕ ಹಾಕಲಿದ್ದಾರೆ.

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಎಂ.ಆರ್‌. ವೆಂಕಟೇಶ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿ­­ದಾಗ, ‘ಕಸದ ರಾಶಿ ಕರಗಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು ನಿಜ. ಕಸದ ವಾಸ್ತವ ಚಿತ್ರಣ ತಿಳಿದುಕೊಳ್ಳಲು ಶೀಘ್ರವೇ ಮರುಸಮೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದರು.

ಮುಖ್ಯಾಂಶಗಳು

* ಸಂಗ್ರಹವಾದ ತ್ಯಾಜ್ಯ 18.91 ಲಕ್ಷ ಟನ್‌
* ‘ವಾಸ್ತವ’ ತಿಳಿಯಲು ಮರು ಸಮೀಕ್ಷೆ
* ‘ಬಯೊ ಮೈನಿಂಗ್‌ ಯೋಜನೆ’ಗೆ ಪ್ರಸ್ತಾವ
* ಪ್ರತಿ ಟನ್‌ ಕಸ ಸಂಸ್ಕರಣೆಗೆ ₨420 ಅವಶ್ಯ
* ಕಸ ಪೂರ್ಣ ಕರಗಿಸಲು 5 ವರ್ಷ
* ಕಾಲಮಿತಿ ತಪ್ಪಿದರೆ ಗುತ್ತಿಗೆದಾರರಿಗೆ ದಂಡ
* ಮಣ್ಣಾಗಲಿದೆ ಶೇ 20ರಷ್ಟು   ತ್ಯಾಜ್ಯಪದಾರ್ಥ

Write A Comment